

ಪಾಕಿಸ್ತಾನದ ಸಿಂಧ್ ಪ್ರಾಂತ್ಯ ಭವಿಷ್ಯದಲ್ಲಿ ಭಾರತದೊಂದಿಗೆ ಸೇರಬಹುದು, ಗಡಿಗಳು ಶಾಶ್ವತವಲ್ಲ, ಗಡಿಗಳು ಬದಲಾಗಲಿವೆ ಎಂಬ ಭಾರತದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ಹೇಳಿಕೆಗೆ ಸಿಂಧ್ ನಲ್ಲಿ ವ್ಯಾಪಕ ಬೆಂಬಲ ವ್ಯಕ್ತವಾಗತೊಡಗಿದೆ.
ಪಾಕಿಸ್ತಾನದ ವಿರುದ್ಧ ಈಗಾಗಲೇ ಬಲೂಚಿಸ್ಥಾನದಲ್ಲಿ ಪ್ರತಿಭಟನೆ ತೀವ್ರಗೊಂಡಿದ್ದು, ಈಗ ಸಿಂಧ್ ಪ್ರಾಂತ್ಯವನ್ನು ಕಳೆದುಕೊಳ್ಳುವ ಭೀತಿಯಲ್ಲಿದೆ ಪಾಕಿಸ್ತಾನ.
ಸಿಂಧ್ ಮುಂದೊಂದು ದಿನ ಭಾರತದ ಜೊತೆ ಸೇರಲಿದೆ ಎಂಬ ರಾಜನಾಥ್ ಸಿಂಗ್ ಹೇಳಿಕೆಯನ್ನು ಸ್ವಾಗತಿಸಿರುವ ಸಿಂಧ್ ನ ಪ್ರಮುಖ ನಾಯಕ ಹಾಗೂ ಜೇ ಸಿಂಧ್ ಮುತ್ತಹಿದಾ ಮಹಾಜ್ (ಜೆಎಸ್ಎಂಎಂ) ಅಧ್ಯಕ್ಷರೂ ಆಗಿರುವ ಶಫಿ ಬರ್ಫತ್, "ಐತಿಹಾಸಿಕ ಮತ್ತು ಒಳನೋಟವುಳ್ಳ" ಹೇಳಿಕೆಗಳು, ಸಿಂಧ್ ಗೆ "ಪ್ರೋತ್ಸಾಹ"ದ ಮೂಲವಾಗಿದೆ ಎಂದು ಹೇಳಿದ್ದಾರೆ.
ವಿಶ್ವ ಸಿಂಧ್ ಫೌಂಡೇಶನ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಿಂಧಿ ಸಮುದಾಯವನ್ನುದ್ದೇಶಿಸಿ ಮಾತನಾಡಿದ್ದ ರಾಜನಾಥ್ ಸಿಂಗ್, ವಿಭಜನೆಯ ಹೊರತಾಗಿಯೂ ಭಾರತ ಮತ್ತು ಸಿಂಧ್ ನಡುವಿನ ನಾಗರಿಕತೆಯ ನಿರಂತರತೆಯ ಕುರಿತು ಬಿಜೆಪಿ ಹಿರಿಯ ನಾಯಕ ಎಲ್ ಕೆ ಅಡ್ವಾಣಿ ಅವರ ಮಾತುಗಳನ್ನು ನೆನಪಿಸಿಕೊಂಡರು.
ಅಡ್ವಾಣಿಯನ್ನು ಉಲ್ಲೇಖಿಸಿದ್ದ ರಾಜನಾಥ್ ಸಿಂಗ್ “ಸಿಂಧಿ ಹಿಂದೂಗಳು, ವಿಶೇಷವಾಗಿ ಅವರ ಪೀಳಿಗೆಯವರು, ಭಾರತದಿಂದ ಸಿಂಧ್ ಅನ್ನು ಬೇರ್ಪಡಿಸುವ ವಿಷಯವನ್ನು ಇನ್ನೂ ಒಪ್ಪಿಕೊಂಡಿಲ್ಲ.” “ಇಂದು, ಸಿಂಧ್ ಭೂಮಿ ಭಾರತದ ಭಾಗವಾಗಿಲ್ಲದಿರಬಹುದು, ಆದರೆ ನಾಗರಿಕತೆಯ ದೃಷ್ಟಿಯಿಂದ, ಸಿಂಧ್ ಯಾವಾಗಲೂ ಭಾರತದ ಭಾಗವಾಗಿರುತ್ತದೆ ... ಭೌಗೋಳಿಕ ದೃಷ್ಟಿಯಿಂಡಲೂ ಗಡಿಗಳು ಬದಲಾಗಬಹುದು. ಯಾರಿಗೆ ಗೊತ್ತು, ನಾಳೆ ಸಿಂಧ್ ಭಾರತಕ್ಕೆ ಮರಳಬಹುದು.” ಎಂಬ ಅಚ್ಚರಿಯ ಹೇಳಿಕೆ ನೀಡಿದ್ದರು.
