
ಈ ವರ್ಷದ ನೊಬೆಲ್ ಶಾಂತಿ ಪ್ರಶಸ್ತಿ ಘೋಷಣೆ ಭಾರೀ ಸುದ್ದಿ ಮಾಡಿದೆ. ಇನ್ನು ಕೆಲವೇ ಗಂಟೆಗಳಲ್ಲಿ ಘೋಷಣೆಯಾಗುವ ಸಾಧ್ಯತೆಯಿದೆ. ಈ ವರ್ಷದ ನೊಬೆಲ್ ಶಾಂತಿ ಪ್ರಶಸ್ತಿಯನ್ನು ತಮಗೇ ನೀಡಬೇಕೆಂದು ಸಾರಿ ಸಾರಿ ಹೇಳುವ ಡೊನಾಲ್ಡ್ ಟ್ರಂಪ್ ಅವರು ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಅವರ 2009 ರ ನೊಬೆಲ್ ಪ್ರಶಸ್ತಿ ಬಗ್ಗೆ ಬಹಿರಂಗವಾಗಿಯೇ ಟೀಕಿಸಿದ್ದಾರೆ.
ಏನನ್ನೂ ಮಾಡದ ದೇಶವನ್ನು ನಾಶಮಾಡಿದ್ದಕ್ಕಾಗಿ ಒಬಾಮಾ ಅವರು ನೊಬೆಲ್ ಶಾಂತಿ ಪ್ರಶಸ್ತಿ ಪಡೆದಿದ್ದಾರೆ. ಒಬಾಮಾ ಒಬ್ಬ ಉತ್ತಮ ಅಧ್ಯಕ್ಷರಲ್ಲ ಎಂದು ಟೀಕಿಸಿದ್ದಾರೆ.
ಇಂದು ಮಧ್ಯಾಹ್ನ ಘೋಷಣೆ
ನಾರ್ವೆಯ ನೊಬೆಲ್ ಸಮಿತಿಯು ನೊಬೆಲ್ ಶಾಂತಿ ಪ್ರಶಸ್ತಿಯನ್ನು ನೀಡಲು ಕೆಲವು ಗಂಟೆಗಳ ಮೊದಲು ಯುಎಸ್ ಅಧ್ಯಕ್ಷರ ಹೇಳಿಕೆಗಳು ಬಂದವು. ಶಾಂತಿ ಪ್ರಶಸ್ತಿಯನ್ನು ಭಾರತೀಯ ಕಾಲಮಾನ ಇಂದು ಮಧ್ಯಾಹ್ನ 2:30 ಕ್ಕೆ ಘೋಷಿಸಲಾಗುತ್ತದೆ.
ನಿನ್ನೆ ಶ್ವೇತಭವನದ ಓವಲ್ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಟ್ರಂಪ್, ಒಬಾಮಾ ಅವರ ನೊಬೆಲ್ ಗೆಲುವಿನ ನ್ಯಾಯಸಮ್ಮತತೆಯನ್ನು ಪ್ರಶ್ನಿಸುತ್ತಾ, ಅವರು ಏನೂ ಮಾಡದಿದ್ದಕ್ಕಾಗಿ ಅದನ್ನು ಪಡೆದರು. ಒಬಾಮಾಗೆ ಬಹುಮಾನ ಸಿಕ್ಕಿತು, ಏನು ನೋಡಿ ಅವರನ್ನು ಆಯ್ಕೆ ಮಾಡಿದರು ಎಂದು ಗೊತ್ತಿಲ್ಲ, ಬಹುಶಃ ನಮ್ಮ ದೇಶ ನಾಶಮಾಡಿದ್ದಕ್ಕಾಗಿ ಕೊಟ್ಟರೇನೋ, ಅವರು ಉತ್ತಮ ಅಧ್ಯಕ್ಷರಾಗಿರಲಿಲ್ಲ. ಅವರು ಚುನಾವಣೆಯಲ್ಲಿ ಗೆದ್ದ ಕೆಲವೇ ತಿಂಗಳಲ್ಲಿ ಪ್ರಶಸ್ತಿ ನೀಡಿದರು ಎಂದು ಟೀಕಿಸಿದರು.
