
ವಾಷಿಂಗ್ಟನ್: ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರೊಂದಿಗೆ ನಡೆದ ಮಾತುಕತೆ ಫಲಪ್ರದವಾಗಿದೆ ಎಂದು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರೊಂದಿಗೆ ಇಲ್ಲಿಯವರೆಗೆ ಒಪ್ಪಂದ ನಡೆಯದಿದ್ದರೂ ಸಹ ಕದನ ವಿರಾಮವನ್ನು ಖಚಿತಪಡಿಸಿಕೊಳ್ಳಲು ಪ್ರಯತ್ನಗಳು ಸುಗಮ ಹಾದಿಯಲ್ಲಿ ಸಾಗುತ್ತಿವೆ ಎಂದಿದ್ದಾರೆ.
ಇಂಧನ ಮೂಲಸೌಕರ್ಯದ ಮೇಲಿನ ದಾಳಿಯನ್ನು ನಿಲ್ಲಿಸಬೇಕೆಂಬ ಪ್ರಸ್ತಾವನೆಯನ್ನು ಪರಸ್ಪರ ಗೌರವಿಸುತ್ತಿಲ್ಲ ಎಂದು ರಷ್ಯಾ ಮತ್ತು ಉಕ್ರೇನ್ ಪರಸ್ಪರ ಆರೋಪ ಮಾಡಿಕೊಳ್ಳುತ್ತಿದ್ದು, ಮೊನ್ನೆ ಮಂಗಳವಾರ ಪುಟಿನ್ ಅವರೊಂದಿಗಿನ ಟ್ರಂಪ್ ಅವರ ಮಾತುಕತೆಯ ಸಮಯದಲ್ಲಿ ಒಪ್ಪಿಕೊಂಡಿದ್ದಾರೆ ಎಂದು ಹೇಳಿದ್ದಾರೆ.
ರಷ್ಯಾ ಮತ್ತು ಉಕ್ರೇನ್ ಎರಡೂ ದೇಶಗಳ ಬೇಡಿಕೆಗಳ ಬಗ್ಗೆ ಆಲಿಸಿದ್ದೇನೆ. ನಿನ್ನೆ ಅಧ್ಯಕ್ಷ ಪುಟಿನ್ ಅವರೊಂದಿಗೆ ನಡೆಸಿದ ಮಾತುಕತೆಯ ಆಧಾರದ ಮೇಲೆ ಹೆಚ್ಚಿನ ಚರ್ಚೆಗಳು ಇಂದು ಝೆಲೆನ್ಸ್ಕಿ ಅವರ ಜೊತೆ ನಡೆದವು ಎಂದು ಟ್ರಂಪ್ ತಮ್ಮ ಟ್ರೂತ್ ಸೋಷಿಯಲ್ ಮೀಡಿಯಾ ವೇದಿಕೆಯಲ್ಲಿ ಹೇಳಿಕೊಂಡಿದ್ದಾರೆ.
ರಷ್ಯಾ-ಉಕ್ರೇನ್ ಕದನ ವಿರಾಮ ಒಪ್ಪಂದಕ್ಕೆ ಸಂಬಂಧಿಸಿದಂತೆ ಮೊನ್ನೆ ಮಂಗಳವಾರ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರೊಂದಿಗೆ ಮಾತನಾಡಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ನಿನ್ನೆ ಉಕ್ರೇನ್ ಅಧ್ಯಕ್ಷ ವೆಲೊಡಿಮಿರ್ ಝೆಲೆನ್ಸ್ಕಿ ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡಿದ್ದಾರೆ.
ಸರಿಯಾದ ದಿಕ್ಕಿನಲ್ಲಿ ಸಾಗುತ್ತಿದೆ
ಉಕ್ರೇನ್ ಅಧ್ಯಕ್ಷ ವೆಲೊಡಿಮಿರ್ ಝೆಲೆನ್ಸ್ಕಿ ಅವರೊಂದಿಗೆ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ದೂರವಾಣಿಯಲ್ಲಿ ಮಾತನಾಡಿರುವ ಡೊನಾಲ್ಡ್ ಟ್ರಂಪ್, ಕದನ ವಿರಾಮ ಒಪ್ಪಂದಕ್ಕೆ ಸಹಿ ಹಾಕಲು ರಷ್ಯಾ ಮತ್ತು ಉಕ್ರೇನ್ ಮಂಡಿಸಿರುವ ಬೇಡಿಕೆಗಳ ಬಗ್ಗೆ ಸುದೀರ್ಘವಾಗಿ ಮಾತನಾಡಿದ್ದಾರೆ ಎಂದು ಮೂಲಗಳು ಖಚಿತಪಡಿಸಿವೆ.