ಈ ಹೇಳಿಕೆಗಳಿಗೆ ಪ್ರತಿಕ್ರಿಯಿಸಿದ ಬರ್ಫತ್, ಸಿಂಗ್ ಅವರ ನಿಲುವನ್ನು ಸಿಂಧ್ ಪ್ರಾಂತ್ಯ "ಬಲವಾಗಿ ಅಂಗೀಕರಿಸುತ್ತದೆ ಮತ್ತು ಪ್ರಶಂಸಿಸುತ್ತದೆ" ಎಂದು ಹೇಳಿದ್ದಾರೆ. ಇದು ಸಿಂಧುದೇಶದ ದೀರ್ಘಕಾಲದ ಸ್ವಾತಂತ್ರ್ಯದ ಆಕಾಂಕ್ಷೆ ಮತ್ತು ಭಾರತದೊಂದಿಗಿನ ಅದರ ಸಂಭಾವ್ಯ ಒಕ್ಕೂಟ ಸಂಬಂಧಕ್ಕೆ ನೈತಿಕ ಮತ್ತು ರಾಜಕೀಯ ಉತ್ತೇಜನ ಎಂದು ವಿವರಿಸಿದ್ದಾರೆ.
ಸಯೀನ್ ಜಿಎಂ ಸೈಯದ್ ಅವರು ಹಾಕಿಕೊಟ್ಟ ಚಳುವಳಿಯ ಸೈದ್ಧಾಂತಿಕ ಅಡಿಪಾಯವನ್ನು ಪುನರುಚ್ಚರಿಸಿದ ಬರ್ಫತ್, ಸಿಂಧುದೇಶ ಯಾವಾಗಲೂ ಪರಸ್ಪರ ಗೌರವ, ಸಾರ್ವಭೌಮತ್ವ ಮತ್ತು ಸಿಂಧ್ ಮತ್ತು ಭಾರತೀಯ ಉಪಖಂಡದ ನಡುವಿನ ಹಂಚಿಕೆಯ ಐತಿಹಾಸಿಕ, ಸಾಂಸ್ಕೃತಿಕ ಮತ್ತು ನಾಗರಿಕ ಸಂಬಂಧಗಳ ಆಧಾರದ ಮೇಲೆ "ಭಾರತದೊಂದಿಗೆ ಒಕ್ಕೂಟ ಸಂಬಂಧಕ್ಕೆ" ಮುಕ್ತವಾಗಿದೆ ಎಂದು ಹೇಳಿದ್ದಾರೆ.
ಸಿಂಧಿ ಜನರ ಐತಿಹಾಸಿಕ ಬೇರುಗಳು ಅರಬ್ ಅಥವಾ ಟರ್ಕಿಕ್ ಪ್ರಭಾವಗಳಲ್ಲಿಲ್ಲ, ಆದರೆ "ಭಾರತದ ಸಪ್ತ ಸಿಂಧುದೇಶದ ಭೂಮಿ"ಯಲ್ಲಿದೆ ಎಂದು ಅವರು ಹೇಳಿದ್ದಾರೆ. ಸಿಂಧ್ ಮತ್ತು ಭಾರತ ಒಂದೇ ನಾಗರಿಕತೆಯನ್ನು ಹಂಚಿಕೊಂಡಿರುವ ಸ್ಥಳಗಳು ಎಂದು ಅವರು ವಿವರಿಸಿದ್ದಾರೆ.
ಪಾಕಿಸ್ತಾನದೊಳಗೆ ಸಿಂಧ್‌ನ ಗುರುತು, ಭಾಷೆ ಮತ್ತು ಪರಂಪರೆಯ ಮೇಲೆ ವ್ಯವಸ್ಥಿತ ದಾಳಿ ನಡೆಯುತ್ತಿದೆ ಎಂದು ಜೆಎಸ್‌ಎಂಎಂ ಆರೋಪಿಸಿದೆ. "ಪಂಜಾಬ್ ಪ್ರಾಬಲ್ಯದ ಇಸ್ಲಾಮಿಕ್ ದೇವಪ್ರಭುತ್ವ"ವು ರಾಜಕೀಯ ದಬ್ಬಾಳಿಕೆ, ಜನಸಂಖ್ಯೆಯನ್ನು ಬದಲು ಮಾಡುತ್ತಿದ್ದು ಸಿಂಧ್‌ನ ನೈಸರ್ಗಿಕ ಸಂಪನ್ಮೂಲಗಳ ಶೋಷಣೆಯನ್ನು ಆರೋಪಿಸಿದೆ.
