

ನವದೆಹಲಿ: ಸುಮಾರು 12,000 ವರ್ಷಗಳಲ್ಲಿ ಮೊದಲ ಬಾರಿಗೆ ಇಥಿಯೋಪಿಯಾದಲ್ಲಿ ಹೈಲಿ ಗುಬ್ಬಿ ಜ್ವಾಲಾಮುಖಿ ಸ್ಫೋಟಗೊಂಡಿದ್ದು, ದಟ್ಟ ಹೊಗೆ ಆವರಿಸಿರುವ ಕಾರಣದಿಂದಾಗಿ ಹಲವು ವಿಮಾನಗಳ ಮಾರ್ಗಗಳನ್ನು ಬದಲಾವಣೆ ಮಾಡಲಾಗಿದೆ.
ಥಿಯೋಪಿಯಾದಲ್ಲಿನ ಜ್ವಾಲಾಮುಖಿಯ ಸ್ಫೋಟದಿಂದ ಬೂದಿ ಆವರಿಸಿಕೊಳ್ಳುತ್ತಿದ್ದು, ಉಂಟಾಗುವ ಸಂಭಾವ್ಯ ಅಡೆತಡೆಗಳನ್ನು ಎದುರಿಸಲು ಭಾರತೀಯ ವಿಮಾನಯಾನ ಸಂಸ್ಥೆಗಳು ಮತ್ತು ವಿಮಾನ ನಿಲ್ದಾಣಗಳಿಗೆ ಸಲಹೆಗಳನ್ನು ರವಾನಿಸಲಾಗಿದೆ. ಬೂದಿಯಿಂದ ಆವೃತಗೊಂಡ ಮೋಡಗಳು ಪೂರ್ವಕ್ಕೆ ಚಲಿಸುತ್ತಿದ್ದು, ಇದು ಸೋಮವಾರ ಸಂಜೆ ತಡವಾಗಿ ಉತ್ತರ ಭಾರತವನ್ನು ತಲುಪುವ ಮುನ್ಸೂಚನೆ ಇದೆ.
ಹೈಲಿ ಗುಬ್ಬಿ ಜ್ವಾಲಾಮುಖಿಯು ಸುಮಾರು 12,000 ವರ್ಷಗಳಲ್ಲಿ ಮೊದಲ ಬಾರಿಗೆ ಸ್ಫೋಟಗೊಂಡಿದೆ. ಜ್ವಾಲಾಮುಖಿ ಬೂದಿ ಸಮಸ್ಯೆಯಿಂದಾಗಿ ಕೆಲವು ವಿಮಾನಗಳನ್ನು ರದ್ದುಗೊಳಿಸಿದ ವಿಮಾನಯಾನ ಸಂಸ್ಥೆಗಳಲ್ಲಿ ಅಕಾಸಾ ಏರ್, ಇಂಡಿಗೊ ಮತ್ತು ಕೆಎಲ್‌ಎಂ ಸೇರಿವೆ.
ನಾಗರಿಕ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ) ವಿಮಾನಯಾನ ಸಂಸ್ಥೆಗಳಿಗೆ ಬೂದಿ ಪೀಡಿತ ಪ್ರದೇಶಗಳನ್ನು ಕಟ್ಟುನಿಟ್ಟಾಗಿ ತಪ್ಪಿಸಲು, ವಿಮಾನ ಯೋಜನೆ, ಮಾರ್ಗ ಮತ್ತು ಇಂಧನ ಪರಿಗಣನೆಗಳನ್ನು ಸರಿಹೊಂದಿಸಲು ಸೂಚಿಸಿದೆ.
ಜ್ವಾಲಮುಖಿ ದ್ರಾವ ಕೆಂಪು ಸಮುದ್ರಕ್ಕ ಹರಿದಿದೆ. ಹೀಗಾಗಿ ಕೆಂಪು ಸಮುದ್ರದ ತೀರದ ಒಮನ್, ಯೆಮೆನ್ ಸೇರಿದಂತೆ ಹಲವು ದೇಶಗಳಲ್ಲಿ ಇದರ ಬೂದಿ, ಹೊಗೆ ಆವರಿಸಿಕೊಂಡಿದೆ. ಈ ಬೂದಿ ದೆಹಲಿಗೂ ತಲುಪಲಿದೆ. ನಾಳೆ ವೇಳೆಗೆ ಜ್ವಾಲಾಮುಖಿ ಬೂದಿ, ದೂಳು ದೆಹಲಿಗೆ ತಲುಪಲಿದೆ. ಇದರಿಂದ ದೆಹಲಿ ವಿಮಾನ ಪ್ರಯಾಣದಲ್ಲೂ ಹಲವು ಬದಲಾವಣೆಯಾಗುವ ಸಾಧ್ಯತೆ ಇದೆ.
ಜ್ವಾಲಾಮುಖಿ ದಟ್ಟಣೆ ವಿಮಾನ ನಿಲ್ದಾಣ ಕಾರ್ಯಾಚರಣೆಗಳ ಮೇಲೆ ಪರಿಣಾಮ ಬೀರಿದರೆ, ಸಂಬಂಧಪಟ್ಟ ನಿರ್ವಾಹಕರು ತಕ್ಷಣ ರನ್‌ವೇಗಳು, ಟ್ಯಾಕ್ಸಿವೇಗಳು ಮತ್ತು ಏಪ್ರನ್‌ಗಳನ್ನು ಪರಿಶೀಲಿಸಬೇಕು ಎಂದು ಡಿಜಿಸಿಎ ತಿಳಿಸಿದೆ.
ಪರಿಸ್ಥಿತಿಯನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡಲು ಮತ್ತು ಉಪಗ್ರಹ ಚಿತ್ರಣ ಮತ್ತು ಹವಾಮಾನ ದತ್ತಾಂಶದ ಮೂಲಕ ಅಲರ್ಟ್ ಆಗಿರುವುದಕ್ಕೆ ನಿರ್ವಾಹಕರಿಗೆ ಸೂಚನೆ ನೀಡಲಾಗಿದೆ. ಬೂದಿ, ಹೊಗೆ ಆವರಿಸಿಕೊಂಡಿರುವ ಹಿನ್ನೆಲೆಯಲ್ಲಿ 2025 ರ ನವೆಂಬರ್ 24 ಮತ್ತು 25 ರಂದು ನಿಗದಿಯಾಗಿದ್ದ ಜೆಡ್ಡಾ, ಕುವೈತ್ ಮತ್ತು ಅಬುಧಾಬಿಗೆ ಮತ್ತು ಅಲ್ಲಿಂದ ಹೊರಡುವ ವಿಮಾನಗಳನ್ನು ರದ್ದುಗೊಳಿಸಲಾಗಿದೆ ಎಂದು ಅಕಾಸಾ ಏರ್ ತಿಳಿಸಿದೆ.
Advertisement