
ವಾಷಿಂಗ್ ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರುದ್ಧ ಗಂಭೀರ ಆರೋಪ ಮಾಡಿದ್ದ ಉದ್ಯಮಿ ಎಲಾನ್ ಮಸ್ಕ್ ಈಗ ತಮ್ಮ ಪೋಸ್ಟ್ ನ್ನು ಎಕ್ಸ್ ಜಾಲತಾಣದಿಂದ ತೆಗೆದುಹಾಕಿದ್ದಾರೆ.
ಎಲಾನ್ ಮಸ್ಕ್ ಮತ್ತು ಡೊನಾಲ್ಡ್ ಟ್ರಂಪ್ ಸಾರ್ವಜನಿಕವಾಗಿ ವಾಗ್ವಾದ ನಡೆಸುತ್ತಿದ್ದಂತೆ, ಅಚ್ಚರಿಯ ಹೆಸರು ಸಾರ್ವಜನಿಕವಾಗಿ ಚರ್ಚೆಗೆ ಗುರಿಯಾಗಿ, ಅಮೆರಿಕ ಅಧ್ಯಕ್ಷರನ್ನು ಇಕ್ಕಟ್ಟಿಗೆ ಸಿಲುಕಿಸಿತು. ಆ ಹೆಸರು ದಿವಂಗತ ಲೈಂಗಿಕ ಅಪರಾಧಿ ಜೆಫ್ರಿ ಎಪ್ಸ್ಟೀನ್. ಟ್ರಂಪ್ ಹೆಸರು ಇದ್ದ ಕಾರಣ ಪ್ರಕರಣಕ್ಕೆ ಸಂಬಂಧಿಸಿದ ಫೈಲ್‌ಗಳನ್ನು ಎಂದಿಗೂ ಬಹಿರಂಗಪಡಿಸಲಾಗಿಲ್ಲ ಎಂದು ಟೆಸ್ಲಾ ಸಿಇಒ ಆರೋಪಿಸಿದ್ದರು.
ಎಪ್ಸ್ಟೀನ್ ಫೈಲ್‌ಗಳಲ್ಲಿ ಟ್ರಂಪ್ ಅವರ ಹೆಸರನ್ನು ಉಲ್ಲೇಖಿಸಲಾಗಿದೆ ಎಂದು ಹೇಳಿದ್ದ ಪೋಸ್ಟ್ ನ್ನು ಮಸ್ಕ್ ಈಗ ಅಳಿಸಿದ್ದಾರೆ.
"ಬಿಗ್ ಬ್ಯೂಟಿಫುಲ್ ಬಿಲ್" ಬಗ್ಗೆ ಟ್ರಂಪ್ ಅವರೊಂದಿಗೆ ಭಿನ್ನಾಭಿಪ್ರಾಯ ಹೊಂದಿರುವ ಮಾಜಿ ಸಲಹೆಗಾರ ಮಸ್ಕ್, ಕಳೆದ ತಿಂಗಳು ಯುಎಸ್ ಆಡಳಿತವನ್ನು ತೊರೆದು ಸರ್ಕಾರಿ ದಕ್ಷತೆ ಇಲಾಖೆ (DOGE) ಯನ್ನು ಮುನ್ನಡೆಸಿದಾಗ ಉದ್ಯಮಕ್ಕೆ ಉಂಟಾದ ನಷ್ಟವನ್ನು ಸರಿದೂಗಿಸಲು ತನ್ನ ವ್ಯವಹಾರದ ಮೇಲೆ ಹೆಚ್ಚು ಗಮನಹರಿಸಿದರು.
"ಡೊನಾಲ್ಡ್ ಟ್ರಂಪ್ ಎಪ್ಸ್ಟೀನ್ ಫೈಲ್‌ಗಳಲ್ಲಿದ್ದಾರೆ. ಅವುಗಳನ್ನು ಸಾರ್ವಜನಿಕಗೊಳಿಸದಿರಲು ಅದೇ ನಿಜವಾದ ಕಾರಣ. ಒಳ್ಳೆಯ ದಿನ, DJT!" ಎಂದು ಮಸ್ಕ್ ತನ್ನ X ಪ್ಲಾಟ್‌ಫಾರ್ಮ್‌ನಲ್ಲಿ ಬರೆದಿದ್ದನ್ನು ಈಗ ಅಳಿಸಿರುವುದು ಕುತೂಹಲ ಮೂಡಿಸಿದೆ.
ಮಸ್ಕ್ ಈ ಪೋಸ್ಟ್ ಮಾಡಿದ ಬಳಿಕ 'ಸಾಮಾಜಿಕ ಮಾಧ್ಯಮದಲ್ಲಿ ಟ್ರಂಪ್- ಮಸ್ಕ್ ಪರಸ್ಪರ ಟೀಕಾ ಪ್ರಹಾರದಲ್ಲಿ ತೊಡಗಿದ್ದರು. "ಸತ್ಯ ಹೊರಬರುವ" ಭವಿಷ್ಯಕ್ಕಾಗಿ ತಮ್ಮ ಅನುಯಾಯಿಗಳು ಈ ಪೋಸ್ಟ್ ನ್ನು ಗುರುತಿಸಬೇಕು ಎಂದು ಮಸ್ಕ್ ಟ್ರಂಪ್ ಅವರನ್ನು ಟೀಕಿಸುತ್ತಾ ಹೇಳಿದ್ದರು.
ಮಸ್ಕ್ ಅವರ ಟೀಕೆಗೆ ಪ್ರತಿಕ್ರಿಯಿಸಿದ ಡೊನಾಲ್ಡ್ ಟ್ರಂಪ್, ಟ್ರೂತ್ ಸೋಷಿಯಲ್‌ನಲ್ಲಿ ಪೋಸ್ಟ್‌ನಲ್ಲಿ, "ಎಲೋನ್ ನನ್ನ ವಿರುದ್ಧ ತಿರುಗಿಬಿದ್ದಿದ್ದಕ್ಕೆ ನನಗೆ ಅಭ್ಯಂತರವಿಲ್ಲ, ಆದರೆ ಅವರು ತಿಂಗಳುಗಳ ಹಿಂದೆಯೇ ಹಾಗೆ ಮಾಡಬೇಕಾಗಿತ್ತು" ಎಂದು ಬರೆದಿದ್ದರು.
ಈ ಘಟನೆಗೆ ಸಂಬಂಧಿಸಿದ ಇತ್ತೀಚಿನ ಬೆಳವಣಿಗೆಯಲ್ಲಿ ಮಸ್ಕ್ ಟ್ರಂಪ್ ವಿರುದ್ಧ ಹಾಕಿದ್ದ ಪೋಸ್ಟ್ ನ್ನು ಡಿಲೀಟ್ ಮಾಡುವ ಮೂಲಕ ಟ್ರಂಪ್ ಜೊತೆ ರಾಜಿಗೆ ಮುಂದಾದರೇ? ಎಂಬ ಪ್ರಶ್ನೆ ಮೂಡಿದೆ.
Advertisement