
ಜೆರುಸೆಲೆಂ: ಅಕ್ಟೋಬರ್ 7, 2023 2023 ರಂದು ಇಸ್ರೇಲ್ ನೆಲದಲ್ಲಿ ಮಾರಣಾಂತಿಕ ದಾಳಿ ನಡೆಸಿದ ಹಮಾಸ್ ನಾಯಕ ಇಸ್ಸಾನನ್ನು ಹೊಡೆದುರುಳಿಸಿರುವುದಾಗಿ ಇಸ್ರೇಲ್ ರಕ್ಷಣಾ ಪಡೆ ತಿಳಿಸಿದೆ.
ಈ ಕುರಿತು ಶನಿವಾರ ತಡರಾತ್ರಿ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಫೋಸ್ಟ್ ಮಾಡಿರುವ ಇಸ್ರೇಲ್ ರಕ್ಷಣಾ ಪಡೆ (IDF), "ELIMINATED, ಹಮಾಸ್ ನ ಮಿಲಿಟರಿ ವಿಭಾಗದ ಸ್ಥಾಪಕರಲ್ಲಿ ಒಬ್ಬರಾದ ಹಖಮ್ ಮುಹಮ್ಮದ್ ಇಸ್ಸಾ ಅಲ್-ಇಸ್ಸಾ ಅವರನ್ನು ಹತ್ಯೆ ಮಾಡಲಾಗಿದೆ.
ಇಸ್ಸಾ ನೇತೃತ್ವದಲ್ಲಿ ಹಮಾಸ್ ಪಡೆಗಳ ರಚನೆ, ತರಬೇತಿ ಮತ್ತು ಅಕ್ಟೋಬರ್ 7ರ ಮಾರಣಾಂತಿಕ ದಾಳಿ ನಡೆದಿತ್ತು. ಅವರು ಇಸ್ರೇಲಿಗಳ ವಿರುದ್ಧ ವೈಮಾನಿಕ ಮತ್ತು ನೌಕಾ ದಾಳಿಯನ್ನು ಮುನ್ನಡೆಸಿದ್ದರು ಎಂದು ಹೇಳಲಾಗಿದೆ.
ಅಕ್ಟೋಬರ್ 7 ರ ಹತ್ಯಾಕಾಂಡದಲ್ಲಿ ಭಾಗಿಯಾಗಿರುವ ಎಲ್ಲಾ ಭಯೋತ್ಪಾದಕರನ್ನು IDF ಮತ್ತು ISA ಪತ್ತೆಹಚ್ಚಿ, ಹತ್ಯೆ ಮಾಡುವುದನ್ನು ಮುಂದುವರೆಸಲಿದೆ ಎಂದು ತಿಳಿಸಲಾಗಿದೆ.
ಈ ಮಧ್ಯೆ ಸುದ್ದಿಸಂಸ್ಥೆ ಅಲ್ ಜಜೀರಾ ಪ್ರಕಾರ, ಇಸ್ರೇಲ್ ಗಾಜಾ ಪಟ್ಟಿಯಾದ್ಯಂತ ತನ್ನ ದಾಳಿಯನ್ನು ಮುಂದುವರೆಸಿದೆ. ಇದರಲ್ಲಿ ಗಾಜಾ ನಗರದ ತುಫಾ ನೆರೆಹೊರೆಯಲ್ಲಿ ಒಂಬತ್ತು ಮಕ್ಕಳು ಸೇರಿದಂತೆ ಕನಿಷ್ಠ 20 ಜನರನ್ನು ಕೊಂದ ದಾಳಿಯೂ ಸೇರಿದೆ.
ಒಂದು ವಾರದೊಳಗೆ ಇಸ್ರೇಲ್ ಮತ್ತು ಹಮಾಸ್ ನಡುವೆ ಗಾಜಾದಲ್ಲಿ ಕದನ ವಿರಾಮ ಜಾರಿಯಾಗಬಹುದೆಂದು ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ಕದನ ವಿರಾಮಕ್ಕಾಗಿ ಪ್ರಯತ್ನಿಸುತ್ತಿರುವ ಕೆಲವು ಜನರೊಂದಿಗೆ ಮಾತನಾಡಿದ ನಂತರ ಈ ಭರವಸೆ ಸಿಕ್ಕಿದೆ. ಮುಂದಿನ ವಾರ ಕದನ ವಿರಾಮ ಜಾರಿಯಾಗುವ ನಿರೀಕ್ಷೆ ಹೊಂದಿರುವುದಾಗಿ ಟ್ರಂಪ್ ಹೇಳಿರುವುದಾಗಿ ಅಲ್ ಜಜೀರಾ ಹೇಳಿದೆ.
ಟ್ರಂಪ್ ಒತ್ತಡದಿಂದ ಇಸ್ರೇಲ್ ಪ್ರಧಾನಿ ನೆತನ್ಯಾಹು ಕದನ ವಿರಾಮವನ್ನು ಒಪ್ಪಿಕೊಳ್ಳಲು ಸಿದ್ಧರಿರುವುದಾಗಿ ಅನೇಕ ವರದಿಗಳು ಹೇಳಿವೆ. ಗಾಜಾದಲ್ಲಿ ಇಸ್ರೇಲಿ ಪಡೆಗಳಿಂದ ಹೆಚ್ಚುತ್ತಿರುವ ಹತ್ಯೆಗಳು ಮತ್ತು ಇಸ್ರೇಲ್‌ನ ಯುದ್ಧದ ಬಗ್ಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಖಂಡನೆ ಹೆಚ್ಚಾಗುತ್ತಿರುವ ಸಮಯದಲ್ಲಿ ಟ್ರಂಪ್ ಕದನ ವಿರಾಮದ ಮಾತುಗಳನ್ನಾಡಿದ್ದಾರೆ.
Advertisement