
ಇಸ್ಲಾಮಾಬಾದ್: ಪಾಕಿಸ್ತಾನದ ಪ್ರಯಾಣಿಕ ರೈಲನ್ನು ಅಪಹರಿಸಿದ್ದ ಬಲೂಚ್ ಬಂಡುಕೋರರು ಬಲೂಚಿಸ್ತಾನದ ರಾಜಕೀಯ ಕೈದಿಗಳ ಬಿಡುಗಡೆಗಾಗಿ ಪಾಕಿಸ್ತಾನಕ್ಕೆ 48 ಗಂಟೆಗಳ ಗಡುವು ನೀಡಿದ್ದು ಆ ಸಮಯ ಮುಗಿದ ಬಳಿಕ ಒತ್ತೆಯಾಳಾಗಿರಿಸಿಕೊಂಡಿದ್ದ ಎಲ್ಲಾ 214 ಸೈನಿಕರನ್ನು ಕೊಂದಿದ್ದೇವೆ ಎಂದು ಹೇಳಿಕೊಂಡಿದ್ದಾರೆ.
ಒತ್ತೆಯಾಳುಗಳನ್ನು ಬಿಡುಗಡೆ ಮಾಡಲಾಗಿದೆ ಎಂಬ ಪಾಕಿಸ್ತಾನ ಸೇನೆಯ ಹೇಳಿಕೆಯನ್ನು ತಿರಸ್ಕರಿಸಿದ ಬಲೂಚ್ ಲಿಬರೇಶನ್ ಆರ್ಮಿ, ಪಾಕಿಸ್ತಾನ ಸರ್ಕಾರದ 'ಹಠಮಾರಿ' ವರ್ತನೆಯಿಂದಾಗಿ ನಾವು ಈ ರೀತಿ ಮಾಡಬೇಕಾಯಿತು ಎಂದು ಬಿಎಲ್‌ಎ ಹೇಳಿದೆ. ಬುಧವಾರ, ದಂಗೆಕೋರರು ಬಲೂಚ್ ರಾಜಕೀಯ ಕೈದಿಗಳು ಮತ್ತು ಕಾರ್ಯಕರ್ತರನ್ನು ಬಿಡುಗಡೆ ಮಾಡಲು ಸರ್ಕಾರಕ್ಕೆ 48 ಗಂಟೆಗಳ ಅಂತಿಮ ಗಡುವು ನೀಡಿದರು.
ವಾಸ್ತವವಾಗಿ, ಬಲೂಚಿಸ್ತಾನವನ್ನು ಪಾಕಿಸ್ತಾನದಿಂದ ಬೇರ್ಪಡಿಸಬೇಕೆಂದು ಒತ್ತಾಯಿಸುತ್ತಿರುವ ಪ್ರತ್ಯೇಕತಾವಾದಿ ಗುಂಪು ಬಲೂಚ್ ಲಿಬರೇಶನ್ ಆರ್ಮಿ, ಮಂಗಳವಾರ ರೈಲ್ವೆ ಹಳಿಯನ್ನು ಸ್ಫೋಟಿಸಿ ಪೇಶಾವರಕ್ಕೆ ತೆರಳುತ್ತಿದ್ದ ಜಾಫರ್ ಎಕ್ಸ್‌ಪ್ರೆಸ್ ಅನ್ನು ಅಪಹರಿಸಿತ್ತು. ರೈಲು ಅಪಹರಣಕ್ಕೊಳಗಾದ ಸಮಯದಲ್ಲಿ, ರೈಲಿನಲ್ಲಿ 400ಕ್ಕೂ ಹೆಚ್ಚು ಜನರು ಇದ್ದರು. ರೈಲನ್ನು ವಶಪಡಿಸಿಕೊಂಡ ನಂತರ, ಬಿಎಲ್‌ಎ ದಂಗೆಕೋರರು ವೃದ್ಧರು, ಮಹಿಳೆಯರು ಮತ್ತು ಮಕ್ಕಳನ್ನು ಬಿಟ್ಟು ಕಳುಹಿಸಿದ್ದರು. ಪಾಕಿಸ್ತಾನವು ತನ್ನ ಸಾಂಪ್ರದಾಯಿಕ ಮೊಂಡುತನ ಮತ್ತು ಮಿಲಿಟರಿ ದುರಹಂಕಾರವನ್ನು ಪ್ರದರ್ಶಿಸುತ್ತಾ, ಗಂಭೀರ ಮಾತುಕತೆಗಳನ್ನು ತಪ್ಪಿಸಿದ್ದಲ್ಲದೆ, ನೆಲದ ವಾಸ್ತವಗಳಿಗೆ ಕಣ್ಣು ಮುಚ್ಚಿಕೊಂಡಿದೆ. ಈ ಮೊಂಡುತನವು ಎಲ್ಲಾ 214 ಒತ್ತೆಯಾಳುಗಳ ಹತ್ಯೆಗೆ ಕಾರಣವಾಯಿತು" ಎಂದು ಬಿಎಲ್‌ಎ ಹೇಳಿಕೆಯಲ್ಲಿ ತಿಳಿಸಿದೆ.
ರೈಲಿನಲ್ಲಿ 400ಕ್ಕೂ ಹೆಚ್ಚು ಪ್ರಯಾಣಿಕರಿದ್ದರು. ಅವರಲ್ಲಿ ಹೆಚ್ಚಿನವರು ಭದ್ರತಾ ಸಿಬ್ಬಂದಿ. ಒತ್ತೆಯಾಳುಗಳನ್ನು ರಕ್ಷಿಸಲು ಕಾರ್ಯಾಚರಣೆ ಆರಂಭಿಸಿದ ಪಾಕಿಸ್ತಾನಿ ಸೇನೆ, 30 ಗಂಟೆಗಳ ಕಾರ್ಯಾಚರಣೆ ನಡೆಸಿ ಎಲ್ಲಾ 33 ದಂಗೆಕೋರರನ್ನು ಹತ್ಯೆ ಮಾಡಿ ಒತ್ತೆಯಾಳುಗಳನ್ನು ರಕ್ಷಿಸಿರುವುದಾಗಿ ಹೇಳಿತ್ತು. ಅಲ್ಲದೆ ಈ ಕಾರ್ಯಾಚರಣೆ ವೇಳೆ 23 ಸೈನಿಕರು, ಮೂವರು ರೈಲ್ವೆ ನೌಕರರು ಮತ್ತು ಐದು ಪ್ರಯಾಣಿಕರು ಸಾವನ್ನಪ್ಪಿದ್ದಾರೆ ಎಂದು ಸೇನೆ ಹೇಳಿಕೊಂಡಿತ್ತು. ಆದಾಗ್ಯೂ, ಬಲೂಚ್ ಬಂಡುಕೋರರು ಪಾಕಿಸ್ತಾನದ ಹೇಳಿಕೆಯನ್ನು ನಿರಾಕರಿಸಿದ್ದಾರೆ. ಅಲ್ಲದೆ ಭೀಕರ ಹೋರಾಟ ಮುಂದುವರೆಸಿದ್ದು ಭದ್ರತಾ ಪಡೆಗಳು 'ಭಾರೀ ನಷ್ಟ' ಅನುಭವಿಸುತ್ತಿವೆ ಎಂದು ಹೇಳಿದರು.
Advertisement