8 ಯುದ್ಧ ನಿಲ್ಲಿಸಿದ್ದೇನೆ
ಇದೇ ವೇಳೆ 8 ಯುದ್ಧಗಳನ್ನು ನಿಲ್ಲಿಸಿದ್ದೇನೆ ಎಂದು ಪುನರುಚ್ಛರಿಸಿದ ಡೊನಾಲ್ಡ್ ಟ್ರಂಪ್, ಗಾಜಾದಲ್ಲಿ ಶಾಂತಿ ಸ್ಥಾಪನೆ ಸೇರಿ ಎಂಟು ಯುದ್ಧಗಳನ್ನು ಕೊನೆಗೊಳಿಸುವಲ್ಲಿ ತಮ್ಮ ಸಾಧನೆ ಉಲ್ಲೇಖಿಸಿದರು. ಆದರೆ ಪ್ರಶಸ್ತಿ ಸಿಗುತ್ತದೆ ಎಂದು ನಾನು ಹೀಗೆ ಮಾಡಿದ್ದಲ್ಲ.
ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಕೇವಲ ಎಂಟು ತಿಂಗಳಲ್ಲಿ 2009 ರಲ್ಲಿ ಒಬಾಮಾ ಅವರಿಗೆ ನೊಬೆಲ್ ಶಾಂತಿ ಪ್ರಶಸ್ತಿ ನೀಡಲಾಯಿತು ಎಂದು ಟ್ರಂಪ್ ಹೇಳಿದರು.
ಅಂತಾರಾಷ್ಟ್ರೀಯ ರಾಜತಾಂತ್ರಿಕತೆ ಮತ್ತು ಜನರ ನಡುವಿನ ಸಹಕಾರವನ್ನು ಬಲಪಡಿಸಲು ತಮ್ಮ ಪರಿಶ್ರಮ ವಿವರಿಸಿದ್ದಕ್ಕಾಗಿ ಒಬಾಮಾ ಅವರಿಗೆ ಪ್ರಶಸ್ತಿ ನೀಡಲಾಯಿತು ಎಂದರು.
ವಿಶ್ವಸಂಸ್ಥೆಯಲ್ಲೂ ಪ್ರಸ್ತಾಪ
ಕಳೆದ ತಿಂಗಳು ವಿಶ್ವಸಂಸ್ಥೆಯಲ್ಲಿ ಇದೇ ವಿಚಾರ ಪ್ರಸ್ತಾಪಿಸಿದ್ದ ಟ್ರಂಪ್, ತಮ್ಮದೇ ಆದ ವಿದೇಶಾಂಗ ನೀತಿಯನ್ನು ಶ್ಲಾಘಿಸಿಕೊಂಡಿದ್ದರು. ನಾನು ಎಂಟು ಯುದ್ಧಗಳನ್ನು ನಿಲ್ಲಿಸಿದ್ದೇನೆ, ಇದನ್ನು ನೊಬೆಲ್ ಶಾಂತಿ ಪ್ರಶಸ್ತಿ ಆಯ್ಕೆ ಸಮಿತಿಯವರು ಪರಿಗಣಿಸಬೇಕು ಎಂದಿದ್ದರು. ಟ್ರಂಪ್ ಅವರು ಪದೇ ಪದೇ ಇದನ್ನು ಪ್ರಸ್ತಾಪಿಸುವುದಕ್ಕೆ ಅಮೆರಿಕದಲ್ಲಿ ವಿರೋಧ ಪಕ್ಷಗಳಿಂದ ಅಪಸ್ವರ ಕೇಳಿಬಂದಿದೆ.
Advertisement