"ಸರ್ಕಾರಿ ಪ್ರಾಯೋಜಿತ ಭಯೋತ್ಪಾದನೆ" ಮತ್ತು ರಾಜಕೀಯ ಕಾರ್ಯಕರ್ತರ ಮೇಲಿನ ಹಿಂಸಾಚಾರದ ಮೂಲಕ ಸಿಂಧ್ ನ ಸ್ವಾತಂತ್ರ್ಯ ಚಳವಳಿಯನ್ನು "ಕ್ರೂರವಾಗಿ ಹತ್ತಿಕ್ಕಲಾಗುತ್ತಿದೆ" ಎಂದು ಬರ್ಫತ್ ಹೇಳಿದರು.
"ಪಾಕಿಸ್ತಾನಿ ಸರ್ಕಾರ ಸಿಂಧ್ ರಾಜಕೀಯ ಕಾರ್ಯಕರ್ತರ ವಿರೂಪಗೊಂಡ ದೇಹಗಳನ್ನು ಸಿಂಧ್‌ನ ಮಡಿಲಿಗೆ ಎಸೆಯುತ್ತಲೇ ಇದೆ. ಪಾಕಿಸ್ತಾನ ಸಿಂಧಿ ರಾಷ್ಟ್ರದ ಅಸ್ತಿತ್ವಕ್ಕೆ ಮಾರಕ ವಿಷವಾಗಿದೆ" ಎಂದು ಅವರು ಹೇಳಿದರು. ಈ ಹಿನ್ನೆಲೆಯಲ್ಲಿ, ಸಿಂಗ್ ಅವರ ಮಾತುಗಳು "ರಾಷ್ಟ್ರೀಯ ಏಕತೆ, ಉಳಿವು, ಭದ್ರತೆ ಮತ್ತು ಸಿಂಧಿ ರಾಷ್ಟ್ರದ ಪುನರುಜ್ಜೀವನ ಮತ್ತು ಪೂರ್ಣತೆಗೆ ಭರವಸೆಯ ಕಿರಣ" ದಂತೆ ಕಾಣಿಸಿಕೊಂಡಿವೆ ಎಂದು ಬರ್ಫತ್ ಹೇಳಿದ್ದಾರೆ.
ರಾಜನಾಥ್ ಸಿಂಗ್ ಅವರ ಈ ಹೇಳಿಕೆ ಸಿಂಧಿಗಳಲ್ಲಿ "ಆಶಯ, ಧೈರ್ಯ ಮತ್ತು ಆಕಾಂಕ್ಷೆಯ ನವೀಕೃತ ಚೈತನ್ಯವನ್ನು ಹುಟ್ಟುಹಾಕಿದೆ" ಎಂದು ಅವರು ಹೇಳಿದರು. ಪ್ರಧಾನಿ ನರೇಂದ್ರ ಮೋದಿ ಕೂಡ ಇದೇ ರೀತಿಯ ಭಾವನೆಗಳನ್ನು ಪ್ರತಿಧ್ವನಿಸುತ್ತಾರೆ ಎಂಬ ಭರವಸೆಯನ್ನು ಬರ್ಫತ್ ವ್ಯಕ್ತಪಡಿಸಿದರು.
ಸಿಂಧಿಗಳನ್ನು ಸಹಿಷ್ಣುತೆ ಮತ್ತು ಆಧ್ಯಾತ್ಮಿಕ ಮಾನವತಾವಾದದಲ್ಲಿ ಬೇರೂರಿರುವ ಪ್ರಾಚೀನ ರಾಷ್ಟ್ರ ಎಂದು ಹೇಳಿರುವ ಬರ್ಫತ್, ಸಿಂಧಿ ವಿದ್ವಾಂಸರು ಮತ್ತು ಸೂಫಿ ಐಕಾನ್‌ಗಳಾದ ಶಾ ಅಬ್ದುಲ್ ಲತೀಫ್ ಭಿಟ್ಟೈ, ಸಚಲ್ ಸರ್ಮಸ್ತ್, ಸಾಮಿ ಮತ್ತು ಜುಲೇಲಾಲ್ ಅವರನ್ನು ನೆನಪಿಸಿಕೊಂಡಿದ್ದಾರೆ. ರಾಮ್ ಜೇಠ್ಮಲ್ ಮುಲ್ಚಾನಿಯನ್ನು ಉಲ್ಲೇಖಿಸಿ, "ಒಬ್ಬ ಸಿಂಧಿ ತನ್ನ ತಾಯಿಯ ಗರ್ಭದಿಂದ ನೈಸರ್ಗಿಕ ಸೂಫಿ ಮತ್ತು ಜಾತ್ಯತೀತ ಜೀವಿಯಾಗಿ ಜನಿಸುತ್ತಾನೆ" ಎಂದು ಪುನರುಚ್ಚರಿಸಿದರು.
