
ಇಸ್ಲಾಮಾಬಾದ್: ಪಾಕಿಸ್ತಾನ ಸರ್ಕಾರ ಗುರುವಾರ ಭಾರತೀಯ ಹೈಕಮಿಷನ್ ಸಿಬ್ಬಂದಿಯೊಬ್ಬರನ್ನು ಉಚ್ಚಾಟನೆ ಮಾಡುವುದಾಗಿ ಘೋಷಿಸಿದೆ.
ಬೇಹುಗಾರಿಕೆಯಲ್ಲಿ ತೊಡಗಿರುವ ಆರೋಪದ ಮೇಲೆ ಪಾಕಿಸ್ತಾನ ಹೈಕಮಿಷನ್‌ನಲ್ಲಿ ಕೆಲಸ ಮಾಡುತ್ತಿರುವ ಪಾಕಿಸ್ತಾನಿ ಅಧಿಕಾರಿಯೊಬ್ಬರನ್ನು ನಿನ್ನೆ ಬುಧವಾರ ಭಾರತ ಹೊರಹಾಕಿದ್ದು, ಒಂದು ವಾರದಲ್ಲಿ ಎರಡನೇ ಬಾರಿಗೆ ಇದು ನಡೆದಿರುವ ಗಡೀಪಾರು ಎಂದು ಈ ವಿಷಯದ ಬಗ್ಗೆ ತಿಳಿದಿರುವವರು ಹೇಳುತ್ತಾರೆ.
ಪಾಕಿಸ್ತಾನ ಸರ್ಕಾರವು ಇಸ್ಲಾಮಾಬಾದ್‌ನ ಭಾರತದ ಹೈಕಮಿಷನ್‌ನ ಸಿಬ್ಬಂದಿಯನ್ನು ಅವರ ವಿಶೇಷ ಸ್ಥಾನಮಾನಕ್ಕೆ ವಿರುದ್ಧವಾದ ಚಟುವಟಿಕೆಗಳಲ್ಲಿ ತೊಡಗಿದ್ದಕ್ಕಾಗಿ ಪರ್ಸನಾ ನಾನ್ ಗ್ರಾಟಾ ಎಂದು ಘೋಷಿಸಿದೆ. ಸಂಬಂಧಪಟ್ಟ ಅಧಿಕಾರಿಯನ್ನು 24 ಗಂಟೆಗಳ ಒಳಗೆ ಪಾಕಿಸ್ತಾನ ತೊರೆಯುವಂತೆ ನಿರ್ದೇಶಿಸಲಾಗಿದೆ" ಎಂದು ವಿದೇಶಾಂಗ ಕಚೇರಿಯ ಹೇಳಿಕೆ ತಿಳಿಸಿದೆ.
ಮೇ 13 ರಂದು, ಬೇಹುಗಾರಿಕೆಯಲ್ಲಿ ತೊಡಗಿರುವ ಆರೋಪದ ಮೇಲೆ ಭಾರತ ಮತ್ತೊಬ್ಬ ಪಾಕಿಸ್ತಾನಿ ಅಧಿಕಾರಿಯನ್ನು ಉಚ್ಚಾಟಿಸಿತ್ತು. ಭಾರತದ ಕ್ರಮದ ನಂತರ ಪ್ರತೀಕಾರವೆಂಬಂತೆ ಪಾಕಿಸ್ತಾನವು ಇಸ್ಲಾಮಾಬಾದ್‌ನಲ್ಲಿರುವ ಭಾರತೀಯ ಹೈಕಮಿಷನ್‌ನಲ್ಲಿ ನಿಯೋಜಿಸಲಾದ ಭಾರತೀಯ ಸಿಬ್ಬಂದಿಯನ್ನು ಸಹ ಉಚ್ಚಾಟಿಸಿತ್ತು.
ಈ ನಿರ್ಧಾರವನ್ನು ತಿಳಿಸಲು ಭಾರತೀಯ ಚಾರ್ಜ್ ಡಿ'ಅಫೇರ್ಸ್ ಅವರನ್ನು ವಿದೇಶಾಂಗ ಸಚಿವಾಲಯಕ್ಕೆ ಕರೆಯಲಾಗಿತ್ತು. ಭಾರತೀಯ ಹೈಕಮಿಷನ್‌ನ ಯಾವುದೇ ರಾಜತಾಂತ್ರಿಕರು ಅಥವಾ ಸಿಬ್ಬಂದಿ ತಮ್ಮ ಸವಲತ್ತುಗಳು ಮತ್ತು ಸ್ಥಾನಮಾನವನ್ನು ಯಾವುದೇ ರೀತಿಯಲ್ಲಿ ದುರುಪಯೋಗಪಡಿಸಿಕೊಳ್ಳಬಾರದು ಎಂದು ಒತ್ತಿ ಹೇಳಲಾಗಿದೆ.
26 ಜೀವಗಳನ್ನು ಬಲಿ ಪಡೆದ ಪಹಲ್ಗಾಮ್ ದಾಳಿಯ ನಂತರ ಭಾರತ ಮತ್ತು ಪಾಕಿಸ್ತಾನದ ನಡುವಿನ ಸಂಬಂಧ ಮತ್ತಷ್ಟು ಹದಗೆಟ್ಟಿದೆ. ಮೇ 7 ರ ಮುಂಜಾನೆ ಪಾಕಿಸ್ತಾನ ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿನ ಭಯೋತ್ಪಾದಕ ಮೂಲಸೌಕರ್ಯಗಳ ಮೇಲೆ ಭಾರತ ನಿಖರವಾದ ದಾಳಿ ನಡೆಸಿತು, ಅದರ ನಂತರ ಪಾಕಿಸ್ತಾನವು ಮೇ 8, 9 ಮತ್ತು 10 ರಂದು ಭಾರತೀಯ ಸೇನಾ ನೆಲೆಗಳ ಮೇಲೆ ದಾಳಿ ಮಾಡಲು ಪ್ರಯತ್ನಿಸಿತು.
ಪಾಕಿಸ್ತಾನದ ಕ್ರಮಗಳಿಗೆ ಭಾರತ ಬಲವಾಗಿ ಪ್ರತಿಕ್ರಿಯಿಸಿತು. ಕೊನೆಗೆ ಮೇ 10 ರಂದು ಎರಡೂ ಕಡೆಯ ಮಿಲಿಟರಿ ಕಾರ್ಯಾಚರಣೆಗಳ ಮಹಾನಿರ್ದೇಶಕರ ನಡುವಿನ ಮಾತುಕತೆಯ ನಂತರ ಮಿಲಿಟರಿ ಕ್ರಮಗಳನ್ನು ನಿಲ್ಲಿಸುವ ಬಗ್ಗೆ ಒಪ್ಪಂದ ಮಾಡುವ ಮೂಲಕ ಕದನಕ್ಕೆ ವಿರಾಮ ಘೋಷಿಸಲಾಯಿತು.
Advertisement