
ಮಾಸ್ಕೋ: ಉಕ್ರೇನ್‌ನಲ್ಲಿ 30 ದಿನಗಳ ಕದನ ವಿರಾಮಕ್ಕೆ ಅಮೆರಿಕ ಮುಂದಿಟ್ಟ ಪ್ರಸ್ತಾವನೆಯನ್ನು ತಾತ್ವಿಕವಾಗಿ ಒಪ್ಪುವುದಾಗಿ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಹೇಳಿದ್ದಾರೆ, ಆದರೆ ಈ ನಿಟ್ಟಿನಲ್ಲಿ ನಿಯಮಗಳನ್ನು ರೂಪಿಸಬೇಕಾಗಿದ್ದು, ಇದು ಶಾಶ್ವತ ಶಾಂತಿಗೆ ದಾರಿ ಮಾಡಿಕೊಡಬೇಕು ಎಂದು ಅವರು ಒತ್ತಿ ಹೇಳಿದ್ದಾರೆ.
ಕದನ ವಿರಾಮ ಪರಿಕಲ್ಪನೆ ಸರಿಯಾಗಿದೆ, ನಾವು ಖಂಡಿತವಾಗಿಯೂ ಅದನ್ನು ಬೆಂಬಲಿಸುತ್ತೇವೆ ಎಂದು ವ್ಲಾಡಿಮಿರ್ ಪುಟಿನ್ ಮಾಸ್ಕೋದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡುತ್ತಾ ಹೇಳಿದರು. ಆದರೆ ನಾವು ಚರ್ಚಿಸಬೇಕಾದ ಸಮಸ್ಯೆಗಳು ಸಾಕಷ್ಟಿವೆ. ನಾವು ಅದನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಸಂಬಂಧಪಟ್ಟ ಪಾಲುದಾರರೊಂದಿಗೆ ಚರ್ಚಿಸಬೇಕಾಗಿದೆ ಎಂದು ನಾನು ಭಾವಿಸುತ್ತೇನೆ ಎಂದರು.
ರಷ್ಯಾದ ಕುರ್ಸ್ಕ್ ಪ್ರದೇಶದಲ್ಲಿ ಉಕ್ರೇನ್ ಪಡೆಗಳು ತಮ್ಮ ಕೊನೆಯ ನೆಲೆಯಲ್ಲಿ ಸುತ್ತುವರೆದಿವೆ. ಕದನ ವಿರಾಮಕ್ಕೆ ಮುಂಚಿತವಾಗಿ ಅವರು ಶಸ್ತ್ರಾಸ್ತ್ರಗಳನ್ನು ತ್ಯಜಿಸಿ ಶರಣಾಗುತ್ತಾರೆಯೇ ಎಂದು ನಿರ್ಧರಿಸುವುದು ಅವಶ್ಯಕ ಎಂದರು.
ಕುರ್ಸ್ಕ್ ಗಡಿ ಪ್ರೇದೇಶದಿಂದ ಉಕ್ರೇನ್ ಪಡೆಗಳನ್ನು ಹಿಂದಕ್ಕೆ ಕಳುಹಿಸುವಲ್ಲಿ ತಮ್ಮ ಪಡೆಗಳ ಯಶಸ್ಸಿನ ಆಧಾರದ ಮೇಲೆ ಮುಂದಿನ ಹಂತಗಳನ್ನು ನಿರ್ಧರಿಸುವುದಾಗಿ ಪುಟಿನ್ ಇದೇ ಸಂದರ್ಭದಲ್ಲಿ ತಿಳಿಸಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಅಲ್ಲಿ ಕ್ಷಿಪ್ರವಾಗಿ ತಮ್ಮ ಪಡೆ ಮೇಲುಗೈ ಸಾಧಿಸಿರುವುದನ್ನು ಪುಟಿನ್ ಶ್ಲಾಘಿಸಿದರು, ಪರಿಸ್ಥಿತಿ ಆಧಾರದ ಮೇಲೆ, ಸಂಘರ್ಷವನ್ನು ಕೊನೆಗೊಳಿಸುವ ಮತ್ತು ಎಲ್ಲರಿಗೂ ಸ್ವೀಕಾರಾರ್ಹವಾದ ಒಪ್ಪಂದಗಳನ್ನು ತಲುಪುವ ಮುಂದಿನ ಹಂತಗಳ ಬಗ್ಗೆ ನಾವು ಒಪ್ಪುತ್ತೇವೆ ಎಂದರು.
ಕದನ ವಿರಾಮದ ಸಂಭವನೀಯ ಉಲ್ಲಂಘನೆಗಳನ್ನು ನಿಯಂತ್ರಿಸಲು ಕಾರ್ಯವಿಧಾನವನ್ನು ಅಭಿವೃದ್ಧಿಪಡಿಸುವ ಅಗತ್ಯವನ್ನು ಅವರು ಹೇಳಿದರು. ಪಡೆಗಳನ್ನು ಸಜ್ಜುಗೊಳಿಸುವಿಕೆ ಮತ್ತು ಮರುಸಜ್ಜುಗೊಳಿಸುವಿಕೆಯನ್ನು ಮುಂದುವರಿಸಲು ಉಕ್ರೇನ್ 30 ದಿನಗಳ ಕದನ ವಿರಾಮವನ್ನು ಬಳಸಬಹುದೇ ಎಂಬುದನ್ನು ರಷ್ಯಾ ಪರಿಶೀಲಿಸಲಿದೆ.
Advertisement