ಸಿಂಧಿ ವಿದ್ವಾಂಸರು, ಸಿಂಧ್ ಮತ್ತು ಭಾರತದಲ್ಲಿನ ಕಾರ್ಯಕರ್ತರು ಮತ್ತು ಜಾಗತಿಕ ಸಿಂಧಿ ವಲಸೆಗಾರರ ಸದಸ್ಯರನ್ನು ಒಳಗೊಂಡ ಸಿಂಧುದೇಶ ರಾಷ್ಟ್ರೀಯ ಬೌದ್ಧಿಕ ಆಯೋಗದ ರಚನೆಯನ್ನು ಬರ್ಫತ್ ಇದೇ ವೇಳೆ ಪ್ರಸ್ತಾಪಿಸಿದರು. ಸಿಂಧುದೇಶದ ಸ್ವಾತಂತ್ರ್ಯ ಮತ್ತು ಭಾರತದೊಂದಿಗೆ ಭವಿಷ್ಯದ ಒಕ್ಕೂಟ ಸಂಬಂಧಗಳಿಗೆ ಈ ಸಂಸ್ಥೆಯು ಒಂದು ಮಾರ್ಗಸೂಚಿಯನ್ನು ಸಿದ್ಧಪಡಿಸುತ್ತದೆ ಎಂದು ಅವರು ಹೇಳಿದ್ದಾರೆ. ಸಿಂಧು ನದಿಯ ಉದ್ದಕ್ಕೂ ಇರುವ ಸಿಂಧ್ ಪ್ರದೇಶವು 1947 ರ ವಿಭಜನೆಯ ನಂತರ ಪಾಕಿಸ್ತಾನದ ಭಾಗವಾಯಿತು.
ತಮ್ಮ ಭಾಷಣದಲ್ಲಿ, ರಾಜನಾಥ್ ಸಿಂಗ್ ಸಾಂಸ್ಕೃತಿಕ ಸ್ಮರಣೆ ಮತ್ತು ಐತಿಹಾಸಿಕ ಭಾವನೆ ಎರಡನ್ನೂ ಉಲ್ಲೇಖಿಸುತ್ತಾ, "ಸಿಂಧ್‌ನಲ್ಲಿ ಮಾತ್ರವಲ್ಲ, ಭಾರತದಾದ್ಯಂತ ಹಿಂದೂಗಳು ಸಿಂಧೂ ನದಿಯನ್ನು ಪವಿತ್ರವೆಂದು ಪರಿಗಣಿಸಿದ್ದಾರೆ. ಸಿಂಧ್‌ನಲ್ಲಿರುವ ಅನೇಕ ಮುಸ್ಲಿಮರು ಸಿಂಧೂ ನದಿಯ ನೀರು ಮೆಕ್ಕಾದ ಆಬ್-ಎ-ಜಮ್ಜಾಮ್‌ಗಿಂತ ಕಡಿಮೆ ಪವಿತ್ರವಲ್ಲ ಎಂದು ನಂಬಿದ್ದಾರೆ" ಎಂದು ಅವರು ಹೇಳಿದರು.
ಭಾರತದ ರಾಷ್ಟ್ರಗೀತೆಯು ಉಪಖಂಡದ ಸಾಂಸ್ಕೃತಿಕ ಕಲ್ಪನೆಯಲ್ಲಿ ಸಿಂಧ್‌ನ ಸ್ಥಾನವನ್ನು ಪ್ರತಿಬಿಂಬಿಸುತ್ತಲೇ ಇದೆ ಎಂದು ಅವರು ಗಮನಸೆಳೆದರು, ಜನರು ಇನ್ನೂ ಹೆಮ್ಮೆಯಿಂದ "...ಪಂಜಾಬ್, ಸಿಂಧ್, ಗುಜರಾತ್, ಮರಾಠಾ" ಎಂದು ಹಾಡುತ್ತಾರೆ ಮತ್ತು "ಶಾಶ್ವತವಾಗಿ ಅದನ್ನು ಹಾಡುತ್ತಾರೆ" ಎಂದು ರಾಜನಾಥ್ ಸಿಂಗ್ ಹೇಳಿದ್ದಾರೆ.
Advertisement