

ಥಿಂಪು(ಭೂತಾನ್): ನಿನ್ನೆ ಸೋಮವಾರ ಸಂಜೆ ದೆಹಲಿಯಲ್ಲಿ ನಡೆದ ನಿಗೂಢ ಸ್ಫೋಟಕ್ಕೆ ಸಂಬಂಧಿಸಿದಂತೆ ಇಂದು ಭೂತಾನ್ನಲ್ಲಿ ಪ್ರಧಾನಿ ನರೇಂದ್ರ ಮೋದಿ ಮಾತನಾಡಿದ್ದಾರೆ. ಸಂಚುಕೋರರನ್ನು ಸುಮ್ಮನೆ ಬಿಡುವುದಿಲ್ಲ ಅಪರಾಧಿಗಳಿಗೆ ಖಂಡಿತಾ ಶಿಕ್ಷೆಯಾಗುತ್ತದೆ" ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ಇಂದಿನಿಂದ ಎರಡು ದಿನಗಳ ಕಾಲ ಭೂತಾನ್ ಭೇಟಿಯಲ್ಲಿರುವ ಪ್ರಧಾನಿ, ನಮ್ಮ ತನಿಖಾ ಸಂಸ್ಥೆಗಳು ಪಿತೂರಿಯ ಬೇರುಗಳನ್ನು ಆಳವಾಗಿ ಅಗೆಯುತ್ತವೆ. ದೆಹಲಿ ಸ್ಫೋಟದಿಂದ ಬಾಧಿತರಾದವರ ಕುಟುಂಬಗಳೊಂದಿಗೆ ಇಡೀ ರಾಷ್ಟ್ರವು ನಿಂತಿದೆ. ದೆಹಲಿಯಲ್ಲಿ ನಡೆದ ಭಯಾನಕ ಘಟನೆ ಎಲ್ಲರನ್ನೂ ಆಘಾತಗೊಳಿಸಿದೆ ಎಂದು ಹೇಳಿದ್ದಾರೆ.
ಇಂದು ನಾನು ತುಂಬಾ ಭಾರವಾದ ಹೃದಯದಿಂದ ಇಲ್ಲಿಗೆ ಬಂದಿದ್ದೇನೆ. ನಿನ್ನೆ ಸಂಜೆ ದೆಹಲಿಯಲ್ಲಿ ನಡೆದ ಭೀಕರ ಘಟನೆ ಎಲ್ಲರನ್ನೂ ತೀವ್ರವಾಗಿ ದುಃಖಿಸಿದೆ. ಸಂತ್ರಸ್ತ ಕುಟುಂಬಗಳ ದುಃಖ ನನಗೆ ಅರ್ಥವಾಗುತ್ತದೆ. ಇಡೀ ರಾಷ್ಟ್ರ ಇಂದು ಅವರೊಂದಿಗೆ ನಿಂತಿದೆ ಎಂದರು.
ಈ ಘಟನೆಯ ತನಿಖೆ ನಡೆಸುತ್ತಿರುವ ಎಲ್ಲಾ ಸಂಸ್ಥೆಗಳೊಂದಿಗೆ ನಾನು ನಿನ್ನೆ ರಾತ್ರಿಯಿಡೀ ಸಂಪರ್ಕದಲ್ಲಿದ್ದೆ. ನಮ್ಮ ಸಂಸ್ಥೆಗಳು ಈ ಪಿತೂರಿಯ ಆಳವನ್ನು ಹುಡುಕುವ ಪ್ರಯತ್ನ ಮಾಡುತ್ತಿದೆ. ಇದರ ಹಿಂದಿನ ಪಿತೂರಿಗಾರರನ್ನು ಬಿಡಲಾಗುವುದಿಲ್ಲ. ಹೊಣೆಗಾರರಾದ ಎಲ್ಲರಿಗೂ ಶಿಕ್ಷೆಯಾಗುವುದು ಖಚಿತ ಎಂದರು.
ದೆಹಲಿಯಲ್ಲಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಇಂದು ದೇಶದ ಇತರ ಭಾಗಗಳಲ್ಲಿನ ಭದ್ರತಾ ಪರಿಸ್ಥಿತಿಯನ್ನು ಪರಿಶೀಲಿಸಿದರು, ಕೆಂಪು ಕೋಟೆ ದಾಳಿಯಲ್ಲಿ ಮೃತಪಟ್ಟವರ ಸಂಖ್ಯೆ 12ಕ್ಕೆ ಏರಿಕೆಯಾಗಿದೆ.
ಸಭೆಯಲ್ಲಿ ಕೇಂದ್ರ ಗೃಹ ಕಾರ್ಯದರ್ಶಿ ಗೋವಿಂದ್ ಮೋಹನ್, ಗುಪ್ತಚರ ಬ್ಯೂರೋ ನಿರ್ದೇಶಕ ತಪನ್ ದೇಕಾ, ದೆಹಲಿ ಪೊಲೀಸ್ ಆಯುಕ್ತ ಸತೀಶ್ ಗೋಲ್ಚಾ ಮತ್ತು ಎನ್ಐಎ ಡಿಜಿ ಸದಾನಂದ ವಸಂತ್ ಡೇಟ್ ಭಾಗವಹಿಸಿದ್ದರು. ಜಮ್ಮು ಮತ್ತು ಕಾಶ್ಮೀರದ ಡಿಜಿಪಿ ನಳಿನ್ ಪ್ರಭಾತ್ ಕೂಡ ವರ್ಚುವಲ್ ಮೂಲಕ ಸಭೆಯಲ್ಲಿ ಭಾಗವಹಿಸಿದ್ದರು. ಸಭೆಯಲ್ಲಿ, ಉನ್ನತ ಅಧಿಕಾರಿಗಳು ಸ್ಫೋಟದ ನಂತರದ ಪರಿಸ್ಥಿತಿಯ ಕುರಿತು ವಿವರವಾದ ಮಾಹಿತಿ ನೀಡಿದರು.
Advertisement