
ನ್ಯೂಯಾರ್ಕ್: ಅಮೆರಿಕದ ಮಾಜಿ ಅಧ್ಯಕ್ಷ 82 ವರ್ಷದ ಜೋ ಬೈಡನ್ ಅವರಿಗೆ ಪ್ರಾಸ್ಟೇಟ್ ಕ್ಯಾನ್ಸರ್ ಇರುವುದು ಪತ್ತೆಯಾಗಿದೆ. ಜೋ ಬೈಡನ್ ಅವರಿಗೆ ಪ್ರಾಸ್ಟೇಟ್ ಕ್ಯಾನ್ಸರ್ ಬಾಧಿಸುತ್ತಿರುವುದನ್ನು ಅವರ ಕಚೇರಿ ಅಧಿಕೃತವಾಗಿ ಪ್ರಕಟಿಸಿದೆ.
ಅವರ ವೈದ್ಯಕೀಯ ತಪಾಸಣೆಗಳು ಭಯಾನಕ ಬೆಳವಣಿಗೆಯನ್ನು ಬಹಿರಂಗಪಡಿಸಿದ ಬೆನ್ನಲ್ಲೇ ಕ್ಯಾನ್ಸರ್ ರೋಗಲಕ್ಷಣ ಪತ್ತೆಯಾಗಿದೆ. ಮೂತ್ರನಾಳದ ರೋಗಲಕ್ಷಣಗಳು ಕಳೆದ ವಾರ ಪತ್ತೆಯಾದ ಬೆನ್ನಲ್ಲೇ ವೈದ್ಯರು ತೀವ್ರ ವೈದ್ಯಕೀಯ ಪರೀಕ್ಷೆಗಳನ್ನು ನಡೆಸಿದ್ದರು.
ಅವರ ಜನನೇಂದ್ರಿಯ ಗ್ರಂಥಿಯಲ್ಲಿ ಸಣ್ಣ ಗಂಟು ದೈಹಿಕ ತಪಾಸಣೆ ವೇಳೆ ಕಂಡುಬಂದಿತ್ತು. ಇದರಿಂದಾಗಿ ಹೆಚ್ಚಿನ ವೈದ್ಯಕೀಯ ಪರೀಕ್ಷೆ ನಡೆಸಲಾಗಿತ್ತು. ಶುಕ್ರವಾರ ಪ್ರಾಸ್ಟೇಟ್ ಕ್ಯಾನ್ಸರ್ ಇರುವುದನ್ನು ವೈದ್ಯರ ಪತ್ತೆ ಮಾಡಿದ್ದು, ಇದರ ಕಣಗಳು ಈಗಾಗಲೇ ಎಲುಬುಗಳಿಗೂ ಹರಡಿವೆ ಎಂದು ತಿಳಿದುಬಂದಿದೆ.
ಇದು ಹೆಚ್ಚಿನ ಆಕ್ರಮಣಕಾರಿ ವಿಧಾನದ ರೋಗವಾಗಿದ್ದು, ಇದು ಹಾರ್ಮೋನ್ ಸೂಕ್ಷ್ಮ ಕ್ಯಾನ್ಸರ್ ಆಗಿದ್ದು, ಪರಿಣಾಮಕಾರಿಯಾಗಿ ನಿರ್ವಹಿಸುವುದು ಅನಿವಾರ್ಯವಾಗಿದೆ" ಎಂದು ಅಧಿಕೃತ ಹೇಳಿಕೆಯಲ್ಲಿ ಸ್ಪಷ್ಟಪಡಿಸಲಾಗಿದೆ. ಲಭ್ಯವಿರುವ ಚಿಕಿತ್ಸೆ ಬಗ್ಗೆ ಬೈಡನ್ ಹಾಗೂ ಅವರ ಕುಟಂಬ ಸದಸ್ಯರು ವೈದ್ಯರ ಜತೆ ಸಮಾಲೋಚಿಸುತ್ತಿದ್ದಾರೆ.
ಪ್ರಾಸ್ಟೇಟ್ ಕ್ಯಾನ್ಸರ್ ತೀವ್ರತೆಯನ್ನು ಗ್ಲೇಸನ್ ಸ್ಕೋರ್ ನಿಂದ ರೇಟಿಂಗ್ ಮಾಡಲಾಗುತ್ತದೆ. ಇದು ಆರೋಗ್ಯಕರ ಕಣಗಳಿಗೆ ಹೋಲಿಸಿದರೆ ಕ್ಯಾನ್ಸರ್ ಕಣಗಳು ಹೇಗೆ ಅಸಹಜವಾಗಿ ಕಂಡುಬರುತ್ತವೆ ಎನ್ನುವುದನ್ನು ತೋರಿಸುತ್ತದೆ. ಬೈಡನ್ ಅವರ ಸ್ಕೋರ್ 9 ಆಗಿದ್ದು, ಕ್ಯಾನ್ಸರ್ ಅತ್ಯಂತ ಆಕ್ರಮಣಕಾರಿ ವಿಧಾನದ್ದಾಗಿದೆ ಎಂದು ತಿಳಿಸುತ್ತದೆ.
ಅಮೆರಿಕದ ಇತಿಹಾಸದಲ್ಲಿ ಜೋ ಬೈಡನ್ ಅವರು ವಯಸ್ಸಿನಲ್ಲಿ ಅತ್ಯಂತ ಹಿರಿಯ ಅಧ್ಯಕ್ಷನಾಗಿ ನಿರ್ಗಮಿಸಿದ್ದಾರೆ. ಅವರು ಅಮೆರಿಕದ 46 ನೇ ಅಧ್ಯಕ್ಷರಾಗಿ 2021ರಿಂದ 2025ರವರೆಗೆ ಆಡಳಿತ ನಡೆಸಿದ್ದರು. ತಮ್ಮ ವಯಸ್ಸು ಹಾಗೂ ಆರೋಗ್ಯದ ಕಾರಣಗಳಿಂದ ಬೈಡನ್ ಅವರು ಎರಡನೇ ಬಾರಿಗೆ ಅಧ್ಯಕ್ಷ ಸ್ಥಾನದ ಚುನಾವಣೆಗೆ ಸ್ಪರ್ಧಿಸಲಿಲ್ಲ. ವಯಸ್ಸು ಹಾಗೂ ಆರೋಗ್ಯದ ಬಗ್ಗೆ ವ್ಯಾಪಕ ಟೀಕೆಗಳನ್ನೂ ಅವರು ಎದುರಿಸಿದ್ದರು.
Advertisement