
ಪಂಜಾಬ್: ಪಹಲ್ಗಾಮ್ ಭಯೋತ್ಪಾದನಾ ದಾಳಿಯ ಹಿಂದಿನ ಮಾಸ್ಟರ್‌ಮೈಂಡ್ ಎಂದು ಹೇಳಲಾದ ಲಷ್ಕರ್-ಎ-ತೊಯ್ಬಾ (LET) ಕಮಾಂಡರ್ ಸೈಫುಲ್ಲಾ ಕಸೂರಿ ಬುಧವಾರ ಮತ್ತೆ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾನೆ. ಪಾಕಿಸ್ತಾನದ ರಾಜಕೀಯ ನಾಯಕರು ಮತ್ತು ಇತರ ವಾಂಟೆಡ್ ಭಯೋತ್ಪಾದಕರೊಂದಿಗೆ ರಾಜಕೀಯ ರ‍್ಯಾಲಿಯಲ್ಲಿ ವೇದಿಕೆ ಹಂಚಿಕೊಂಡಿದ್ದಾನೆ.
ಪಾಕಿಸ್ತಾನದ ಪರಮಾಣು ಪರೀಕ್ಷೆಗಳ ಸ್ಮರಣಾರ್ಥ ಪಂಜಾಬ್ ಪ್ರಾಂತ್ಯದ ಕಸೂರ್‌ನಲ್ಲಿ ಪಾಕಿಸ್ತಾನ್ ಮಾರ್ಕಾಜಿ ಮುಸ್ಲಿಂ ಲೀಗ್ (PMML)ಪಕ್ಷ ಆಯೋಜಿಸಿದ್ದ ರ‍್ಯಾಲಿಯಲ್ಲಿ ಪಾಲ್ಗೊಂಡ ಸೈಫುಲ್ಲಾ ಕಸೂರಿ, ಭಾರತದ ವಿರುದ್ಧ ಘೋಷಣೆ ಕೂಗಿ, ಪ್ರಚೋದನಾಕಾರಿ ಭಾಷಣ ಮಾಡಿದ್ದಾನೆ.
ಈಗ ನಾನು ಇಡೀ ಪ್ರಪಂಚದಲ್ಲಿ ಪ್ರಸಿದ್ಧಿ: ಪಹಲ್ಗಾಮ್ ಭಯೋತ್ಪಾದಕ ದಾಳಿಯ ಮಾಸ್ಟರ್ ಮೈಂಡ್ ಎಂದು ನನ್ನನ್ನು ದೂಷಿಸಲಾಯಿತು. ಈಗ ನನ್ನ ಹೆಸರು ಇಡೀ ಪ್ರಪಂಚದಲ್ಲಿ ಪ್ರಸಿದ್ಧವಾಗಿದೆ ಎಂದು ಹೇಳಿದ್ದಾನೆ. ಎಲ್‌ಇಟಿ ಸಂಸ್ಥಾಪಕ ಹಫೀಜ್ ಸಯೀದ್ ಅವರ ಪುತ್ರ ಮತ್ತು ಭಾರತದಿಂದ ಭಯೋತ್ಪಾದಕ ಎಂದು ಘೋಷಿಸಲಾದ ತಲ್ಹಾ ಸಯೀದ್ ಮತ್ತಿತರರ ಉಗ್ರರು ಇದರಲ್ಲಿ ಪಾಲ್ಗೊಂಡಿದ್ದರು.
ಆಫರೇಷನ್ ಸಿಂಧೂರ್ ನಲ್ಲಿ ಹತನಾದ ಉಗ್ರನ ಹೆಸರಿನಲ್ಲಿ ಹಲವು ಯೋಜನೆ: ಅಲಹಾಬಾದ್‌ನಲ್ಲಿ "ಮುದಸ್ಸಿರ್ ಶಹೀದ್" ಹೆಸರಿನ ಕೇಂದ್ರ ರಸ್ತೆ ಮತ್ತು ಆಸ್ಪತ್ರೆಯನ್ನು ನಿರ್ಮಿಸುವ ಯೋಜನೆಗಳನ್ನು ಕಸೂರಿ ಆಲಿಯಾಸ್ ಖಲೀದ್ ಘೋಷಿಸಿದ್ದಾನೆ. ಪಹಲ್ಗಾಮ್ ಹತ್ಯಾಕಾಂಡದ ನಂತರ ಭಾರತ ನಡೆಸಿದ ಆಪರೇಷನ್ ಸಿಂಧೂರ್ ನಲ್ಲಿ ಹತರಾದ ಉಗ್ರರಲ್ಲಿ ಮುದಾಸಿರ್ ಅಹ್ಮದ್ ಕೂಡಾ ಒಬ್ಬನಾಗಿದ್ದಾನೆ ಎಂದು ಗುಪ್ತಚರ ಮೂಲಗಳು ತಿಳಿಸಿವೆ.
ಜಿಹಾದಿ ಘೋಷಣೆ ಕೂಗಿದ ಉಗ್ರ ತಲ್ಹಾ ಸಯೀದ್: ಇದೇ ವೇಳೆ ಭಾರತದ ಮೋಸ್ಟ್ ವಾಂಟೆಡ್ ಭಯೋತ್ಪಾದಕರ ಪಟ್ಟಿಯಲ್ಲಿ 32 ನೇ ಸ್ಥಾನದಲ್ಲಿರುವ ತಲ್ಹಾ ಸಯೀದ್, ಜಿಹಾದಿ ಘೋಷಣೆಗಳೊಂದಿಗೆ ಪ್ರಚೋದನಾಕಾರಿ ಭಾಷಣ ಮಾಡಿದ್ದಾನೆ.
PMML ಇತ್ತೀಚಿನ ದಿನಗಳಲ್ಲಿ ಭಾರತ-ವಿರೋಧಿ ವಾಗ್ದಾಳಿಯನ್ನು ಹೆಚ್ಚಿಸಿದ್ದು, ಲಾಹೋರ್, ಕರಾಚಿ, ಇಸ್ಲಾಮಾಬಾದ್, ಫೈಸಲಾಬಾದ್ ಮತ್ತು ಇತರ ನಗರಗಳಲ್ಲಿ ಪ್ರತಿಭಟನೆಗಳನ್ನು ನಡೆಸುತ್ತಿದೆ. ಸಿಂಧೂ ಜಲ ಒಪ್ಪಂದವನ್ನು ಅಮಾನತುಗೊಳಿಸುವುದಕ್ಕಾಗಿ ಭಾರತದ "ಜಲ ಆಕ್ರಮಣ" ಎಂದು ಆರೋಪಿಸಿದೆ. 2008 ರ ಮುಂಬೈ ದಾಳಿಯ ಮಾಸ್ಟರ್‌ಮೈಂಡ್, ಭಯೋತ್ಪಾದಕ ಹಫೀಜ್ ಸಯೀದ್, PMML ನ ಚಟುವಟಿಕೆಗಳ ಹಿಂದಿನ ಸೈದ್ಧಾಂತಿಕ ಶಕ್ತಿಯಾಗಿ ಇನ್ನೂ ಪರಿಗಣಿಸಲ್ಪಟ್ಟಿದ್ದಾನೆ.
Advertisement