ಶಂಕಿತ ದಾಳಿಕೋರ 'ನರಕ ದೇಶ' ಆಫ್ಘಾನಿಸ್ತಾನದಿಂದ ಬಂದವನು, ಇದು ಭಯೋತ್ಪಾದಕ ಕೃತ್ಯ: ನ್ಯಾಷನಲ್ ಗಾರ್ಡ್ ಮೇಲೆ ದಾಳಿಗೆ Donald Trump ತೀವ್ರ ಖಂಡನೆ
ಭಾರತೀಯ ಕಾಲಮಾನ ಪ್ರಕಾರ ನಿನ್ನೆ ಬುಧವಾರ ಅಮೆರಿಕಾದ ಶ್ವೇತಭವನದ ಬಳಿ ಇಬ್ಬರು ರಾಷ್ಟ್ರೀಯ ಗಾರ್ಡ್ ಸದಸ್ಯರ ಮೇಲೆ ನಡೆದ ಗುಂಡಿನ ದಾಳಿಯನ್ನು ಭಯೋತ್ಪಾದನಾ ಕೃತ್ಯ ಮತ್ತು ಮಾನವೀಯತೆಯ ವಿರುದ್ಧದ ಅಪರಾಧ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಖಂಡಿಸಿದ್ದಾರೆ.
ಫ್ಲೋರಿಡಾದಲ್ಲಿ ಮಾತನಾಡಿದ ಅವರು, ದಾಳಿಯನ್ನು ಘೋರ, ದುಷ್ಟ ಮತ್ತು ದ್ವೇಷದ ಕೃತ್ಯ ಎಂದು ಕರೆದಿದ್ದಾರೆ. ಅಪರಾಧಿಯು ತುಂಬಾ ದುಬಾರಿ ಬೆಲೆ ತೆರಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಕಳೆದ ಹಾರಿ ಜೋ ಬೈಡೆನ್ ಆಡಳಿತದಡಿಯಲ್ಲಿ ಪ್ರವೇಶ ಪಡೆದ ಎಲ್ಲಾ ಆಫ್ಘಾನ್ ನಿರಾಶ್ರಿತರ ಪರಿಶೀಲನೆಗೆ ಇದೇ ಸಂದರ್ಭದಲ್ಲಿ ಅಧಿಕಾರಿಗಳಿಗೆ ಕರೆ ನೀಡಿದರು. ಆಫ್ಘಾನಿಸ್ತಾನವನ್ನು "ನರಕ" ಎಂದು ಕರೆದ ಅವರು ಅಲ್ಲಿನ ಪ್ರಜೆಗಳ ಪರಿಶೀಲನೆಯಲ್ಲಿ ವೈಫಲ್ಯವಾಗಿದೆ ಎಂದರು.
ಶ್ವೇತಭವನದ ವಾಯುವ್ಯಕ್ಕೆ ಸರಿಸುಮಾರು ಎರಡು ಬ್ಲಾಕ್‌ಗಳ ದೂರದಲ್ಲಿ ಈ ದಾಳಿ ಸಂಭವಿಸಿದೆ. ಅಲ್ಲಿ ಇಬ್ಬರು ಪಶ್ಚಿಮ ವರ್ಜೀನಿಯಾ ರಾಷ್ಟ್ರೀಯ ಗಾರ್ಡ್ ಸದಸ್ಯರನ್ನು ಮೆಟ್ರೋ ನಿಲ್ದಾಣದ ಬಳಿ ಹೊಂಚು ಹಾಕಿ ದಾಳಿ ಮಾಡಲಾಗಿದೆ. ಇಬ್ಬರನ್ನೂ ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಎಫ್‌ಬಿಐ ನಿರ್ದೇಶಕ ಕಾಶ್ ಪಟೇಲ್ ಮತ್ತು ವಾಷಿಂಗ್ಟನ್ ಮೇಯರ್ ಮುರಿಯಲ್ ಬೌಸರ್ ಹೇಳಿದ್ದಾರೆ.
