
ವಾಷಿಂಗ್ಟನ್ ಡಿಸಿ: ಚೊಚ್ಚಲ ಬಾರಿಗೆ ಐಪಿಎಲ್ ಟ್ರೋಫಿ ಮುಡಿಗೇರಿಸಿಕೊಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ವಿರಾಟ್ ಕೊಹ್ಲಿಯನ್ನು ಕಾಂಗ್ರೆಸ್ ಸಂಸದ ಶಶಿ ತರೂರ್ ಅಭಿನಂದಿಸಿದ್ದಾರೆ.
ವಾಷಿಂಗ್ಟನ್ ಡಿಸಿಯಲ್ಲಿ ಲ್ಯಾಡಿಂಗ್ ಆದಾಗ ಮೊದಲು ಐಪಿಎಲ್ ಫೈನಲ್ ಪಂದ್ಯದ ಸ್ಕೋರ್ ನ್ನು ತನ್ನ ಮೊಬೈಲ್ ನಲ್ಲಿ ಪರಿಶೀಲಿಸಿದ್ದಾಗಿ ಅವರು ತಿಳಿಸಿದ್ದಾರೆ. ಶಶಿ ತರೂರ್ ನೇತೃತ್ವದ ಸರ್ವ ಪಕ್ಷ ನಿಯೋಗ ಅಮೆರಿಕದ ವಾಷಿಂಗ್ಟನ್ ಡಿಸಿಯಲ್ಲಿದೆ. ಇದರಲ್ಲಿ ಬೆಂಗಳೂರಿನ ಸಂಸದ ತೇಜಸ್ವಿ ಸೂರ್ಯ ಕೂಡಾ ಇದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಫೋಸ್ಟ್ ಮಾಡಿರುವ ಶಶಿ ತರೂರ್, 18 ವರ್ಷಗಳ ನಂತರ ಟ್ರೋಫಿಗೆ ಕೈಹಾಕಿದ್ದಕ್ಕೆ ತುಂಬಾ ಸಂತಸವಾಗುತ್ತಿದೆ ಎಂದು ಅವರು ಬರೆದುಕೊಂಡಿದ್ದಾರೆ. ವಿಮಾನದ ಒಳಗಡೆ ಕುಳಿತು ತನ್ನ ಮೊಬೈಲ್ ಫೋನ್ ನಲ್ಲಿ ಸ್ಕೋರ್ ಪರಿಶೀಲಿಸುತ್ತಿರುವ ಫೋಟೋವೊಂದನ್ನು ಅವರು ಪೋಸ್ಟ್ ಮಾಡಿದ್ದಾರೆ.
ಅಹಮದಾಬಾದಿನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಮಂಗಳವಾರ ರಾತ್ರಿ ನಡೆದ ಐಪಿಎಲ್ ಫೈನಲ್ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು ಆರು ರನ್ ಗಳ ಅಂತರದಿಂದ ಸೋಲಿಸುವ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ಟ್ರೋಫಿಯನ್ನು ಮುಡಿಗೇರಿಸಿಕೊಂಡಿತ್ತು.
ಶಶಿ ತರೂರ್ ಅವರೊಂದಿಗೆ ಸಂಸದ ತೇಜಸ್ವಿ ಸೂರ್ಯ ಕೂಡಾ ಆರ್ ಸಿಬಿ ತಂಡಕ್ಕೆ ಶುಭಾಶಯ ಕೋರುವ ವಿಡಿಯೋ ಫೋಸ್ಟ್ ಮಾಡಿದ್ದಾರೆ.
ಇದು ಮರೆಯಲಾಗದ ಕ್ಷಣವಾಗಿದೆ. RCB ಕೇವಲ ಟ್ರೋಫಿಯನ್ನು ಗೆದ್ದಿಲ್ಲ. ನಗರದ ಕನಸನ್ನು ನನಸು ಮಾಡಿದ್ದಾರೆ. ಒತ್ತಡದ ಸಂದರ್ಭದಲ್ಲಿ ಸಂವೇದನಾಶೀಲ ಪ್ರದರ್ಶನಕ್ಕಾಗಿ ಬೌಲಿಂಗ್ ವಿಭಾಗಕ್ಕೆ ಅಭಿನಂದನೆ ಸಲ್ಲಿಸಿದ್ದು, ಈ ರಾತ್ರಿ ಎಂದೆಂದಿಗೂ ನೆನಪಿನಲ್ಲಿ ಉಳಿಯುತ್ತದೆ ಎಂದು ಬರೆದುಕೊಂಡಿದ್ದಾರೆ.
Advertisement