

ಜೋಹಾನ್ಸ್ ಬರ್ಗ್: ಮಾದಕವಸ್ತು ಕಳ್ಳಸಾಗಣೆ ಮತ್ತು ಭಯೋತ್ಪಾದನೆಯ ನಡುವಿನ ಸಂಬಂಧ ಮುರಿಯಲು ಜಿ20 ವಿಶೇಷ ಉಪ ಕ್ರಮವನ್ನು ತೆಗೆದುಕೊಳ್ಳಬೇಕು ಎಂದು ಪ್ರಧಾನಿ ಮೋದಿ ಶನಿವಾರ ಕರೆ ನೀಡಿದರು. ‘ಫೆಂಟನಿಲ್ ನಂತಹ ಅಪಾಯಕಾರಿ ಸಂಶ್ಲೇಷಿತ ಔಷಧಗಳ ಹರಡುವಿಕೆ, ಕಳ್ಳಸಾಗಣೆಯನ್ನು ತಡೆಗಟ್ಟಬೇಕಾಗಿದೆ ಮತ್ತು ಭಯೋತ್ಪಾದನೆ ಪ್ರೋತ್ಸಾಹಿಸುವ ಆರ್ಥಿಕ ಅಪರಾಧಕ್ಕೆ ಮಟ್ಟ ಹಾಕಬೇಕಾಗಿದೆ ಎಂದು ಹೇಳಿದರು.
ಸಂಶ್ಲೇಷಿತ ಔಷಧಿಗಳು ಜಗತ್ತಿನಾದ್ಯಂತ ವೇಗವಾಗಿ ಹರಡುತ್ತಿರುವುದಕ್ಕೆ ಕಳವಳ ವ್ಯಕ್ತಪಡಿಸಿದ ಪ್ರಧಾನಿ, ಫೆಂಟನಿಲ್‌ನಂತಹ ವಸ್ತುಗಳು ಸಾರ್ವಜನಿಕ ಆರೋಗ್ಯ, ಸಾಮಾಜಿಕ ಸ್ಥಿರತೆ ಮತ್ತು ಪ್ರಪಂಚದಾದ್ಯಂತ ಭದ್ರತಾ ವ್ಯವಸ್ಥೆಗಳಿಗೆ ತೀವ್ರ ಅಪಾಯಗಳನ್ನುಂಟುಮಾಡುತ್ತವೆ ಎಂದು ಎಚ್ಚರಿಸಿದರು.
ಮಾದಕವಸ್ತು ಕಳ್ಳಸಾಗಣೆ ಜಾಲಗಳನ್ನು ಅಡ್ಡಿಪಡಿಸಲು, ಅಕ್ರಮವಾಗಿ ಹಣದ ಹರಿವನ್ನು ನಿಲ್ಲಿಸಲು ಮತ್ತು ಭಯೋತ್ಪಾದನೆಗೆ ಹಣಕಾಸು ಒದಗಿಸುವುದನ್ನು ತಡೆಯಲು ಎಲ್ಲಾ ದೇಶಗಳು ಒಟ್ಟಾಗಿ ಆರ್ಥಿಕ ಮತ್ತು ಭದ್ರತಾ ಕ್ರಮಗಳನ್ನು ಬಳಸಬೇಕು’ ಎಂದು ಮೋದಿ ಹೇಳಿದರು.
ಜಾಗತಿಕ ಅಭಿವೃದ್ಧಿಯನ್ನು ದೃಷ್ಟಿಯಲ್ಲಿಟ್ಟುಕೊಂಡು ನಾಲ್ಕು ಹೊಸ ಉಪಕ್ರಮಗಳನ್ನು ಪ್ರಧಾನಿ ಮೋದಿ ಪ್ರಸ್ತಾಪಿಸಿದ್ದಾರೆ. ಇದರಲ್ಲಿ ಮಾದಕವಸ್ತು-ಭಯೋತ್ಪಾದನಾ ಸಂಬಂಧವನ್ನು ಎದುರಿಸುವ ಉಪಕ್ರಮವೂ ಸೇರಿದೆ ಎಂದು ವರದಿಯಾಗಿದೆ.
