
ಗಾಜಾ: ಕಳೆದ ಮೂರು ದಿನಗಳಲ್ಲಿ ಅಪೌಷ್ಟಿಕತೆ ಮತ್ತು ಹಸಿವಿನಿಂದ 21 ಪ್ಯಾಲೆಸ್ತೀನಿಯರ ಮಕ್ಕಳು ಸಾವನ್ನಪ್ಪಿರುವುದಾಗಿ ಗಾಜಾ ನಗರದ ಅಲ್-ಶಿಫಾ ಆಸ್ಪತ್ರೆಯ ಮುಖ್ಯಸ್ಥರು ಮಂಗಳವಾರ ಹೇಳಿದ್ದಾರೆ.
ಕಳೆದ 72 ಗಂಟೆಗಳಲ್ಲಿ ಗಾಜಾ ನಗರದ ಅಲ್-ಶಿಫಾ, ದೇರ್ ಅಲ್-ಬಲಾಹ್‌ನ ಅಲ್-ಅಕ್ಸಾ ಹುತಾತ್ಮರ ಆಸ್ಪತ್ರೆ ಮತ್ತು ಖಾನ್ ಯೂನಿಸ್‌ನ ನಾಸರ್ ಆಸ್ಪತ್ರೆ ಸೇರಿದಂತೆ ಗಾಜಾದ ಆಸ್ಪತ್ರೆಗಳಲ್ಲಿ ಈ ಸಾವುಗಳು ದಾಖಲಾಗಿವೆ ಎಂದು ಮೊಹಮ್ಮದ್ ಅಬು ಸಲ್ಮಿಯಾ ಸುದ್ದಿಗಾರರಿಗೆ ತಿಳಿಸಿದರು.
ಗಾಜಾದಲ್ಲಿ ಜನರನ್ನು ಜೀವಂತವಾಗಿಡುವ ಕೊನೆಯ ಜೀವಸೆಲೆಗಳು ಕುಸಿಯುತ್ತಿವೆ. ಮಕ್ಕಳು ಮತ್ತು ವಯಸ್ಕರಲ್ಲಿ ಅಪೌಷ್ಟಿಕತೆಯ ವರದಿಗಳು ಹೆಚ್ಚುತ್ತಿವೆ ಎಂದು ಯುಎನ್ ಸೆಕ್ರೆಟರಿ ಜನರಲ್ ಆಂಟೋನಿಯೊ ಗುಟೆರೆಸ್ ಸೋಮವಾರ ಸಂಜೆ ಎಚ್ಚರಿಕೆ ನೀಡಿದ್ದರು.
ಗಾಜಾದಲ್ಲಿನ ಆಸ್ಪತ್ರೆಗಳಲ್ಲಿ ಅಪೌಷ್ಟಿಕತೆ ಮತ್ತು ಹಸಿವಿನ ಹೊಸ ಪ್ರಕರಣಗಳು ಪ್ರತಿ ಕ್ಷಣವೂ ಆಗಮಿಸುತ್ತಿವೆ. ಸಾವಿನ ಸಂಖ್ಯೆಯೂ ಆತಂಕಕಾರಿಯಾಗಿ ಹೆಚ್ಚಾಗುತ್ತಿದೆ ಎಂದು ಅಬು ಸಲ್ಮಿಯಾ ತಿಳಿಸಿದ್ದಾರೆ.
ಆರು ವಾರಗಳ ಕದನ ವಿರಾಮ ವಿಸ್ತರಿಸುವ ಮಾತುಕತೆ ಮುರಿದುಬಿದ್ದ ನಂತರ, ಇಸ್ರೇಲ್ ಈ ವರ್ಷ ಮಾರ್ಚ್ 2 ರಂದು ಗಾಜಾದ ಮೇಲೆ ಸಂಪೂರ್ಣ ದಿಗ್ಬಂಧನ ವಿಧಿಸಿತ್ತು. ಮೇ ಅಂತ್ಯದಲ್ಲಿ ಟ್ರಕ್‌ಗಳಿಗೆ ಮತ್ತೆ ಅನುಮತಿ ನೀಡುವವರೆಗೆ ಬೇರೆ ಯಾವುದಕ್ಕೂ ಅನುಮತಿ ನೀಡಿರಲಿಲ್ಲ. ಆದರೆ ಕದನ ವಿರಾಮದ ಸಮಯದಲ್ಲಿ ದಾಸ್ತಾನು ಸಂಗ್ರಹ ಕ್ಷೀಣಿಸಿತ್ತು.
ಅಕ್ಟೋಬರ್ 2023 ರಲ್ಲಿ ಯುದ್ಧ ಪ್ರಾರಂಭವಾದಾಗಿನಿಂದ ಗಾಜಾದಲ್ಲಿನ ಎರಡು ಮಿಲಿಯನ್‌ಗಿಂತಲೂ ಹೆಚ್ಚು ನಿವಾಸಿಗಳು ಆಹಾರ ಪದಾರ್ಥಗಳಿಗಾಗಿ ತೀವ್ರ ತೊಂದರೆ ಎದುರಿಸುತ್ತಿದ್ದಾರೆ.
ಕಳೆದ ವಾರ ತೀವ್ರ ಹಸಿವು ಮತ್ತು ಅಪೌಷ್ಟಿಕತೆ" ಯಿಂದ ಕನಿಷ್ಠ ಮೂರು ಶಿಶುಗಳು ಸಾವನ್ನಪ್ಪಿವೆ ಎಂದು ಗಾಜಾದ ನಾಗರಿಕ ರಕ್ಷಣಾ ಸಂಸ್ಥೆಯು ಭಾನುವಾರ ಹೇಳಿತ್ತು.ಯುದ್ಧವನ್ನು ತಕ್ಷಣವೇ ಕೊನೆಗೊಳಿಸಬೇಕು, ಒತ್ತೆಯಾಳುಗಳನ್ನು ಬಿಡುಗಡೆ ಮಾಡಬೇಕು ಎಂದು ಇಸ್ರೇಲಿ ಮಿತ್ರರಾಷ್ಟ್ರಗಳಾದ ಬ್ರಿಟನ್, ಫ್ರಾನ್ಸ್, ಆಸ್ಟ್ರೇಲಿಯಾ ಮತ್ತು ಕೆನಡಾ ಸೇರಿದಂತೆ ಎರಡು ಡಜನ್‌ಗಿಂತಲೂ ಹೆಚ್ಚು ದೇಶಗಳು ಸೋಮವಾರ ಇಸ್ರೇಲ್ ನ್ನು ಒತ್ತಾಯಿಸಿವೆ.
ಗಾಜಾ ನಗರದ ಕಮ್ಯೂನಿಟಿ ಕಿಚನ್ ನಲ್ಲಿ ಆಹಾರ ಪದಾರ್ಥ ಪಡೆಯಲು ಪ್ಯಾಲೆಸ್ತೀನಿಯನ್ನರು ಹೆಣಗಾಡುತ್ತಿದ್ದಾರೆ.
Advertisement