
ಜೆರುಸೆಲೆಂ: ಇಸ್ರೇಲ್-ಇರಾನ್ ನಡುವಿನ ಸಂಘರ್ಷ ಭಾನುವಾರ ಮೂರನೇ ದಿನಕ್ಕೆ ಕಾಲಿಟ್ಟಿದ್ದು, ಎರಡು ಕಡೆಗಳಲ್ಲಿ ಕ್ಷಿಪಣಿ ದಾಳಿ ಮುಂದುವರೆದಿದೆ. ಸಾವಿನ ಸಂಖ್ಯೆ 140 ದಾಟಿದ್ದು, ವಿಸ್ತರಿತ ಗುರಿಯೊಂದಿಗೆ ಧೀರ್ಘಕಾಲದ ಬದ್ಧವೈರಿಗಳ ನಡುವಣ ಹಗೆತನ ಮತ್ತಷ್ಟು ತೀವ್ರಗೊಳ್ಳುವ ಲಕ್ಷಣಗಳು ಕಾಣುತ್ತಿದೆ.
ಇರಾನ್‌ನ ಪರಮಾಣು ಮತ್ತು ರಕ್ಷಣಾ ಕೇಂದ್ರಗಳನ್ನು ದುರ್ಬಲಗೊಳಿಸುವ ಉದ್ದೇಶದಿಂದ ಶುಕ್ರವಾರ ಇಸ್ರೇಲ್ ನಡೆಸಿದ ದೊಡ್ಡ ಮಟ್ಟದ ದಾಳಿಯಿಂದ ಹೆಚ್ಚಿನ ಜನರು ಸಾವನ್ನಪ್ಪಿದ್ದರು. ತದನಂತರ ಇರಾನ್ ಪ್ರತೀಕಾರದ ದಾಳಿ ಆರಂಭಿಸಿದ್ದರಿಂದ ಉಭಯ ರಾಷ್ಟ್ರಗಳ ನಡುವಣ ಇಡೀ ದಿನ ದಾಳಿ ನಡೆದಿದೆ.
ಇರಾನ್ ನ ತೈಲ ಹಾಗೂ ನೈಸರ್ಗಿಕ ಅನಿಲ ಉದ್ಯಮಗಳನ್ನು ಗುರಿಯಾಗಿರಿಸಿಕೊಂಡು ಇಸ್ರೇಲ್ ದಾಳಿ ನಡೆಸಿದ್ದು, ಮಧ್ಯ ಪ್ರಾಚ್ಯ ರಾಷ್ಟ್ರಗಳಲ್ಲಿ ಸಂಘರ್ಷದ ಕಳವಳ ಉಂಟಾಗಿದ್ದು, ತಕ್ಷಣವೇ ಎರಡು ರಾಷ್ಟ್ರಗಳು ಸಂಘರ್ಷ ಕೊನೆಗಾಣಿಸಲು ಮುಂದಾಗಬೇಕು ಎಂದು ವಿಶ್ವದ ಪ್ರಮುಖ ನಾಯಕರು ಒತ್ತಾಯಿಸಿದ್ದಾರೆ.
ಇತ್ತೀಚಿನ ಬೆಳವಣಿಗೆಗಳು ಇಲ್ಲಿವೆ: ಪೂರ್ವ ಇರಾನ್‌ನ ಮಶ್ಹದ್ ವಿಮಾನ ನಿಲ್ದಾಣದ ಮೇಲೆ ವೈಮಾನಿಕ ದಾಳಿಯನ್ನು ನಡೆಸಿರುವುದಾಗಿ ಇಸ್ರೇಲಿ ಮಿಲಿಟರಿ ಹೇಳಿದೆ. ಇದು ಮಿಲಿಟರಿ ಕಾರ್ಯಾಚರಣೆಯ ಪ್ರಾರಂಭದ ನಂತರ ಸುಮಾರು 2,300 ಕಿಮೀ (1,429 ಮೈಲುಗಳು) ದೂರ ನಡೆಸಿದ ಅತ್ಯಂತ ದೊಡ್ಡ ದಾಳಿಯಾಗಿದೆ ಎಂದು ಹೇಳಿಕೊಂಡಿದೆ.
