

ರಾವಲ್ಪಿಂಡಿ: ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಸಹೋದರಿಯರನ್ನು ಪೊಲೀಸ್ ಠಾಣೆಗೆ ಎಳೆದೊಯ್ದ ಪೊಲೀಸರು, ಅವರ ಬಟ್ಟೆ ಹರಿದುಹಾಕಿ ಹಲ್ಲೆ ನಡೆಸಿರುವ ಆರೋಪ ಕೇಳಿಬಂದಿದೆ. ಅಡಿಯಾಲಾ ಜೈಲಿನ ಹೊರಗಡೆ ಮಂಗಳವಾರ ಮಧ್ಯರಾತ್ರಿ ಈ ಘಟನೆ ನಡೆದಿದೆ.
ಜೈಲಿನಲ್ಲಿರುವ ಇಮ್ರಾನ್ ಖಾನ್ ಅವರೊಂದಿಗೆ ವಾರಕ್ಕೊಮ್ಮೆ ಭೇಟಿಯಾಗಲು ನಿರಾಕರಿಸಿದ ನಂತರ ಸಹೋದರಿಯರು ಜೈಲಿನ ಹೊರಗೆ 10 ಗಂಟೆಗಳ ಕಾಲ ಧರಣಿ ನಡೆಸಿದ್ದಾರೆ. ಈ ವೇಳೆ ಈ ಘಟನೆ ನಡೆದಿದೆ. ಸರ್ಕಾರಿ ಗಿಫ್ಟ್ ಗಳ ಮಾರಾಟ ಮತ್ತಿತರ ಭ್ರಷ್ಟಾಚಾರ ಪ್ರಕರಣಗಳಿಗೆ ಸಂಬಂಧಿಸಿದಂತೆ ಇಮ್ರಾನ್ ಖಾನ್ ಜೈಲಿನಲ್ಲಿದ್ದಾರೆ. ಮಾಜಿ ಪ್ರಧಾನಿಯನ್ನು ಅಮಾನವೀಯ ರೀತಿಯಲ್ಲಿ ಜೈಲಿನಲ್ಲಿ ಇರಿಸಲಾಗಿದೆ ಎಂದು ಇಮ್ರಾನ್ ಸಹೋದರಿಯರು ಮತ್ತು ಅವರ ಕುಟುಂಬ ಹೇಳಿಕೊಂಡಿದೆ.
ಮಂಗಳವಾರ, ಇಮ್ರಾನ್ ಸಹೋದರಿಯರಾದ ಅಲೀಮಾ, ಉಜ್ಮಾ ಮತ್ತು ನೊರೀನ್ ಖಾನ್ ಅವರು ಜೈಲಿನ ಬಳಿಗೆ ಹೋದಾಗ ಅವರನ್ನು ಗಂಟೆಗಟ್ಟಲೆ ಕಾಯಿಸಲಾಗಿದೆ. ನಂತರ ಅವರು ಜೈಲಿನ ಹೊರಗೆ ಧರಣಿ ನಡೆಸಿದಾಗ ಪೊಲೀಸರು ಬಂಧಿಸಿದ್ದಾರೆ.
ಮಹಿಳಾ ಪೊಲೀಸ್ ಅಧಿಕಾರಿಯೊಬ್ಬರು ನೊರೀನ್ ಅವರ ಕೂದಲು ಹಿಡಿದು ಎಳೆದು ನೆಲಕ್ಕೆ ತಳ್ಳಿದ್ದಾರೆ. ಇತರ ಇಬ್ಬರು ಸಹೋದರಿಯರ ಮೇಲೂ ಹಲ್ಲೆ ನಡೆಸಿದರು ಎಂದು PTI ಪಕ್ಷ ಹೇಳಿದೆ. ಪಂಜಾಬ್ ಪೊಲೀಸರು ಅನಾಗರಿಕರಂತೆ ವರ್ತಿಸುತ್ತಿದ್ದಾರೆ" ಎಂದು ನೊರೀನ್ ಬಂಧನದಿಂದ ಬಿಡುಗಡೆಯಾದ ನಂತರ ಮಾಧ್ಯಮಗಳಿಗೆ ತಿಳಿಸಿದರು.
ಒಂದು ಹಂತದಲ್ಲಿ ನೊರೀನ್ ಅವರನ್ನು ರಸ್ತೆಯಲ್ಲಿ ನೂಕಿದಾಗ ಪ್ರಜ್ಞಾಹೀನಳಾಗಿದ್ದಳು. ನಮ್ಮ ಬಟ್ಟೆಗಳನ್ನು ಹರಿದು ಹಾಕಿ ಹಲ್ಲೆ ಮಾಡಿದ್ದಾರೆ ಎಂದು ಅಲೀಮಾ ಹೇಳಿರುವುದಾಗಿ ದಿ ಡಾನ್ ವರದಿ ಮಾಡಿದೆ. ಪಾಕಿಸ್ತಾನ ಸೇನಾ ಮುಖ್ಯಸ್ಥ ಫೀಲ್ಡ್ ಮಾರ್ಷಲ್ ಅಸಿಮ್ ಮುನೀರ್ ಅವರ ಆದೇಶದ ಮೇರೆಗೆ ಪೊಲೀಸರು ಈ ರೀತಿ ನಡೆದುಕೊಂಡಿದ್ದಾರೆ ಎಂದು ಅಲೀಮಾ ಆರೋಪಿಸಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡುವಾಗ ಇಮ್ರಾನ್ ಖಾನ್ ಸಹೋದರಿಯರು ಭಯಭೀತರಾಗಿ ಮತ್ತು ದುಃಖಿತರಾಗಿ ಕಾಣಿಸಿಕೊಂಡರು. ಹಲವಾರು ಮಹಿಳೆಯರು ಸೇರಿದಂತೆ ಇತರ ಕಾರ್ಯಕರ್ತರು ಪೊಲೀಸರು "ಹಿಂಸೆಗೆ ಒಳಪಡಿಸಿದ್ದಾರೆ" ಎಂದು ಪಿಟಿಐ ಪಕ್ಷ ಹೇಳಿಕೊಂಡಿದೆ.
Advertisement