
ಮೇವಿಲ್ಲೆ: 2022 ರಲ್ಲಿ ನ್ಯೂಯಾರ್ಕ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ವೇದಿಕೆ ಮೇಲಿದ್ದ ಭಾರತೀಯ ಮೂಲದ ಖ್ಯಾತ ಲೇಖಕ ಸಲ್ಮಾನ್ ರಶ್ದಿ ಅವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ 27 ವರ್ಷದ ಹಾದಿ ಮಟಾರ್‌ಗೆ 25 ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ.
ಅಮೆರಿಕನ್-ಲೆಬನಾನಿನ ಹಾದಿ ಮಟಾರ್, 77 ವರ್ಷದ ಸಲ್ಮಾನ್ ರಶ್ದಿ ಮೇಲೆ ಮುಗಿಬಿದ್ದು, ಅವರನ್ನು ಕೊಲೆ ಮಾಡಲು ಯತ್ನಿಸಿದ್ದರು. ಹರಿತವಾದ ಚಾಕುವಿನಿಂದ ರಶ್ದಿ ಕುತ್ತಿಗೆಗೆ ಇರಿದಿದ್ದ. ಘಟನೆಯಲ್ಲಿ ರಶ್ದಿ ಅವರು ಒಂದು ಕಣ್ಣು ಕಳೆದುಕೊಂಡಿದ್ದಾರೆ.
ಅಪರಾಧಿಗೆ ಶಿಕ್ಷೆ ವಿಧಿಸುವ ಸಮಯದಲ್ಲಿ ರಶ್ದಿ ಅವರು ಕೋರ್ಟ್ ನಲ್ಲಿ ಹಾಜರಾಗಲಿಲ್ಲ. ಆದರೆ ಲಿಖಿತ ಹೇಳಿಕೆ ಸಲ್ಲಿಸಿದರು. ವಿಚಾರಣೆಯ ಸಮಯದಲ್ಲಿ ಅವರು ಸಾಕ್ಷ್ಯ ನುಡಿದಿದ್ದರು ಮತ್ತು ಮುಖವಾಡ ಧರಿಸಿದ ದಾಳಿಕೋರ ಭಾಷಣ ಮಾಡಲು ಹೊರಟಿದ್ದ ತಮ್ಮ ಮೇಲೆ ಹಲವು ಬಾರಿ ಇರಿದ ಬಗ್ಗೆ ವಿವರಿಸಿದ್ದರು.
ಸಲ್ಮಾನ್ ರಶ್ದಿ ಅವರು ತಮ್ಮ 'ದಿ ಸಟಾನಿಕ್ ವರ್ಸಸ್' ಕೃತಿಯಲ್ಲಿ ಇಸ್ಲಾಂ ಧರ್ಮಕ್ಕೆ ವಿರುದ್ಧವಾಗಿ ಬರೆದಿದ್ದಾರೆ ಎಂಬ ಕಾರಣಕ್ಕೆ ಹಾದಿ ಮಟಾರ್ ಅವರನ್ನು ಕೊಲೆ ಮಾಡಲು ಯತ್ನಿಸಿದ್ದ. ಇದೀಗ ಆತನಿಗೆ ಶಿಕ್ಷೆ ಘೋಷಣೆಯಾಗಿದ್ದು, 25 ವರ್ಷ ಜೈಲು ಶಿಕ್ಷೆ ನೀಡಲಾಗಿದೆ.
ಮಟಾರ್ ಈಗ ಭಯೋತ್ಪಾದನೆ ಆರೋಪಗಳ ಮೇಲೆ ಪ್ರತ್ಯೇಕ ಫೆಡರಲ್ ವಿಚಾರಣೆಯನ್ನು ಎದುರಿಸುತ್ತಿದ್ದಾರೆ. ಆದರೆ ಭಯೋತ್ಪಾದನೆ ಆರೋಪ ಪ್ರಕರಣಗಳಲ್ಲಿ ಮಟಾರ್ ತಪ್ಪೊಪ್ಪಿಕೊಂಡಿಲ್ಲ.
2022ರ ಆಗಸ್ಟ್ 22ರಂದು ಅಮೆರಿಕದ ಪಶ್ಚಿಮ ನ್ಯೂಯಾರ್ಕ್‌ನಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮವೊಂದರಲ್ಲಿ ಭಾಷಣ ಮಾಡಲು ಬಂದಿದ್ದ ಸಲ್ಮಾನ್ ರಶ್ದಿ ಅವರು ವೇದಿಕೆ ಮೇಲಿದ್ದಾಗಲೇ ಹಲ್ಲೆ ನಡೆದಿತ್ತು.
Advertisement