ಹೆಚ್ಚುತ್ತಿರುವ ಸಾವಿನ ಸಂಖ್ಯೆ: ವಸತಿ ಪ್ರದೇಶಗಳಲ್ಲಿಯೂ ದಾಳಿ ನಡೆಯುತ್ತಿದ್ದು, ಎರಡೂ ಕಡೆಗಳಲ್ಲಿ ಸಾವಿನ ಸಂಖ್ಯೆ ಹೆಚ್ಚಿದೆ. ಇರಾನ್ ಶನಿವಾರ ತಡರಾತ್ರಿಯಿಂದ ನಡೆಸಿದ ಕ್ಷಿಪಣಿ ದಾಳಿಯಲ್ಲಿ ಮಕ್ಕಳು ಸೇರಿದಂತೆ 10 ಮಂದಿ ಮೃತಪಟ್ಟಿದ್ದಾರೆ
ಟೆಹರಾನ್ ಪ್ರತೀಕಾರದ ದಾಳಿ ಪ್ರಾರಂಭಿಸಿದಾಗಿನಿಂದ ಒಟ್ಟಾರೆ 13 ಜನರು ಸಾವನ್ನಪ್ಪಿದ್ದು, ಇತರ 380 ಮಂದಿ ಗಾಯಗೊಂಡಿದ್ದಾರೆ. ನಾಗರಿಕರ ಸಾವಿಗೆ ಇರಾನ್ ಭಾರಿ ಬೆಲೆ ತೆರಬೇಕಾಗುತ್ತದೆ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಹೇಳಿದ್ದಾರೆ.
ಇರಾನ್ ನಲ್ಲಿ 128 ಜನರ ಸಾವು: ಇರಾನ್ ಮತ್ತೆ ದಾಳಿ ಆರಂಭಿಸಿದ ನಂತರ ಭಾನುವಾರ ಮಧ್ಯಾಹ್ನ ಇಸ್ರೇಲ್‌ನ ಅನೇಕ ಪ್ರದೇಶಗಳಲ್ಲಿ ಸೈರನ್‌ಗಳು ಮೊಳಗಿದವು. ಶುಕ್ರವಾರದಿಂದ ಶನಿವಾರದವರೂ ಇರಾನ್ ಮೇಲೆ ಇಸ್ರೇಲಿ ನಡೆಸಿದ ದಾಳಿಯಲ್ಲಿ ಮಕ್ಕಳು ಸೇರಿದಂತೆ 128 ಜನರು ಸಾವನ್ನಪ್ಪಿದ್ದು, ನೂರಾರು ಜನರು ಗಾಯಗೊಂಡಿದ್ದಾರೆ ಎಂದು ಆರೋಗ್ಯ ಸಚಿವಾಲಯವನ್ನು ಉಲ್ಲೇಖಿಸಿ ಇರಾನ್ ಮಾಧ್ಯಮ ವರದಿ ಮಾಡಿದೆ.
ಇಸ್ರೇಲ್ ದಾಳಿಯಿಂದ ನಾಗರಿಕರಿಗೆ ರಕ್ಷಣೆ ನೀಡಲು ಮಸೀದಿಗಳು, ಮೆಟ್ರೋ ನಿಲ್ದಾಣಗಳು ಮತ್ತು ಶಾಲೆಗಳನ್ನು ಆಶ್ರಯ ತಾಣಗಳಾಗಿ ಇರಾನ್ ಬಳಸಿಕೊಳ್ಳುತ್ತಿದೆ.
ಪರಮಾಣು ಮಾತುಕತೆ ಬಂದ್: ಇರಾನ್ ನ ಪರಮಾಣು ಕಾರ್ಯಕ್ರಮದ ಕುರಿತ ನಿಗದಿಯಾಗಿದ್ದ ಸಭೆಯು ರದ್ದುಗೊಂಡಿದೆ. ಅಮೆರಿಕ ಹಾಗೂ ಇರಾನ್ ನ ನಡುವೆ 6ನೇ ಸುತ್ತಿನ ಪರೋಕ್ಷ ಮಾತುಕತೆಯು ಭಾನುವಾರ ಒಮನ್ ನಲ್ಲಿ ನಡೆಯಬೇಕಾಗಿತ್ತು.
ಡೊನಾಲ್ಡ್ ಟ್ರಂಪ್ ಎಚ್ಚರಿಕೆ: ಸಂಘರ್ಷವನ್ನು ಕೊನೆಗಾಣಿಸಲು ಇರಾನ್ ಹಾಗೂ ಇರಾನ್ ಸುಲಭವಾಗಿ ಒಪ್ಪಂದ ಮಾಡಿಕೊಳ್ಳಬಹುದು ಎಂದಿರುವ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಇರಾನ್ ಮೇಲಿನ ದಾಳಿಗೂ ನಮಗೂ ಯಾವುದೇ ಸಂಬಂಧವಿಲ್ಲ. ಒಂದು ವೇಳೆ ಪ್ರತೀಕಾರದ ಕ್ರಮವಾಗಿ ಅಮೆರಿಕದ ಮೇಲೆ ಇರಾನ್ ದಾಳಿ ಮಾಡಿದರೆ ಅಮೆರಿಕದ ಇಡೀ ಸೇನೆಯು ಸಂಪೂರ್ಣ ಶಕ್ತಿಯೊಂದಿಗೆ ಪ್ರತ್ಯುತ್ತರ ನೀಡಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ.
Advertisement