
ಸಿರಿಯಾ ರಾಜಧಾನಿ ಹೊರವಲಯದಲ್ಲಿರುವ ಚರ್ಚ್ ಒಳಗೆ ಆತ್ಮಹತ್ಯಾ ಬಾಂಬ್ ದಾಳಿ ನಡೆದಿದ್ದು ಕನಿಷ್ಠ 15 ಮಂದಿ ಸಾವನ್ನಪ್ಪಿದ್ದಾರೆ ಎಂದು ರಾಜ್ಯ ಮಾಧ್ಯಮಗಳು ತಿಳಿಸಿವೆ. ಡಮಾಸ್ಕಸ್ ಬಳಿಯ ಡ್ವೀಲಿಯಾದಲ್ಲಿರುವ ಮಾರ್ ಎಲಿಯಾಸ್ ಚರ್ಚ್‌ನಲ್ಲಿ ಪ್ರಾರ್ಥನೆ ಸಲ್ಲಿಸುತ್ತಿದ್ದಾಗ ಈ ದಾಳಿ ಸಂಭವಿಸಿದ್ದು, ಹಲವರು ಗಾಯಗೊಂಡಿದ್ದಾರೆ.
ಸಿರಿಯಾದ ಅಧಿಕೃತ ಸುದ್ದಿ ಸಂಸ್ಥೆ ಸನಾ, ಆರೋಗ್ಯ ಸಚಿವಾಲಯವನ್ನು ಉಲ್ಲೇಖಿಸಿ, ಕನಿಷ್ಠ 15 ಮಂದಿ ಮೃತಪಟ್ಟಿದ್ದಾರೆ ಎಂದು ವರದಿ ಮಾಡಿದೆ. ಏತನ್ಮಧ್ಯೆ, ಯುಕೆ ಮೂಲದ ಸಿರಿಯನ್ ವೀಕ್ಷಣಾಲಯವು ಗಾಯಗೊಂಡವರು ಮತ್ತು ಸತ್ತವರ ಸಂಖ್ಯೆ ಸುಮಾರು 30 ಆಗಿರಬಹುದು ಎಂದು ಹೇಳಿಕೊಂಡಿದೆ. ಆದರೂ ಅದು ನಿಖರವಾದ ಅಂಕಿಅಂಶಗಳನ್ನು ನಿರ್ದಿಷ್ಟಪಡಿಸಿಲ್ಲ. ಕೆಲವು ಸ್ಥಳೀಯ ಮಾಧ್ಯಮಗಳು ಬಲಿಯಾದವರಲ್ಲಿ ಮಕ್ಕಳೂ ಸೇರಿದ್ದಾರೆ ಎಂದು ವರದಿ ಮಾಡಿದೆ.
ದಾಳಿಕೋರ ಮೊದಲಿಗೆ ಚರ್ಚ್ ಮೇಲೆ ಗುಂಡು ಹಾರಿಸಿದ್ದು ನಂತರ ಚರ್ಚ್ ಒಳಗೆ ಹೋಗಿ ತನ್ನನ್ನು ತಾನು ಸ್ಫೋಟಿಸಿಕೊಂಡನು ಎಂದು ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದ್ದಾರೆ. ದಾಳಿಕೋರನೊಂದಿಗೆ ಇತರ ಇಬ್ಬರು ವ್ಯಕ್ತಿಗಳು ಕಾಣಿಸಿಕೊಂಡಿದ್ದು ನಂತರ ಅವರು ಅಲ್ಲಿಂದ ಓಡಿ ಹೋದರು ಎಂದು ಹೇಳಿದರು.
ದಾಳಿಕೋರ ಇಸ್ಲಾಮಿಕ್ ಸ್ಟೇಟ್ ಗುಂಪಿನೊಂದಿಗೆ ಸಂಬಂಧ ಹೊಂದಿದ್ದಾನೆ ಎಂದು ಸಿರಿಯನ್ ಆಂತರಿಕ ಸಚಿವಾಲಯ ತಿಳಿಸಿದೆ. ಡಮಾಸ್ಕಸ್ ಸಚಿವಾಲಯದ ಪ್ರಕಾರ, ಚರ್ಚ್ ಒಳಗೆ ಆತ್ಮಹತ್ಯಾ ಬಾಂಬ್ ಸ್ಫೋಟಿಸುವ ಮೊದಲು ವ್ಯಕ್ತಿ ಗುಂಡು ಹಾರಿಸಿದ್ದಾಗಿ ತಿಳಿಸಿದೆ.
Advertisement