
ಮಟೇರಾ: ದಕ್ಷಿಣ ಇಟಲಿಯ ಮಟೇರಾ ನಗರದಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ನಾಲ್ವರು ಭಾರತೀಯರು ಸಾವನ್ನಪ್ಪಿದ್ದಾರೆ ಎಂದು ರೋಮ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಸೋಮವಾರ ತಿಳಿಸಿದೆ.
ಶನಿವಾರ ಅಗ್ರಿ ವ್ಯಾಲಿಯ ಮಟೇರಾ ನಗರದ ಸ್ಕ್ಯಾಂಜಾನೊ ಜೊನಿಕೊ ಪುರಸಭೆಯಲ್ಲಿ ಭಾರತೀಯರು ಪ್ರಯಾಣಿಸುತ್ತಿದ್ದ ರೆನಾಲ್ಟ್ ಸಿನಿಕ್ ಎಸ್ ಯುವಿ ಕಾರು, ಟ್ರಕ್‌ಗೆ ಡಿಕ್ಕಿ ಹೊಡೆದಿದೆ. ಏಳು ಆಸನಗಳ ಈ ಕಾರಿನಲ್ಲಿ 10 ಜನ ಪ್ರಯಾಣಿಸುತ್ತಿದ್ದರು ಎಂದು ಇಟಾಲಿಯನ್ ಸುದ್ದಿ ಸಂಸ್ಥೆ ANSA ಭಾನುವಾರ ವರದಿ ಮಾಡಿದೆ.
ಮೃತರನ್ನು ಕುಮಾರ್ ಮನೋಜ್(34), ಸಿಂಗ್ ಸುರ್ಜಿತ್(33), ಸಿಂಗ್ ಹರ್ವಿಂದರ್(31) ಮತ್ತು ಸಿಂಗ್ ಜಸ್ಕರನ್(20) ಎಂದು ಗುರುತಿಸಲಾಗಿದೆ.
"ದಕ್ಷಿಣ ಇಟಲಿಯ ಮಟೇರಾದಲ್ಲಿ ನಡೆದ ರಸ್ತೆ ಅಪಘಾತದಲ್ಲಿ ನಾಲ್ವರು ಭಾರತೀಯ ಪ್ರಜೆಗಳ ದುರಂತ ಸಾವಿಗೆ ಭಾರತೀಯ ರಾಯಭಾರ ಕಚೇರಿ ತೀವ್ರ ಸಂತಾಪ ಸೂಚಿಸುತ್ತದೆ" ಎಂದು ಭಾರತೀಯ ರಾಯಭಾರ ಕಚೇರಿ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದೆ.
"ವಿವರಗಳನ್ನು ಪಡೆಯಲು ನಾವು ಸ್ಥಳೀಯ ಇಟಾಲಿಯನ್ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದ್ದೇವೆ. ಸಂಬಂಧಪಟ್ಟ ಕುಟುಂಬಗಳಿಗೆ ರಾಯಭಾರ ಕಚೇರಿ ಎಲ್ಲಾ ಸಂಭಾವ್ಯ ಕಾನ್ಸುಲರ್ ಸಹಾಯ ಒದಗಿಸುತ್ತದೆ" ಎಂದು ರಾಯಭಾರ ಕಚೇರಿ ತಿಳಿಸಿದೆ.
ಅಪಘಾತದಲ್ಲಿ ಗಾಯಗೊಂಡ ಐದು ಮಂದಿಯನ್ನು ಪೊಲಿಕೊರೊ(ಮಟೆರಾ) ಆಸ್ಪತ್ರೆಗೆ ದಾಖಲಿಸಲಾಗಿದೆ. ಗಂಭೀರವಾಗಿ ಗಾಯಗೊಂಡ ಮತ್ತೊಬ್ಬರನ್ನು ಪೊಟೆಂಜಾದ ಸ್ಯಾನ್ ಕಾರ್ಲೊ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ANSA ವರದಿ ಮಾಡಿದೆ.
ಟ್ರಕ್ ಚಾಲಕನಿಗೆ ಯಾವುದೇ ಹಾನಿಯಾಗಿಲ್ಲ. ಮಟೆರಾ ಪಬ್ಲಿಕ್ ಪ್ರಾಸಿಕ್ಯೂಟರ್ ಕಚೇರಿ ಈ ಅಪಘಾತದ ತನಿಖೆ ನಡೆಸುತ್ತಿದೆ.
Advertisement