ಅಧಿಕಾರಿಗಳು ಶಂಕಿತನನ್ನು ಆಫ್ಘಾನಿಸ್ತಾನ ಪ್ರಜೆ ರಹಮಾನಲ್ಲಾ ಲಕನ್ವಾಲ್ ಎಂದು ಗುರುತಿಸಿದ್ದಾರೆ, ಈತ ಸೆಪ್ಟೆಂಬರ್ 2021 ರಲ್ಲಿ ಯುಎಸ್ ಪ್ರವೇಶಿಸಿದ್ದನು. ತನಿಖಾಧಿಕಾರಿಗಳು ಇನ್ನೂ ಆತನ ಹಿನ್ನೆಲೆ ಮತ್ತು ಉದ್ದೇಶದ ವಿವರಗಳನ್ನು ದೃಢಪಡಿಸುತ್ತಿದ್ದಾರೆ.
ಶಂಕಿತ ವ್ಯಕ್ತಿ ಅಫ್ಘಾನಿಸ್ತಾನದಿಂದ ಅಮೆರಿಕ ಪ್ರವೇಶಿಸಿದ್ದಾನೆ ಎಂದು ಗೃಹ ಭದ್ರತಾ ಇಲಾಖೆಗೆ ಗೊತ್ತಾಗಿದೆ. ಲಭ್ಯವಿರುವ ಮಾಹಿತಿಯ ಆಧಾರದ ಮೇಲೆ, ಬಂಧನದಲ್ಲಿರುವ ಶಂಕಿತ ವ್ಯಕ್ತಿ ಈ ಭೂಮಿ ಮೇಲಿನ ಅತ್ಯಂತ ನರಕ ದೇಶ ಆಫ್ಘಾನಿಸ್ತಾನದಿಂದ ನಮ್ಮ ದೇಶಕ್ಕೆ ಬಂದಿದ್ದಾನೆ ಎಂದು ಟಂಪ್ ಹೇಳಿದರು.
ರಾಷ್ಟ್ರೀಯ ಗಾರ್ಡ್ ಸದಸ್ಯರ ಅಪರೂಪದ ಗುಂಡಿನ ದಾಳಿಯು ರಾಜಧಾನಿಯಲ್ಲಿ ಸೈನಿಕರ ಉಪಸ್ಥಿತಿಯ ಕುರಿತು ಚರ್ಚೆ ನಡೆಯುತ್ತಿದೆ. ಮೂಲತಃ ಸ್ಥಳೀಯ ಪೊಲೀಸ್ ಪಡೆಗಳನ್ನು ಟ್ರಂಪ್ ಅವರ ತುರ್ತು ಆದೇಶದಡಿಯಲ್ಲಿ ನಿಯೋಜಿಸಲಾಗಿತ್ತು. ಫೆಡರಲ್ ನ್ಯಾಯಾಧೀಶರು ಇತ್ತೀಚೆಗೆ ನಿಯೋಜನೆಯನ್ನು ಕೊನೆಗೊಳಿಸಲು ಆದೇಶಿಸಿದರೂ, ಮೇಲ್ಮನವಿ ಸಲ್ಲಿಸಲು ಅವಕಾಶ ನೀಡಲು ಆದೇಶವನ್ನು ತಾತ್ಕಾಲಿಕವಾಗಿ ತಡೆಹಿಡಿಯಲಾಯಿತು.
ಕಾನೂನು ಜಾರಿ ಅಧಿಕಾರಿಗಳು ಗುಂಡಿನ ದಾಳಿಯ ತನಿಖೆಯನ್ನು ಮುಂದುವರೆಸಿದ್ದಾರೆ. ವಿಡಿಯೊ ದೃಶ್ಯಾವಳಿ ಮತ್ತು ಪ್ರತ್ಯಕ್ಷದರ್ಶಿಗಳ ಹೇಳಿಕೆಗಳನ್ನು ಪರಿಶೀಲಿಸುತ್ತಿದ್ದಾರೆ. ವಾಷಿಂಗ್ಟನ್‌ನಲ್ಲಿ ಭದ್ರತಾ ಪಡೆ ನಿಯೋಜನೆ ಹೆಚ್ಚಾಗಿದೆ.


