
ನ್ಯೂಯಾರ್ಕ್/ವಾಷಿಂಗ್ಟನ್: ಹಿಂಸೆ ಮತ್ತು ಭಯೋತ್ಪಾದನೆಯನ್ನು ಪ್ರತಿಪಾದಿಸಿದ ಮತ್ತು ಹಮಾಸ್ ಉಗ್ರಗಾಮಿ ಸಂಘಟನೆಯನ್ನು ಬೆಂಬಲಿಸುವ ಚಟುವಟಿಕೆಗಳಲ್ಲಿ ಭಾಗಿಯಾಗಿದ ಆರೋಪದ ಮೇಲೆ ವೀಸಾ ರದ್ದುಗೊಂಡ ಕೊಲಂಬಿಯಾ ವಿಶ್ವವಿದ್ಯಾಲಯದ ಭಾರತೀಯ ಮೂಲದ ವಿದ್ಯಾರ್ಥಿನಿ ಸ್ವಯಂ ಗಡೀಪಾರುಗೊಂಡಿದ್ದಾರೆ.
ಭಾರತೀಯಳಾಗಿರುವ ರಂಜನಿ ಶ್ರೀನಿವಾಸನ್, ಕೊಲಂಬಿಯಾ ವಿಶ್ವವಿದ್ಯಾಲಯದ ನಗರ ಯೋಜನೆಯಲ್ಲಿ ಡಾಕ್ಟರೇಟ್ ವಿದ್ಯಾರ್ಥಿಯಾಗಿ ಎಫ್-1 ವಿದ್ಯಾರ್ಥಿ ವೀಸಾದಲ್ಲಿ ಅಮೆರಿಕಕ್ಕೆ ಹೋಗಿದ್ದರು, ನಂತರ ಭಯೋತ್ಪಾದಕ ಸಂಘಟನೆಯಾದ ಹಮಾಸ್ ನ್ನು ಬೆಂಬಲಿಸುವ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದರು ಎಂದು ಗೃಹ ಭದ್ರತಾ ಇಲಾಖೆ ಶುಕ್ರವಾರ ಹೇಳಿಕೆಯಲ್ಲಿ ತಿಳಿಸಿದೆ.
ಮೊನ್ನೆ ಮಾರ್ಚ್ 5 ರಂದು ವಿದೇಶಾಂಗ ಇಲಾಖೆ ಅವರ ವೀಸಾವನ್ನು ರದ್ದುಗೊಳಿಸಿತ್ತು. ಮಾರ್ಚ್ 11 ರಂದು ಸ್ವಯಂ ಗಡೀಪಾರುಗೊಳ್ಳಲು ಕಸ್ಟಮ್ಸ್ ಮತ್ತು ಬಾರ್ಡರ್ ಪ್ರೊಟೆಕ್ಷನ್ (CBP) ಹೋಮ್ ಅಪ್ಲಿಕೇಶನ್ ನ್ನು ರಂಜನಿ ಶ್ರೀನಿವಾಸನ್ ಬಳಸಿದ ವೀಡಿಯೊ ತುಣುಕುಗಳು ಕಂಡಿವೆ ಎಂದು ಗೃಹ ಭದ್ರತಾ ಇಲಾಖೆ ತಿಳಿಸಿದೆ.
ಗೃಹ ಭದ್ರತಾ ಕಾರ್ಯದರ್ಶಿ ಕ್ರಿಸ್ಟಿ ನೋಯೆಮ್ ಹೇಳಿಕೆಯಲ್ಲಿ ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕಾದಲ್ಲಿ ವಾಸಿಸಲು ಮತ್ತು ಅಧ್ಯಯನ ಮಾಡಲು ವೀಸಾ ಪಡೆಯುವುದು ಸವಲತ್ತಾಗಿರುತ್ತದೆ. ಯಾರೇ ಆಗಲಿ ಹಿಂಸೆ ಮತ್ತು ಭಯೋತ್ಪಾದನೆಯನ್ನು ಪ್ರತಿಪಾದಿಸಿದಾಗ ಆ ಸವಲತ್ತನ್ನು ರದ್ದುಗೊಳಿಸಬೇಕಾಗುತ್ತದೆ. ಅವರಿಗೆ ಈ ದೇಶದಲ್ಲಿ ಇರಲು ಅರ್ಹತೆಗಳಿರುವುದಿಲ್ಲ. ಕೊಲಂಬಿಯಾ ವಿಶ್ವವಿದ್ಯಾಲಯದ ವಿದ್ಯಾರ್ಥಿನಿಯೊಬ್ಬರು ಭಯೋತ್ಪಾದಕ ಚಟುವಟಿಕೆಗಳಿಗೆ ಬೆಂಬಲ ನೀಡುತ್ತಿದ್ದವರು ಸ್ವಯಂ ಗಡೀಪಾರು ಮಾಡಲು CBP ಹೋಮ್ ಅಪ್ಲಿಕೇಶನ್ ನ್ನು ಬಳಸಿಕೊಂಡರು ಎಂದಿದ್ದಾರೆ.
