
ನಿಕೋಸಿಯಾ: ಪಶ್ಚಿಮ ಏಷ್ಯಾ ಮತ್ತು ಯುರೋಪ್‌ನಲ್ಲಿ ನಡೆಯುತ್ತಿರುವ ಸಂಘರ್ಷ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಸೈಪ್ರಸ್ ಅಧ್ಯಕ್ಷ ನಿಕೋಸ್ ಕ್ರಿಸ್ಟೋಡೌಲಿಡೆಸ್ "ಕಳವಳ ವ್ಯಕ್ತಪಡಿಸಿದ್ದಾರೆ. ಇದು ಯುದ್ಧದ ಯುಗವಲ್ಲ" ಎಂದು ಉಭಯ ನಾಯಕರು ಒಪ್ಪಿಕೊಂಡಿದ್ದಾರೆ.
ಕ್ರಿಸ್ಟೋಡೌಲಿಡ್ಸ್ ಜೊತೆಗೆ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಮಾತುಕತೆ ಮತ್ತು ಸ್ಥಿರತೆಯ ಮರುಸ್ಥಾಪನೆಯ ಮೂಲಕ ಪರಿಹಾರ ಕಂಡುಕೊಳ್ಳುವುದು ಮಾನವೀಯತೆಯಾಗಿದೆ ಎಂದಿದ್ದಾರೆ.
ಗಡಿಯಾಚೆಗಿನ ಭಯೋತ್ಪಾದನೆ ವಿರುದ್ಧ ಭಾರತದ ಹೋರಾಟಕ್ಕೆ ಸೈಪ್ರಸ್ ಬೆಂಬಲ ನೀಡಿದ್ದಕ್ಕಾಗಿ ಧನ್ಯವಾದ ಸಲ್ಲಿಸಿದ ಮೋದಿ, ಗಡಿಯಾಚೆಗಿನ ಭಯೋತ್ಪಾದನೆಯ ವಿರುದ್ಧದ ಭಾರತದ ಹೋರಾಟಕ್ಕೆ ಸೈಪ್ರಸ್‌ನ ಬೆಂಬಲಕ್ಕಾಗಿ ನಾವು ಕೃತಜ್ಞರಾಗಿರುತ್ತೇವೆ ಎಂದು ಹೇಳಿದರು. ಮೋದಿ ಅವರು ಮೂರು ರಾಷ್ಟ್ರಗಳ ಪ್ರವಾಸದ ಮೊದಲ ಚರಣದಲ್ಲಿ ಸೈಪ್ರಸ್‌ಗೆ ಅಧಿಕೃತ ಭೇಟಿ ನೀಡಿದ್ದಾರೆ.
ಪಹಲ್ಗಾಮ್ ದಾಳಿಗೆ ಪ್ರತೀಕಾರವಾಗಿ ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿನ ಭಯೋತ್ಪಾದಕ ಮೂಲಸೌಕರ್ಯಗಳನ್ನು ನಾಶಪಡಿಸಿದ ಭಾರತವು ಮೇ ತಿಂಗಳಲ್ಲಿ ಆಪರೇಷನ್ ಸಿಂಧೂರ್ ಅನ್ನು ನಡೆಸಿದ ನಂತರ ಇದು ಅವರ ಮೊದಲ ವಿದೇಶಿ ಭೇಟಿಯಾಗಿದೆ.
ಈ ವೇಳೆ ಮಾತನಾಡಿದ ಕ್ರಿಸ್ಟೋಡೌಲಿಡ್ಸ್, ನಾವು ಐತಿಹಾಸಿಕ ಸ್ನೇಹವನ್ನು ಹೊಂದಿದ್ದು, ಸಂಬಂಧಗಳಲ್ಲಿ ನಂಬಿಕೆಯಿದೆ ಎಂದರು. ಏಪ್ರಿಲ್ 22 ರ ಭೀಕರ ಪಹಲ್ಗಾಮ್ ಭಯೋತ್ಪಾದಕ ದಾಳಿಯನ್ನು ನೆನಪಿಸಿಕೊಂಡ ಅವರು, ಸೈಪ್ರಸ್ ಭಾರತದೊಂದಿಗೆ ಒಗಟ್ಟಾಗಿ ನಿಂತಿದೆ ಎಂದರು.ಅಲ್ಲದೇ ಜೂನ್ 12 ರಂದು ಅಹಮದಾಬಾದ್‌ನಲ್ಲಿ ನಡೆದ ಏರ್ ಇಂಡಿಯಾ ವಿಮಾನ ಅಪಘಾತವನ್ನು ಉಲ್ಲೇಖಿಸಿದ ಅವರು, ಈ ದುಃಖದ ಸಮಯದಲ್ಲಿ ಸೈಪ್ರಸ್ ಜನರು ಭಾರತದೊಂದಿಗಿದ್ದಾರೆ ಎಂದು ಹೇಳಿದರು.
ರಕ್ಷಣೆ, ಭದ್ರತೆ, ವ್ಯಾಪಾರ, ತಂತಜ್ಞಾನ, ಆರೋಗ್ಯ, ನವೀಕರಿಸಬಹುದಾದ ಇಂಧನ ಸೇರಿದಂತೆ ಪ್ರಾದೇಶಿಕ ವಿಷಯಗಳ ಬಗ್ಗೆ ಮೋದಿ ಹಾಗೂ ಕ್ರಿಸ್ಟೋಡೌಲಿಡ್ಸ್ ಧೀರ್ಘ ಮಾತುಕತೆ ನಡೆಸಿದ್ದಾರೆ. ನಾವಿಬ್ಬರೂ ಪಶ್ಚಿಮ ಏಷ್ಯಾ ಮತ್ತು ಯುರೋಪ್‌ನಲ್ಲಿ ನಡೆಯುತ್ತಿರುವ ಸಂಘರ್ಷಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ್ದೇವೆ. ಅವುಗಳ ಋಣಾತ್ಮಕ ಪರಿಣಾಮ ಕೇವಲ ಆ ಪ್ರದೇಶಗಳಿಗೆ ಸೀಮಿತವಾಗಿಲ್ಲ. ನಾವಿಬ್ಬರೂ ಇದು ಯುದ್ಧದ ಯುಗವಲ್ಲ ಎಂದು ಭಾವಿಸುತ್ತೇವೆ. ಮಾತುಕತೆ ಮೂಲಕ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಕರೆ ನೀಡಿರುವುದಾಗಿ ಮೋದಿ ಹೇಳಿದರು.
ಎರಡು ದಶಕಗಳ ನಂತರ ಸೈಪ್ರಸ್‌ಗೆ ಭಾರತೀಯ ಪ್ರಧಾನಿಯೊಬ್ಬರು ನೀಡಿದ ಮೊದಲ ಭೇಟಿ ಇದಾಗಿದೆ.
ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್, ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಸ್ರಿ ಮತ್ತು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಧೋವಲ್ ಮಾತುಕತೆ ವೇಳೆ ಉಪಸ್ಥಿತರಿದ್ದರು.
Advertisement