

ವಲಸಿಗರಿಗೆ ವೀಸಾ ನೀತಿಯನ್ನು ಕಠಿಣಗೊಳಿಸುತ್ತಿರುವ ಅಮೆರಿಕ, ಈಗ ಮತ್ತಷ್ಟು ವಿಚಿತ್ರ ನಿಬಂಧನೆಗಳನ್ನು ಸೇರಿಸಿದೆ.
ಮಧುಮೇಹ, ಬೊಜ್ಜು, ಹೃದಯ ಸಂಬಂಧಿ ಕಾಯಿಲೆ ಇತ್ಯಾದಿ ಆರೋಗ್ಯ ಸಮಸ್ಯೆಗಳಿರುವ ನಾಗರಿಕರಿಗೆ ವೀಸಾ ನೀಡದಿರಲು ಅಮೆರಿಕದ ಹೊಸ ವೀಸಾ ನೀತಿಯಲ್ಲಿ ನಿರ್ಧರಿಸಲಾಗಿದೆ.
ಅಮೆರಿಕ ಸರ್ಕಾರ ಹೊರಡಿಸಿದ ಹೊಸ ಮಾರ್ಗಸೂಚಿಯಲ್ಲಿ ಈ ಅಂಶ ಇದೆ. ಜಗತ್ತಿನಾದ್ಯಂತ ಇರುವ ಅಮೆರಿಕದ ರಾಯಭಾರ ಕಚೇರಿಗಳಿಗೆ ಹೊಸ ಮಾರ್ಗಸೂಚಿಗಳನ್ನು ಕಳುಹಿಸಿಕೊಡಲಾಗಿದೆ.
ಅಮೆರಿಕದ ವೀಸಾ ಪಡೆಯಲು ಅಭ್ಯರ್ಥಿಗಳ ಆರೋಗ್ಯ ಪರೀಕ್ಷೆ ನಡೆಸುವುದು ಸಾಮಾನ್ಯವಾದ ಪ್ರಕ್ರಿಯೆಯೇ ಆಗಿದೆ. ಆದರೆ, ವೀಸಾ ಮಾರ್ಗಸೂಚಿಗಳಲ್ಲಿ ಅದನ್ನು ಎಲ್ಲಿಯೂ ಸ್ಪಷ್ಟವಾಗಿ ನಮೂದಿಸಿರಲಿಲ್ಲ. ಈಗ ಮಾರ್ಗಸೂಚಿಯಲ್ಲಿ ಸ್ಪಷ್ಟವಾಗಿ ನಮೂದಿಸಿರುವುದರಿಂದ ರಾಯಭಾರ ಅಧಿಕಾರಿಗಳು ಅರ್ಜಿದಾರರ ಆರೋಗ್ಯ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ವೀಸಾ ಅರ್ಜಿ ತಿರಸ್ಕರಿಸುವ ಸಾಧ್ಯತೆ ಇದೆ.
ಅಮೆರಿಕ ಸರ್ಕಾರ ತನ್ನ ನಿವಾಸಿಗಳ ಆರೋಗ್ಯ ಸುರಕ್ಷತೆಗೆ ಸಾಕಷ್ಟು ಹಣ ವ್ಯಯಿಸುತ್ತದೆ. ಅಲ್ಲಿನ ಜನರ ಅನಾರೋಗ್ಯ ಹೆಚ್ಚಿದಷ್ಟೂ ವಿಮೆ ಯೋಜನೆಗಳಿಗೆ ಸಂಬಂಧಿಸಿದ ಸಬ್ಸಿಡಿ ಸರ್ಕಾರದಿಂದ ಹೋಗುವುದು ಹೆಚ್ಚಾಗುತ್ತದೆ. ಇದನ್ನು ತಡೆಗಟ್ಟಲು ಅಮೆರಿಕ ಈ ಕ್ರಮ ಕೈಗೊಂಡಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
Advertisement