
ಸಿಂಗಾಪೂರ್: ಸಿಂಗಾಪುರಕ್ಕೆ ತೆರಳಿದ್ದ ಇಬ್ಬರು ಭಾರತೀಯರ ಪುರುಷರು ಲಾಡ್ಜ್ವೊಂದರಲ್ಲಿ ಇಬ್ಬರು ಲೈಂಗಿಕ ಕಾರ್ಯಕರ್ತೆಯರ ಮೇಲೆ ಹಲ್ಲೆ ಮಾಡಿ, ದರೋಡೆ ಮಾಡಿದ್ದಾರೆ.
ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಬ್ಬರಿಗೆ ತಲಾ ಐದು ವರ್ಷ ಒಂದು ತಿಂಗಳು ಜೈಲುವಾಸ ಮತ್ತು 12 ಬೆತ್ತದ ಹೊಡೆತಗಳ ಶಿಕ್ಷೆಯನ್ನು ವಿಧಿಸಿ ಸಿಂಗಾಪುರ ಕೋರ್ಟ್ ಆದೇಶ ನೀಡಿದೆ.
23 ವರ್ಷದ ಅರೋಕ್ಕಿಯಸಾಮಿ ಡೈಸನ್ ಮತ್ತು 27 ವರ್ಷದ ರಾಜೇಂದ್ರನ್ ಮಾಯಿಲರಸನ್ ಶಿಕ್ಷೆಗೊಳಗಾದ ಅಪರಾಧಿಗಳು. ಇಬ್ಬರು ಕೋರ್ಟ್ನಲ್ಲಿ ಸ್ವಯಂಪ್ರೇರಣೆಯಿಂದ ಕಾರ್ಯಕರ್ತೆಯರ ಮೇಲೆ ಹಲ್ಲೆ ಮಾಡಿದ್ದ ಬಗ್ಗೆ ತಪ್ಪೊಪ್ಪಿಕೊಂಡಿದ್ದಾರೆ.
ಡೈಸನ್ ಮತ್ತು ರಾಜೇಂದ್ರನ್ ಏ.24 ರಂದು ರಜೆಯ ನಿಮಿತ್ತ ಭಾರತದಿಂದ ಸಿಂಗಾಪುರಕ್ಕೆ ತೆರಳಿದ್ದಾರೆ. ಎರಡು ದಿನಗಳ ಬಳಿಕ ಲಿಟಲ್ ಇಂಡಿಯಾ ಪ್ರದೇಶದಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ, ಅಪರಿಚಿತ ವ್ಯಕ್ತಿಯೊಬ್ಬರು ಮಾತನಾಡಿಸಿದ್ದು, ಲೈಂಗಿಕ ಸೇವೆಗಳಿಗಾಗಿ ವೇಶ್ಯೆಯರನ್ನು ನೇಮಿಸಿಕೊಳ್ಳಲು ಆಸಕ್ತಿ ಇದೆಯೇ ಎಂದು ಕೇಳಿದ್ದಾನೆ. ಬಳಿಕ ಹೋಗುವಾಗ ಇಬ್ಬರು ಮಹಿಳೆಯರ ಸಂಪರ್ಕ ಮಾಹಿತಿಯನ್ನು ಕೊಟ್ಟಿದ್ದಾನೆ.
ಲೈಂಗಿಕ ಸೇವೆಗಾಗಿ ಎಂದು ಓರ್ವ ಮಹಿಳೆಯನ್ನು ತಮ್ಮ ಕೋಣೆಗೆ ಕರೆಸಿಕೊಂಡು, ಅವಳ ಕೈಕಾಲುಗಳನ್ನು ಬಟ್ಟೆಯಿಂದ ಕಟ್ಟಿ, ಕಪಾಳಮೋಕ್ಷ ಮಾಡಿದ್ದಾರೆ. ಆಕೆಯ ಆಭರಣಗಳು, 2 ಸಾವಿರ ಸಿಂಗಾಪುರ್ ಡಾಲರ್ ನಗದು, ಪಾಸ್‌ಪೋರ್ಟ್ ಮತ್ತು ಬ್ಯಾಂಕ್ ಕಾರ್ಡ್‌ಗಳನ್ನು ದೋಚಿದ್ದಾರೆ.
ಅದೇ ರೀತಿ ಮತ್ತೊಬ್ಬ ಮಹಿಳೆಯನ್ನು ಸಂಪರ್ಕಿಸಿ ಅವಳನ್ನು ರೂಮ್ಗೆ ಕರೆಸಿಕೊಂಡು ದರೋಡೆ ಮಾಡಿದ್ದು, ಘಟನೆ ಬಗ್ಗೆ ಹೊರಗಡೆ ಹೇಳದಂತೆ ಬೆದರಿಕೆ ಹಾಕಿದ್ದರು ಎನ್ನಲಾಗಿದೆ. ಬೆಳಗ್ಗೆ ಸಂತ್ರಸ್ತೆ ಘಟನೆಯನ್ನು ಇನ್ನೊಬ್ಬ ವ್ಯಕ್ತಿ ಮುಂದೆ ನಡೆದ ಘಟನೆ ಬಗ್ಗೆ ಹೇಳಿದ್ದು, ಇಬ್ಬರ ಕೃತ್ಯ ಬಯಲಿಗೆ ಬಂದಿದೆ. ತಕ್ಷಣ ಪೊಲೀಸರಿಗೆ ದೂರು ನೀಡಿದ ಬಳಿಕ ಆರೋಪಿಗಳನ್ನು ಬಂಧಿಸಿದ್ದಾರೆ.
Advertisement