
ವಾಷಿಂಗ್ಟನ್: ಹೌತಿ ಭಯೋತ್ಪಾದಕರ ವಿರುದ್ಧ ಯುಎಸ್ ಸೆಂಟ್ರಲ್ ಕಮಾಂಡ್ (CENTCOM) ಪಡೆಗಳು ತಮ್ಮ ಕಾರ್ಯಾಚರಣೆಯನ್ನು ತೀವ್ರಗೊಳಿಸಿವೆ.
CENTCOM ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿರುವ ವೀಡಿಯೊದಲ್ಲಿ ಮಿಲಿಟರಿ ವಿಮಾನಗಳು ಹಾರಾಟ ನಡೆಸುತ್ತಿರುವುದನ್ನು ಕಾಣಬಹುದು. ಯುಎಸ್ ಸೆಂಟ್ರಲ್ ಕಮಾಂಡ್ ಇರಾನ್ ಬೆಂಬಲಿತ ಹೌತಿ ಭಯೋತ್ಪಾದಕರ ವಿರುದ್ಧ ಸೆಂಟ್ ಕಾಮ್ ಪಡೆಗಳು ಕಾರ್ಯಾಚರಣೆಯನ್ನು ಮುಂದುವರೆಸಿವೆ ಎಂದು ತಿಳಿಸಿದೆ.
ಯೆಮೆನ್‌ನ ಹೌತಿ ಬಂಡುಕೋರರ ಮೇಲೆ ಅಮೆರಿಕ ನಡೆಸಿದ ವೈಮಾನಿಕ ದಾಳಿಯಲ್ಲಿ ಐವರು ಮಹಿಳೆಯರು ಮತ್ತು ಇಬ್ಬರು ಮಕ್ಕಳು ಸೇರಿದಂತೆ ಕನಿಷ್ಠ 53 ಜನರು ಮೃತಪಟ್ಟು ಸುಮಾರು 100 ಜನರು ಗಾಯಗೊಂಡಿದ್ದಾರೆ ಎಂದು ಹೌತಿ ಆರೋಗ್ಯ ಸಚಿವಾಲಯವನ್ನು ಉಲ್ಲೇಖಿಸಿ ದಿ ಹಿಲ್ ವರದಿ ಮಾಡಿದೆ.
ವೈಮಾನಿಕ ದಾಳಿಗಳು ಯೆಮೆನ್‌ನ ರಾಜಧಾನಿ ಸನಾ ಮತ್ತು ಸೌದಿ ಅರೇಬಿಯಾದ ಗಡಿಯ ಬಳಿಯಿರುವ ಬಂಡುಕೋರರ ಭದ್ರಕೋಟೆಯಾದ ಸಾದಾ ಸೇರಿದಂತೆ ಇತರ ಪ್ರಾಂತ್ಯಗಳನ್ನು ಗುರಿಯಾಗಿಸಿಕೊಂಡಿವೆ. ದಾಳಿಗಳಿಗೆ ಪ್ರತಿಕ್ರಿಯೆಯಾಗಿ, ಹೌತಿಗಳ ರಾಜಕೀಯ ಬ್ಯೂರೋ ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸುತ್ತೇವೆ ಎಂದು ಪ್ರತಿಜ್ಞೆ ಮಾಡಿದೆ.
ಮೊನ್ನೆ ಮಾರ್ಚ್ 15ರಂದು ಯೆಮೆನ್‌ನಲ್ಲಿ ಹೌತಿ ಭಯೋತ್ಪಾದಕರ ವಿರುದ್ಧ 'ನಿರ್ಣಾಯಕ ಮತ್ತು ಶಕ್ತಿಯುತ ಮಿಲಿಟರಿ ಕ್ರಮವನ್ನು ಪ್ರಾರಂಭಿಸಲು ಯುಎಸ್ ಮಿಲಿಟರಿಗೆ ಆದೇಶಿಸಿರುವುದಾಗಿ ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದರು.
ಅಮೆರಿಕದ ಮಾಜಿ ಅಧ್ಯಕ್ಷ ಜೊ ಬೈಡನ್ ಅವರು ದುರ್ಬಲವಾಗಿ ಪ್ರತಿಕ್ರಿಯಿಸಿದ್ದರಿಂದ ಹೌತಿಗಳು ಅಮೆರಿಕದ ಮೇಲೆ ದಾಳಿ ಮಾಡುತ್ತಲೇ ಇದ್ದರು ಎಂಬುದು ಟ್ರಂಪ್ ಆರೋಪವಾಗಿದೆ. ಟ್ರೂತ್ ಸೋಷಿಯಲ್‌ನಲ್ಲಿನ ಪೋಸ್ಟ್‌ನಲ್ಲಿ ಟ್ರಂಪ್, 'ಇಂದು, ಯೆಮೆನ್‌ನಲ್ಲಿರುವ ಹೌತಿ ಭಯೋತ್ಪಾದಕರ ವಿರುದ್ಧ ನಿರ್ಣಾಯಕ ಮತ್ತು ಶಕ್ತಿಯುತ ಮಿಲಿಟರಿ ಕ್ರಮ ಕೈಗೊಳ್ಳಲು ನಾನು ಯುನೈಟೆಡ್ ಸ್ಟೇಟ್ಸ್ ಮಿಲಿಟರಿಗೆ ಆದೇಶಿಸಿದ್ದೇನೆ. ಅವರು ಅಮೆರಿಕನ್ ಮತ್ತು ಇತರ ಹಡಗುಗಳು, ವಿಮಾನಗಳು ಮತ್ತು ಡ್ರೋನ್‌ಗಳ ವಿರುದ್ಧ ಕಡಲ್ಗಳ್ಳತನ, ಹಿಂಸಾಚಾರ ಮತ್ತು ಭಯೋತ್ಪಾದನೆಯ ನಿರಂತರ ಅಭಿಯಾನವನ್ನು ನಡೆಸಿದ್ದಾರೆ' ಎಂದು ಹೇಳಿದ್ದಾರೆ.
2023ರ ಅಕ್ಟೋಬರ್ ತಿಂಗಳಲ್ಲಿ ಇಸ್ರೇಲ್ ಮೇಲೆ ಹಮಾಸ್ ದಾಳಿಯ ನಂತರ, ಹೌತಿಗಳು ಕೆಂಪು ಸಮುದ್ರದಲ್ಲಿ ಹಡಗುಗಳ ಮೇಲೆ ದಾಳಿ ನಡೆಸಿದ್ದಾರೆ, ಇದರಿಂದ ಜಾಗತಿಕ ವ್ಯಾಪಾರಕ್ಕೆ ಅಡ್ಡಿಯುಂಟಾಗಿದೆ ಎಂಬುದು ಅಮೆರಿಕ ವಾದವಾಗಿದೆ.
Advertisement