

ಇಸ್ಲಾಮಾಬಾದ್: 'ಆಪರೇಷನ್ ಸಿಂಧೂರ' ನಂತರ ಭಾರತದ ಪ್ರತಿಯೊಂದು ನಡೆಯನ್ನು ಕಾಪಿ ಮಾಡುತ್ತಿರುವ ಪಾಕಿಸ್ತಾನ ಇದೀಗ ಭಾರತದ CDS ಹುದ್ದೆಯಂತೆ ಹೊಸದಾಗಿ ರಕ್ಷಣಾ ಪಡೆಗಳ ಮುಖ್ಯಸ್ಥರ ಹುದ್ದೆ (CDF) ಸೃಷ್ಟಿಸುತ್ತಿದೆ.
ಮೂರು ಸೇವೆಗಳ ನಡುವೆ ಹೆಚ್ಚಿನ ಸಮನ್ವಯ ಮತ್ತು ಏಕೀಕೃತ ಆದೇಶ ಖಾತ್ರಿಗೆ ರಕ್ಷಣಾ ಪಡೆಗಳ ಮುಖ್ಯಸ್ಥರ ಹೊಸ ಹುದ್ದೆಯನ್ನು ಸೃಷ್ಟಿಸಲು ಶನಿವಾರ ಸಾಂವಿಧಾನಿಕ ತಿದ್ದುಪಡಿಯನ್ನು ತಂದಿದೆ.
ಸಂಸತ್ತಿನಲ್ಲಿ ಮಂಡಿಸಲಾದ 27 ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯು ಸಂವಿಧಾನದ 243 ನೇ ವಿಧಿಗೆ ಬದಲಾವಣೆಯ ಉದ್ದೇಶ ಹೊಂದಿದ್ದು, ಇದು ಸಶಸ್ತ್ರ ಪಡೆಗಳು ಮತ್ತಿತರ ವಿಷಯಗಳಿಗೆ ಸಂಬಂಧಿಸಿದೆ.
ಈ ತಿದ್ದುಪಡಿ ಮಸೂದೆಯಡಿ ರಾಷ್ಟ್ರಪತಿಗಳು ಪ್ರಧಾನ ಮಂತ್ರಿಯ ಸಲಹೆಯ ಮೇರೆಗೆ ಸೇನಾ ಮುಖ್ಯಸ್ಥ ಮತ್ತು ರಕ್ಷಣಾ ಪಡೆಗಳ ಮುಖ್ಯಸ್ಥರನ್ನು ನೇಮಿಸುತ್ತಾರೆ. ರಕ್ಷಣಾ ಪಡೆಗಳ ಮುಖ್ಯಸ್ಥರೂ ಆಗಿರುವ ಸೇನಾ ಮುಖ್ಯಸ್ಥರು, ಪ್ರಧಾನ ಮಂತ್ರಿಯೊಂದಿಗೆ ಸಮಾಲೋಚಿಸಿ ರಾಷ್ಟ್ರೀಯ ಕಾರ್ಯತಂತ್ರದ ಕಮಾಂಡ್‌ನ ಮುಖ್ಯಸ್ಥರನ್ನು ನೇಮಿಸುತ್ತಾರೆ.
ರಾಷ್ಟ್ರೀಯ ಕಾರ್ಯತಂತ್ರದ ಕಮಾಂಡ್‌ನ ಮುಖ್ಯಸ್ಥರು ಪಾಕಿಸ್ತಾನ ಸೇನೆಯವರಾಗಿರುತ್ತಾರೆ ಎಂದು ಅದು ಹೇಳುತ್ತದೆ. ಸಶಸ್ತ್ರ ಪಡೆಗಳ ವ್ಯಕ್ತಿಗಳನ್ನು ಫೀಲ್ಡ್ ಮಾರ್ಷಲ್, ವಾಯುಪಡೆಯ ಮಾರ್ಷಲ್ ಮತ್ತು ಅಡ್ಮಿರಲ್ ಹುದ್ದೆಗಳಿಗೆ ಬಡ್ತಿ ನೀಡಲು ಸರ್ಕಾರಕ್ಕೆ ಸಾಧ್ಯವಾಗಲಿದೆ. ಫೀಲ್ಡ್ ಮಾರ್ಷಲ್‌ನ ಶ್ರೇಣಿ ಮತ್ತು ಸವಲತ್ತುಗಳು ಜೀವಿತಾವಧಿವರೆಗೂ ಸಿಗಲಿದೆ. ಜಂಟಿ ಮುಖ್ಯಸ್ಥರ ಸಮಿತಿಯ ಅಧ್ಯಕ್ಷರ ಹುದ್ದೆಯು ನವೆಂಬರ್ 27, 2025 ರಂದು ಮುಕ್ತಾಯಗೊಳ್ಳುತ್ತದೆ ಎಂದು ಮಸೂದೆ ಹೇಳುತ್ತದೆ.
ಮೇ ತಿಂಗಳಲ್ಲಿ ಪಾಕಿಸ್ತಾನ ಮತ್ತು ಭಾರತ ನಡುವಿನ ನಾಲ್ಕು ದಿನಗಳ ಸೇನಾ ಸಂಘರ್ಷ ಮತ್ತು ಸಮಗ್ರ ಕಾರ್ಯಾಚರಣೆಯ ಪ್ರತಿಕ್ರಿಯೆಗೆ ಅಗತ್ಯವಿರುವ ಆಧುನಿಕ ಯುದ್ಧದ ಸ್ವರೂಪದಿಂದ ಪಡೆದ ಪಾಠಗಳಿಂದ ಪಾಕಿಸ್ತಾನ ಈದೀಗ ಈ ಕ್ರಮಕ್ಕೆ ಮುಂದಾಗಿದೆ ಎಂದು ವರದಿಗಳು ಹೇಳುತ್ತವೆ.
ಏಪ್ರಿಲ್ 22 ರ ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಪ್ರತಿಕ್ರಿಯೆಯಾಗಿ ಭಾರತವು ಮೇ 7 ರಂದು ಪಾಕಿಸ್ತಾನ ನಿಯಂತ್ರಣದಲ್ಲಿರುವ ಪ್ರದೇಶಗಳಲ್ಲಿನ ಭಯೋತ್ಪಾದಕ ಮೂಲಸೌಕರ್ಯಗಳನ್ನು ಗುರಿಯಾಗಿಸಿಕೊಂಡು 'ಆಪರೇಷನ್ ಸಿಂಧೂರ್' ಕಾರ್ಯಾಚರಣೆ ಪ್ರಾರಂಭಿಸಿತು. ಈ ದಾಳಿ ನಾಲ್ಕು ದಿನಗಳ ತೀವ್ರ ಘರ್ಷಣೆಗಳಿಗೆ ಕಾರಣವಾಗುವುದರೊಂದಿಗೆ ಮೇ 10 ರಂದು ಕದನ ವಿರಾಮ ಒಪ್ಪಂದದೊಂದಿಗೆ ಅದು ಅಂತ್ಯಗೊಂಡಿತ್ತು.
Advertisement