ದೇಶದಲ್ಲಿ ಅಕ್ರಮವಾಗಿ ನೆಲೆಸಿರುವವರಿಗೆ ಸ್ವಯಂ-ಗಡೀಪಾರು ವರದಿ ಮಾಡುವ ಸೌಲಭ್ಯ ಹೊಂದಿರುವ ಗೃಹ ಭದ್ರತಾ ಇಲಾಖೆಯು CBP ಹೋಮ್ ಅಪ್ಲಿಕೇಶನ್ ನ್ನು ಮಾರ್ಚ್ 10ರಂದು ಪರಿಚಯಿಸಲಾಗಿತ್ತು. ದೇಶದಲ್ಲಿ ಅಕ್ರಮವಾಗಿ ನೆಲೆಸಿರುವ ವ್ಯಕ್ತಿಗಳು ದೇಶವನ್ನು ತೊರೆಯುವ ಉದ್ದೇಶವನ್ನು ಸಲ್ಲಿಸಲು CBP ಹೋಮ್ ಮೊಬೈಲ್ ಫೋನ್ ಅಪ್ಲಿಕೇಶನ್ ಅನ್ನು ಬಳಸಬಹುದು.
ಸಿಬಿಪಿ ಅಪ್ಲಿಕೇಶನ್ ಅಂತಹ ವ್ಯಕ್ತಿಗಳಿಗೆ ಈಗಲೇ ಹೊರಡುವ ಮತ್ತು ಸ್ವಯಂ-ಗಡೀಪಾರು ಮಾಡುವ ಆಯ್ಕೆಯನ್ನು ನೀಡುತ್ತದೆ, ಆದ್ದರಿಂದ ಅವರು ಭವಿಷ್ಯದಲ್ಲಿ ಕಾನೂನುಬದ್ಧವಾಗಿ ಮರಳಲು ಮತ್ತು ಅಮೇರಿಕದಲ್ಲಿ ಭವಿಷ್ಯದಲ್ಲಿ ಹೋಗಿ ನೆಲೆಸುವ ಅವಕಾಶವನ್ನು ಇನ್ನೂ ಹೊಂದಿರಬಹುದು. ಸ್ವಯಂ ಗಡೀಪಾರು ಆಗದಿದ್ದರೆ ನಾವು ಅವರನ್ನು ಗಡೀಪಾರು ಮಾಡುತ್ತೇವೆ ಮತ್ತು ಅವರು ಎಂದಿಗೂ ಹಿಂತಿರುಗಲು ಸಾಧ್ಯವಾಗುವುದಿಲ್ಲ ಎಂದು ಗೃಹ ಭದ್ರತಾ ಇಲಾಖೆ ಹೇಳಿದೆ.
ವೆಸ್ಟ್ ಬ್ಯಾಂಕ್‌ನ ಪ್ಯಾಲೆಸ್ಟೀನಿಯನ್ ಲೆಕಾ ಕೊರ್ಡಿಯಾ ಎಂಬ ಮತ್ತೊಬ್ಬ ವಿದ್ಯಾರ್ಥಿನಿಯನ್ನು ಐಸಿಇ ಹೆಚ್ ಎಸ್ಐ ನ್ಯೂವಾರ್ಕ್ ಅಧಿಕಾರಿಗಳು ಎಫ್-1 ವಿದ್ಯಾರ್ಥಿ ವೀಸಾದಡಿ ಅವಧಿ ಮುಗಿದಿದ್ದರೂ ಉಳಿದುಕೊಂಡದ್ದಕ್ಕಾಗಿ ಬಂಧಿಸಿದ್ದರು. ಇದಕ್ಕೂ ಮೊದಲು ಕಳೆದ ವರ್ಷ ಏಪ್ರಿಲ್ ನಲ್ಲಿ ನ್ಯೂಯಾರ್ಕ್ ನಗರದ ಕೊಲಂಬಿಯಾ ವಿಶ್ವವಿದ್ಯಾಲಯದಲ್ಲಿ ಹಮಾಸ್ ಪರ ಪ್ರತಿಭಟನೆಗಳಲ್ಲಿ ಭಾಗವಹಿಸಿದ್ದಕ್ಕಾಗಿ ಕೊರ್ಡಿಯಾ ಅವರನ್ನು ಬಂಧಿಸಲಾಗಿತ್ತು.
ಕೊಲಂಬಿಯಾ ವಿಶ್ವವಿದ್ಯಾಲಯವು ಪ್ರಸ್ತುತ 5 ಬಿಲಿಯನ್ ಡಾಲರ್ ಗಿಂತ ಹೆಚ್ಚಿನ ಫೆಡರಲ್ ಅನುದಾನ ಬದ್ಧತೆಗಳನ್ನು ಹೊಂದಿದೆ ಎಂದು ಶಿಕ್ಷಣ ಇಲಾಖೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
Advertisement