
ಗಾಜಾ ಪಟ್ಟಿಯಲ್ಲಿ ಎರಡು ಮಿಲಿಯನ್ ಜನ "ಹಸಿವಿನಿಂದ ಬಳಲುತ್ತಿದ್ದಾರೆ", ಉದ್ದೇಶಪೂರ್ವಕವಾಗಿ ಸಹಾಯವನ್ನು ನಿರ್ಬಂಧಿಸಿರುವುದರಿಂದ ಕ್ಷಾಮದ ಅಪಾಯ ಹೆಚ್ಚಾಗುತ್ತಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯಸ್ಥರು ಸೋಮವಾರ ಎಚ್ಚರಿಸಿದ್ದಾರೆ.
ಗಾಜಾ ಪ್ರವೇಶಿಸಲು ಅನುಮತಿ ನೀಡಿದರೆ WHO ಮತ್ತು ಇತರ UN ಸಂಸ್ಥೆಗಳು ಪ್ಯಾಲೆಸ್ಟೀನಿಯನ್ ಪ್ರದೇಶಕ್ಕೆ ಸಹಾಯವನ್ನು ತಲುಪಿಸಲು ಸಿದ್ಧವಾಗಿವೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯಸ್ಥ ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್ ಅವರು ತಿಳಿಸಿದ್ದಾರೆ.
ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಸೋಮವಾರ, ತಮ್ಮ ಸರ್ಕಾರ ಸೀಮಿತ ಆಹಾರ ಸಹಾಯವನ್ನು ನೀಡುವುದಾಗಿ ಘೋಷಿಸಿದ ನಂತರ, "ರಾಜತಾಂತ್ರಿಕ ಕಾರಣಗಳಿಗಾಗಿ" ಗಾಜಾದಲ್ಲಿ ಕ್ಷಾಮವನ್ನು ತಡೆಗಟ್ಟುವುದು ಇಸ್ರೇಲ್‌ಗೆ ಅತ್ಯಅಗತ್ಯವಾಗಿದೆ ಎಂದು ಹೇಳಿದ್ದಾರೆ.
"ಇತ್ತೀಚಿನ ದಿಗ್ಬಂಧನದ ಎರಡು ತಿಂಗಳ ನಂತರ, ಗಾಜಾ ಪಟ್ಟಿಯಲ್ಲಿ ಎರಡು ಮಿಲಿಯನ್ ಜನ ಹಸಿವಿನಿಂದ ಬಳಲುತ್ತಿದ್ದಾರೆ". ಆದರೆ 160,000 ಮೆಟ್ರಿಕ್ ಟನ್ ಆಹಾರವನ್ನು "ಗಡಿಯಲ್ಲಿ ನಿರ್ಬಂಧಿಸಲಾಗಿದೆ" ಎಂದು ಟೆಡ್ರೊಸ್ ಅವರು ತಿಳಿಸಿದ್ದಾರೆ.
"ಪ್ರಸ್ತುತ ದಿಗ್ಬಂಧನದಲ್ಲಿ ಆಹಾರ ಸೇರಿದಂತೆ ಮಾನವೀಯ ಸಹಾಯವನ್ನು ಉದ್ದೇಶಪೂರ್ವಕವಾಗಿ ತಡೆಹಿಡಿಯಲಾಗಿರುವುದರಿಂದ ಗಾಜಾದಲ್ಲಿ ಕ್ಷಾಮದ ಅಪಾಯ ಹೆಚ್ಚುತ್ತಿದೆ" ಎಂದು ಅವರು ಹೇಳಿದ್ದಾರೆ.
ವಾರ್ಷಿಕ ವಿಶ್ವ ಆರೋಗ್ಯ ಸಭೆಯ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಟೆಡ್ರೊಸ್, ಹೆಚ್ಚುತ್ತಿರುವ ಹಗೆತನ, ಸ್ಥಳಾಂತರಿಸುವ ಆದೇಶಗಳು, ಮತ್ತು ಗಾಜಾ ನೆರವಿಗೆ ದಿಗ್ಬಂಧನವು "ಈಗಾಗಲೇ ಮಂಡಿಯೂರಿರುವ ಆರೋಗ್ಯ ವ್ಯವಸ್ಥೆಯಿಂದ ಸಾವುನೋವುಗಳ ಸಂಖ್ಯೆ ಹೆಚ್ಚುತ್ತದೆ" ಎಂದು ಎಚ್ಚರಿಸಿದ್ದಾರೆ.
Advertisement