ಟ್ರಂಪ್ ಅವರೊಂದಿಗಿನ ದೂರವಾಣಿ ಮಾತುಕತೆಯಲ್ಲಿ, ಅಮೆರಿಕವು ಉಕ್ರೇನ್‌ಗೆ ನೀಡುತ್ತಿರುವ ಯುದ್ಧತಂತ್ರದ ಬೆಂಬಲವನ್ನು ನಿಲ್ಲಿಸದಂತೆ ಝೆಲೆನ್ಸ್ಕಿ ಮನವಿ ಮಾಡಿದ್ದಾರೆ. ಆದರೆ ವ್ಲಾಡಿಮಿರ್ ಪುಟಿನ್ ಕದನ ವಿರಾಮ ಒಪ್ಪಂದಕ್ಕೆ ರಷ್ಯಾ ಸಹಿ ಮಾಡಬೇಕಾದರೆ, ಉಕ್ರೇನ್‌ಗೆ ನೀಡಲಾಗುತ್ತಿರುವ ಎಲ್ಲಾ ಯುದ್ಧತಂತ್ರದ ಮತ್ತು ಗುಪ್ರಚರ ನೆರವನ್ನು ನಿಲ್ಲಿಸಬೇಕು ಎಂದು ಷರತ್ತು ವಿಧಿಸಿದ್ದಾರೆ.
ಈ ಎಲ್ಲಾ ಬೆಳವಣಿಗೆಗಳ ಕುರಿತು ತಮ್ಮ ಟ್ರೂಥ್ ಸೋಷಿಯಲ್ ಮಿಡಿಯಾದಲ್ಲಿ ಮಾಹಿತಿ ಹಂಚಿಕೊಂಡಿರುವ ಡೊನಾಲ್ಡ್ ಟ್ರಂಪ್, ರಷ್ಯಾ ಮತ್ತು ಉಕ್ರೇನ್‌ನ ಬೇಡಿಕೆಗಳನ್ನು ಈಡೇರಿಸುವ ಪ್ರಾಮಾಣಿಕ ಪ್ರಯತ್ನವನ್ನು ಮುಂದುವರೆಸಿರುವುದಾಗಿ ಹೇಳಿದ್ದಾರೆ.
ಕೆಲವು ದಿನಗಳ ಹಿಂದೆ ಟ್ರಂಪ್ ಅವರ ಓವಲ್ ಕಚೇರಿಯಲ್ಲಿ ಉಕ್ರೇನ್ ಅಧ್ಯಕ್ಷರೊಂದಿಗೆ ಮಾತಿನ ಚಕಮಕಿ ನಂತರ ಉಭಯ ನಾಯಕರ ಸೌಹಾರ್ದಯುತ ಮಾತುಕತೆ ಇದಾಗಿದೆ. ಝೆಲೆನ್ಸ್ಕಿಯವರು ನಂತರ ಅಮೆರಿಕ ಯೋಜನೆಯ ರಷ್ಯಾ ಜೊತೆಗಿನ 30 ದಿನಗಳ ಕದನ ವಿರಾಮವನ್ನು ಒಪ್ಪಿಕೊಂಡಿದ್ದು ಉಕ್ರೇನ್ ನ ಖನಿಜಗಳಿಗೆ ಆದ್ಯತೆ ನೀಡಬೇಕೆಂದು ಬೇಡಿಕೆಯಿಟ್ಟಿದ್ದಾರೆ ಎನ್ನಲಾಗುತ್ತಿದೆ.
