
ಟೆಹರಾನ್: ಇಸ್ರೇಲ್ ನಿಂದ ಹತ್ಯೆಯ ಭೀತಿಗೊಳಗಾಗಿರುವ ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರು ಸಂಭಾವ್ಯ ಮೂವರು ಉತ್ತರಾಧಿಕಾರಿಗಳನ್ನು ಹೆಸರಿಸಿರುವುದಾಗಿ ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ.
ಖಮೇನಿ ತನ್ನ ಹತ್ಯೆಯನ್ನು ಹುತಾತ್ಮರ ರೀತಿ ನೋಡುತ್ತಿರುವುದಾಗಿ ಅಧಿಕಾರಿಗಳ ಮಾತನ್ನು ಉಲ್ಲೇಖಿಸಿ ವರದಿ ಹೇಳಿದೆ. ಈಗಾಗಲೇ ತನ್ನ ನಿವಾಸವನ್ನು ತೊರೆದಿರುವ 86 ವರ್ಷದ ಖಮೇನಿ, ಈಗ ಬಂಕರ್‌ನಲ್ಲಿ ಆಶ್ರಯ ಪಡೆದಿದ್ದಾರೆ. ಆದರೆ ಅವರನ್ನು ಹೊರಗೆ ಎಳೆಯುವ ಇಸ್ರೇಲಿ ಪ್ರಯತ್ನ ಕಷ್ಟವಾಗಲ್ಲ ಎನ್ನಲಾಗುತ್ತಿದೆ.
ಯುದ್ಧದ ಮೊದಲ ದಿನವೇ ಕಮಾಂಡ್ ಸೆಂಟರ್‌ನಲ್ಲಿ ಸಭೆ ನಡೆಸುತ್ತಿದ್ದಾಗ IRGC ಯ ವಾಯುಪಡೆಯ ಕಮಾಂಡರ್ ಅಮೀರ್ ಅಲಿ ಹಜಿಜಾದೆಹ್ ಮತ್ತು ಇತರ ಹಿರಿಯ ವಾಯುಪಡೆಯ ನಾಯಕರನ್ನು ಇಸ್ರೇಲ್ ಹತ್ಯೆ ಮಾಡಿತ್ತು.
ಈ ವಾರದ ಆರಂಭದಲ್ಲಿ ಇಸ್ರೇಲ್‌ನ ಆಸ್ಪತ್ರೆ ಮತ್ತು ವಸತಿ ಕಟ್ಟಡಗಳ ಮೇಲೆ ಇರಾನ್ ದಾಳಿ ಮಾಡಿದ ನಂತರ ಖಮೇನಿಯನ್ನು ಸುಮ್ಮನೆ ಬಿಡುವುದಿಲ್ಲ ಎಂದು ಇಸ್ರೇಲಿ ರಕ್ಷಣಾ ಸಚಿವ ಇಸ್ರೇಲ್ ಕಾಟ್ಜ್ ಬೆದರಿಕೆ ಹಾಕಿದ್ದರು. ಖಮೇನಿ ಬೆಲೆ ತೆರಬೇಕಾಗುತ್ತದೆ. ಎಲ್ಲಾ ಆಯ್ಕೆಗಳಿವೆ ಎಂದು ಇಸ್ರೇಲಿ ಪ್ರಧಾನಿ ಬೆಂಜಮಿನ್ ನೆತನ್ಯಾಹು ಕೂಡಾ ಹೇಳಿದ್ದರು.
ಖಮೇನಿ ಉತ್ತರಾಧಿಕಾರಿಯಾಗಲಿರುವ ಅಭ್ಯರ್ಥಿಗಳನ್ನು ಹೆಸರಿಸಲಾಗಿಲ್ಲವಾದರೂ, ಅವರ ಪುತ್ರ ಮುಜ್ತಾಬಾ ಅವರೊಂದಿಗೆ ಇಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಮುಜ್ತಾಬಾ ತನ್ನ ತಂದೆಯ ನಂತರ ಉತ್ತರಾಧಿಕಾರಿಯಾಗುವ ಸಾಧ್ಯತೆ ಇರುವುದಾಗಿ ಪರಿಗಣಿಸಲಾಗಿದೆ. ಸಾಮಾನ್ಯ ಸಂದರ್ಭಗಳಲ್ಲಿ, ಮುಂದಿನ ಸರ್ವೋಚ್ಚ ನಾಯಕನನ್ನು ಆಯ್ಕೆಮಾಡಲು ತಿಂಗಳುಗಳೇ ಬೇಕಾಗುತ್ತಿತ್ತು ಆದರೆ ಖಮೇನಿ, ಇಸ್ರೇಲ್ ಗೆ ಟಾರ್ಗೆಟ್ ಆಗಿರುವ ಹಿನ್ನೆಲೆಯಲ್ಲಿ ತಲೆದೋರುವ ಬಿಕ್ಕಟ್ಟನ್ನು ತಪ್ಪಿಸಲು ತ್ವರಿತವಾಗಿ ಉತ್ತರಾಧಿಕಾರಿಯನ್ನು ಘೋಷಿಸುವ ಸಾಧ್ಯತೆ ಇರುವುದಾಗಿ ವರದಿಗಳು ಹೇಳಿವೆ.
Advertisement