
ವಾಷಿಂಗ್ಟನ್: ಭಾರತ ಮತ್ತು ಪಾಕಿಸ್ತಾನ ನಡುವಿನ ಸಂಭಾವ್ಯ ಪರಮಾಣು ಸಂಘರ್ಷವನ್ನು ಅಮೆರಿಕದ ಮಧ್ಯ ಪ್ರವೇಶಿಸಿ ತಡೆಹಿಡಿದಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೋಮವಾರ ಹೇಳಿದ್ದಾರೆ.
ನಾಲ್ಕು ರಾತ್ರಿ ಗಡಿಯಾಚೆಗೆ ನಡೆದ ಸೇನಾ ಕಾರ್ಯಾಚರಣೆ ನಂತರ ಉಭಯ ರಾಷ್ಟ್ರಗಳು ಕದನ ವಿರಾಮ ಒಪ್ಪಂದಕ್ಕೆ ಒಪ್ಪಿಗೆ ನೀಡಿದ ನಂತರ ಡೊನಾಲ್ಡ್ ಟ್ರಂಪ್ ಈ ರೀತಿಯ ಹೇಳಿಕೆ ನೀಡಿದ್ದಾರೆ.
ಶ್ವೇತ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಟ್ರಂಪ್, ಪರಮಾಣು ಸಂಘರ್ಷವನ್ನು ನಾವು ತಡೆದಿದ್ದೇವೆ. ಕೆಟ್ಟ ಪರಮಾಣು ಯುದ್ಧ ನಡೆದು ಲಕ್ಷಾಂತರ ಜನರು ಸಾವನ್ನಪ್ಪುವ ಸಾಧ್ಯತೆ ಇರುವುದಾಗಿ ನನಗೆ ಅನಿಸಿತು. ಹಾಗಾಗಿ ಅದರ ಬಗ್ಗೆ ನಾನು ತುಂಬಾ ಹೆಮ್ಮೆ ಪಡುತ್ತೇನೆ. ಬಿಕ್ಕಟ್ಟನ್ನು ಶಮನಗೊಳಿಸುವಲ್ಲಿ ಅಮೆರಿಕದ ರಾಜತಾಂತ್ರಿಕ ಪ್ರಯತ್ನಗಳು ನಿರ್ಣಾಯಕ ಪಾತ್ರ ವಹಿಸಿವೆ ಎಂದರು.
ಭಾರತ ಹಾಗೂ ಪಾಕಿಸ್ತಾನದೊಂದಿಗೆ ಸಾಕಷ್ಟು ವ್ಯಾಪಾರ ಮಾಡಲು ಹೊರಟ್ಟಿದ್ದೇವೆ. ಈಗ ಭಾರತದೊಂದಿಗೆ ಮಾತುಕತೆ ನಡೆಸುತ್ತಿದ್ದೇವೆ. ಶೀಘ್ರದಲ್ಲಿಯೇ ಪಾಕಿಸ್ತಾನದೊಂದಿಗೆ ಮಾತುಕತೆ ನಡೆಸಲಿದ್ದೇವೆ ಎಂದು ತಿಳಿಸಿದರು.
ಈ ಹಿಂದೆ ಸಾಮಾಜಿಕ ಜಾಲತಾಣ ಎಕ್ಸ್ ಮೂಲಕ ಫೋಸ್ಟ್ ಮಾಡುವ ಮೂಲಕ ಕದನ ವಿರಾಮದ ಮೊದಲ ಕ್ರೆಡಿಟ್ ನ್ನು ಟ್ರಂಪ್ ತೆಗೆದುಕೊಂಡಿದ್ದರು. ಸಾಮಾನ್ಯ ತಿಳುವಳಿಕೆ ಮತ್ತು ಅತ್ಯುತ್ತಮವಾಗಿ ನಡೆದುಕೊಂಡಿದ್ದಕ್ಕೆ ಎರಡೂ ದೇಶಗಳಿಗೆ ಅಭಿನಂದನೆಗಳು ಎಂದು ಹೆಡ್ ಮಾಸ್ಟರ್ ಟೋನ್ ನಲ್ಲಿ ಬರೆದುಕೊಂಡಿದ್ದರು.
ಕುತೂಹಲಕಾರಿ ಸಂಗತಿಯೆಂದರೆ, ಪಾಕಿಸ್ತಾನ ಅಥವಾ ಭಾರತದಿಂದ ಯಾವುದೇ ಅಧಿಕೃತ ಪ್ರಕಟಣೆ ಹೊರಬೀಳುವ ಮುನ್ನವೇ ಟ್ರಂಪ್ ಕದನ ವಿರಾಮ ಒಪ್ಪಂದ ಘೋಷಣೆ ಮಾಡಿದ್ದರು. ಇದು ತೀವ್ರ ಟೀಕೆಗಳಿಗೂ ಗುರಿಯಾಗಿದೆ.
ಭಾರತ-ಪಾಕಿಸ್ತಾನ ವಿಚಾರದಲ್ಲಿ ಮೂರನೇ ವ್ಯಕ್ತಿಯ ಮಧ್ಯಸ್ಥಿಕೆ ಬಗ್ಗೆ ವಿರೋಧ ಪಕ್ಷ ಕಾಂಗ್ರೆಸ್ ತೀವ್ರ ವಿರೋಧ ವ್ಯಕ್ತಪಡಿಸಿದೆ. ಈ ವಿಚಾರದಲ್ಲಿ ಮೂರನೇ ವ್ಯಕ್ತಿ ಮಧ್ಯಪ್ರವೇಶಿಸಿದ್ದಕ್ಕೆ ಕಾಂಗ್ರೆಸ್, ಎಎಪಿ ಸೇರಿದಂತೆ ಹಲವು ವಿರೋಧ ಪಕ್ಷಗಳು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ಮುಂದುವರೆಸಿವೆ.
Advertisement