ಮೂರು ವರ್ಷಗಳ ಹಿಂದೆ ರಷ್ಯಾ ಪಶ್ಚಿಮ ದೇಶಗಳ ಪರವಾಗಿರುವ ಉಕ್ರೇನ್ ಮೇಲೆ ಆಕ್ರಮಣ ಮಾಡಿ ಇನ್ನೂ ಅದರ ಶೇಕಡಾ 20 ರಷ್ಟು ಪ್ರದೇಶವನ್ನು ಆಕ್ರಮಿಸಿಕೊಂಡಿದೆ. ಉಕ್ರೇನ್ ಮತ್ತು ರಷ್ಯಾ ಎರಡೂ ವಿದ್ಯುತ್ ಸ್ಥಾವರಗಳ ಮೇಲೆ ತಾತ್ಕಾಲಿಕ ಕದನ ವಿರಾಮವನ್ನು ಬೆಂಬಲಿಸುವುದಾಗಿ ಹೇಳಿದ್ದರೂ, ಪರಸ್ಪರ ನಿಲುಗಡೆಗೆ ಬದ್ಧವಾಗಿಲ್ಲ. ಯುದ್ಧಪೀಡಿತ ರಾಷ್ಟ್ರದ ಮೇಲೆ ರಷ್ಯಾದ ಕ್ಷಿಪಣಿ ಮತ್ತು ಡ್ರೋನ್‌ಗಳ ರಾತ್ರೋರಾತ್ರಿ ದಾಳಿ ನಡೆದು ಓರ್ವ ಮೃತಪಟ್ಟು ಎರಡು ಆಸ್ಪತ್ರೆಗಳಿಗೆ ಹಾನಿಯಾಗಿದೆ ಎಂದು ಉಕ್ರೇನ್‌ನ ರಕ್ಷಣಾ ಸಚಿವಾಲಯ ಹೇಳಿದೆ.
ಇಂದು ಪುಟಿನ್ ಪೂರ್ಣ ಕದನ ವಿರಾಮದ ಪ್ರಸ್ತಾಪವನ್ನು ಸಂಪೂರ್ಣವಾಗಿ ಪರಿಣಾಮಕಾರಿಯಾಗಿ ಜಾರಿಗೆ ತರಲು ಒಪ್ಪುತ್ತಿಲ್ಲ ಎಂದು ಝೆಲೆನ್ಸ್ಕಿ ಹೇಳುತ್ತಾರೆ. ಉಕ್ರೇನ್‌ನ ರಾಷ್ಟ್ರೀಯ ರೈಲ್ವೆ ಸೇವೆಯು ಬ್ಯಾರೇಜ್ ಮಧ್ಯ ಡ್ನಿಪ್ರೊಪೆಟ್ರೋವ್ಸ್ಕ್ ಪ್ರದೇಶದಲ್ಲಿ ರೈಲ್ವೆ ಇಂಧನ ಮೂಲಸೌಕರ್ಯದ ಮೇಲೆ ಪರಿಣಾಮ ಬೀರಿದೆ ಎಂದು ಹೇಳಿದೆ.
ರಷ್ಯಾದ ರಕ್ಷಣಾ ಸಚಿವಾಲಯವು ದೇಶದ ದಕ್ಷಿಣದಲ್ಲಿರುವ ತೈಲ ಡಿಪೋದ ಮೇಲೆ ರಾತ್ರೋರಾತ್ರಿ ದಾಳಿ ಮಾಡಿದೆ. ಇದು ಹೋರಾಟವನ್ನು ಕೊನೆಗೊಳಿಸಲು ಟ್ರಂಪ್ ಅವರ ಪ್ರಯತ್ನಗಳನ್ನು ಹಳಿತಪ್ಪಿಸುವ ಗುರಿಯನ್ನು ಹೊಂದಿದೆ ಎಂದು ಆರೋಪಿಸಿದ್ದಾರೆ.
ವಾಷಿಂಗ್ಟನ್‌ನಲ್ಲಿ, ಯುಎಸ್ ರಾಯಭಾರಿ ಸ್ಟೀವ್ ವಿಟ್ಕಾಫ್ ಯುದ್ಧವನ್ನು ಕೊನೆಗೊಳಿಸುವ ಸಂಭಾವ್ಯ ಒಪ್ಪಂದದ ಕುರಿತು ತಾಂತ್ರಿಕ ಮಾತುಕತೆಗಳು ಸೋಮವಾರ ಸೌದಿ ಅರೇಬಿಯಾದಲ್ಲಿ ಪ್ರಾರಂಭವಾಗಲಿವೆ ಎಂದು ಹೇಳಿದ್ದಾರೆ. ಒಂದೆರಡು ವಾರಗಳಲ್ಲಿ ಕದನ ವಿರಾಮ ಒಪ್ಪಂದವನ್ನು ತಲುಪಬಹುದು ಎಂದು ಅವರು ಹೇಳುತ್ತಾರೆ.
Advertisement