ದಕ್ಷಿಣ ಆಫ್ರಿಕಾದ ಅಧ್ಯಕ್ಷತೆಯಲ್ಲಿ ನಡೆಯುತ್ತಿರುವ ಜಿ-20 ಶೃಂಗಸಭೆಯಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಜಾಗತಿಕ ಅಭಿವೃದ್ಧಿಯನ್ನು ದೃಷ್ಟಿಯಲ್ಲಿಟ್ಟುಕೊಂಡು ಜಾಗತಿಕವಾಗಿ ಜ್ಞಾನ ಸಂಗ್ರಹಣೆ, ಆರೋಗ್ಯ, ನಾವೀನ್ಯತೆ ಮತ್ತು ಭಯೋತ್ಪಾದನೆ, ಡ್ರಗ್ಸ್ ವಿರುದ್ಧ ಹೋರಾಡುವ ನಾಲ್ಕು ಉಪ ಕ್ರಮಗಳನ್ನು ಪ್ರಸ್ತಾಪಿಸಿದರು.
ಭಾರತೀಯ ಮೌಲ್ಯಗಳು ಜಗತ್ತಿನ ಪ್ರಗತಿಗೆ ದಾರಿದೀಪವಾಗಿವೆ. ಈ ನಾಲ್ಕು ಕ್ಷೇತ್ರಗಳಲ್ಲಿ ಭಾರತಕ್ಕೆ ನಮ್ಮ ಸಂಗ್ರಹಿತ ಜ್ಞಾನವನ್ನು ಮುಂದಕ್ಕೆ ಕೊಂಡೊಯ್ಯಲು ನಾವು ಸಹಕಾರ ನೀಡುತ್ತೇವೆ ಎಂದರು. ಮುಂದಿನ ಹತ್ತು ವರ್ಷಗಳಲ್ಲಿ ಆಫ್ರಿಕಾದಲ್ಲಿ ಹತ್ತು ಲಕ್ಷ ಜನರಿಗೆ ನಾವೀನ್ಯತೆ, ಕೌಶಲ್ಯದ ಪ್ರಮಾಣಿತ ತರಬೇತಿ ರೂಪಿಸುವ ಗುರಿ ಹೊಂದಲಾಗಿದೆ ಎಂದು ಹೇಳಿದರು.
G20 ಜಾಗತಿಕ ಆರೋಗ್ಯ ರಕ್ಷಣಾ ಪ್ರತಿಕ್ರಿಯೆ ತಂಡ ಮತ್ತು ಆಫ್ರಿಕಾ ಕೌಶಲ್ಯ ಗುಣಕ ಉಪಕ್ರಮವನ್ನು ಸ್ಥಾಪಿಸುವ ಪ್ರಸ್ತಾಪ ಕೂಡಾ ಮಾಡಿದ್ದಾರೆ. "ಆರೋಗ್ಯ ತುರ್ತುಸ್ಥಿತಿಗಳು ಮತ್ತು ನೈಸರ್ಗಿಕ ವಿಕೋಪಗಳ ಸಂದರ್ಭದಲ್ಲಿ ನಾವು ಒಟ್ಟಾಗಿ ಕೆಲಸ ಮಾಡಿದಾಗ ನಾವು ಬಲಶಾಲಿಯಾಗುತ್ತೇವೆ. ಯಾವುದೇ ತುರ್ತು ಪರಿಸ್ಥಿತಿಗಳ ಸಂದರ್ಭದಲ್ಲಿ ತ್ವರಿತ ನಿಯೋಜನೆಗೆ G20 ರಾಷ್ಟ್ರಗಳಿಂದ ತರಬೇತಿ ಪಡೆದ ವೈದ್ಯಕೀಯ ತಜ್ಞರ ತಂಡಗಳನ್ನು ರಚಿಸುವುದು ನಮ್ಮ ಪ್ರಯತ್ನವಾಗಿರಬೇಕು ಮೋದಿ ಹೇಳಿದರು.
Advertisement