
ಕೈವ್: ಉಕ್ರೇನ್‌ನ ಸುಮಿ ಪ್ರಾಂತ್ಯದಲ್ಲಿರುವ ರೈಲ್ವೆ ನಿಲ್ದಾಣದಲ್ಲಿ ರೈಲನ್ನು ಗುರಿಯಾಗಿಸಿಕೊಂಡು ರಷ್ಯಾ ಶನಿವಾರ ನಡೆಸಿದ ಡ್ರೋನ್ ದಾಳಿಯಲ್ಲಿ ಒಬ್ಬರು ಮೃತಪಟ್ಟಿದ್ದು, ಇತರ 30 ಮಂದಿ ಗಾಯಗೊಂಡಿದ್ದಾರೆ.
ರಷ್ಯಾ ಉದ್ದೇಶಪೂರ್ವಕವಾಗಿ ಪ್ರಯಾಣಿಕ ರೈಲನ್ನು ಗುರಿಯಾಗಿಸಿಕೊಂಡಿದೆ ಎಂದು ಉಕ್ರೇನ್ ವಿದೇಶಾಂಗ ಸಚಿವರು ಹೇಳಿದ್ದಾರೆ.
"ಸುಮಿ ಪ್ರದೇಶದ ಶೋಸ್ಟ್ಕಾದಲ್ಲಿರುವ ರೈಲು ನಿಲ್ದಾಣದ ಮೇಲೆ ರಷ್ಯಾದ ಕ್ರೂರ ಡ್ರೋನ್ ದಾಳಿ ಎಂದು ಉಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಟೆಲಿಗ್ರಾಮ್‌ನಲ್ಲಿ ಬರೆದುಕೊಂಡಿದ್ದಾರೆ. ದಾಳಿಯಿಂದ ಬೆಂಕಿಯಿಂದ ಹೊತ್ತಿ ಉರಿಯುತ್ತಿರು ಪ್ರಯಾಣಿಕರ ರೈಲಿನ ವಿಡಿಯೋವನ್ನು ಅವರು ಪೋಸ್ಟ್ ಮಾಡಿದ್ದಾರೆ.
ರಷ್ಯಾದೊಂದಿಗಿನ ಶಾಂತಿ ಮಾತುಕತೆ ವಿಫಲದಿಂದ ಹತಾಶೆಗೊಳಗಾಗಿರುವ ಝೆಲೆನ್ಸ್ಕಿ, ರಷ್ಯಾ ವಿರುದ್ಧ ಬಲವಾದ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ. ಪ್ರತಿದಿನ ರಷ್ಯಾ ಮುಗ್ದ ಜನರ ಜೀವಗಳನ್ನು ತೆಗೆದುಕೊಳ್ಳುತ್ತಿದೆ. ಇದನ್ನು ಜಗತ್ತು ನಿರ್ಲಕ್ಷಿಸಬಾರದು. ಇದೊಂದು ಭಯೋತ್ಪಾದನಾ ಕೃತ್ಯ ಎಂದು ಕರೆದಿದ್ದಾರೆ.
ಯುರೋಪಿಯನ್ ಕಮಿಷನ್ ಅಧ್ಯಕ್ಷೆ ಉರ್ಸುಲಾ ವಾನ್ ಡೆರ್ ಲೇಯೆನ್ ರಷ್ಯಾ ದಾಳಿಯನ್ನು ಖಂಡಿಸಿದ್ದಾರೆ. ಈ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಅವರು, ಉಕ್ರೇನ್‌ನೊಂದಿಗೆ ಯುರೋಪಿಯನ್ ಕಮಿಷನ್ ನಿಂತಿದೆ. ರಷ್ಯಾ ಶಾಶ್ವತವಾಗಿ ಶಾಂತಿ ಒಪ್ಪಂದ ಒಪ್ಪುವವರೆಗೂ ಅದರ ಮೇಲೆ ಒತ್ತಡವನ್ನು ಹೆಚ್ಚಿಸುವುದನ್ನು ಮುಂದುವರಿಸಬೇಕು ಎಂದು ಬರೆದುಕೊಂಡಿದ್ದಾರೆ.
Advertisement