ನೊಬೆಲ್ ಶಾಂತಿ ಪ್ರಶಸ್ತಿ ಘೋಷಣೆಯಾಗುತ್ತಿದ್ದಂತೆಯೇ Maria Corina Machado ವಿವಾದಕ್ಕೆ ಗುರಿ; ಭುಗಿಲೆದ್ದ ಅಶಾಂತಿ!

ಸರ್ವಾಧಿಕಾರದ ನಡುವೆ ವೆನೆಜುವೆಲಾದಲ್ಲಿ ಪ್ರಜಾಪ್ರಭುತ್ವವನ್ನು ಜೀವಂತವಿರಿಸುವ ಕೆಲಸ ಮಾಡಿರುವ "ಶಾಂತಿಯ ಚಾಂಪಿಯನ್" ಎಂದು ನೊಬೆಲ್ ಪ್ರಶಸ್ತಿ ಸಮಿತಿ ಮಚಾದೊ ಅವರನ್ನು ಶ್ಲಾಘಿಸಿದೆ.
Maria Corina Machado
ನೊಬೆಲ್ ಶಾಂತಿ ಪ್ರಶಸ್ತಿ ವಿಜೇತೆ ಮರಿಯಾ ಕೊರಿನಾ ಮಚಾದೊ online desk
Updated on

ವೆನೆಜುವೆಲಾದ ಪ್ರಜಾಪ್ರಭುತ್ವ ಹೋರಾಟಗಾರ್ತಿ ಮರಿಯಾ ಕೊರಿನಾ ಮಚಾದೊ ಅವರಿಗೆ 2025 ರ ನೊಬೆಲ್ ಶಾಂತಿ ಪ್ರಶಸ್ತಿ ಘೋಷಣೆಯಾದ ನಂತರ ವಿವಾದವೊಂದು ಹುಟ್ಟಿಕೊಂಡಿದೆ.

ಮರಿಯಾ ಕೊರಿನಾ ಇಸ್ರೇಲ್ ಗಾಜಾ ಮೇಲೆ ನಡೆಸಿದ ಬಾಂಬ್ ದಾಳಿಯನ್ನು ಬೆಂಬಲಿಸಿದ್ದರು ಮತ್ತು ಅವರ ದೇಶದಲ್ಲಿ ಸರ್ಕಾರವನ್ನು ಉರುಳಿಸಲು ವಿದೇಶಿ ಹಸ್ತಕ್ಷೇಪಕ್ಕೂ ಕರೆ ನೀಡಿದ್ದಾರೆ ಎಂಬ ಅಸಮಾಧಾನ ಭುಗಿಲೆದ್ದಿದೆ.

ಮಚಾಡೊ ವೆನೆಜುವೆಲಾದ ಪ್ರಜಾಪ್ರಭುತ್ವ ಪರ ಚಳುವಳಿಯಲ್ಲಿ ಪ್ರಮುಖ ವ್ಯಕ್ತಿಯಾಗಿದ್ದು, ಇತ್ತೀಚಿನ ವರ್ಷಗಳಲ್ಲಿ ನಾಗರಿಕ ಧೈರ್ಯದ ಪ್ರಬಲ ಸಂಕೇತವಾಗಿ ಹೊರಹೊಮ್ಮಿದ್ದಾರೆ. ವೆನೆಜುವೆಲಾದಲ್ಲಿ ಪ್ರಜಾಪ್ರಭುತ್ವವನ್ನು ಉತ್ತೇಜಿಸುವಲ್ಲಿ ಮತ್ತು ಸರ್ವಾಧಿಕಾರದ ವಿರುದ್ಧ ಹೋರಾಡುವಲ್ಲಿ ಅವರ ಕೊಡುಗೆಯನ್ನು ಗುರುತಿಸಿ ನೊಬೆಲ್ ಪ್ರಶಸ್ತಿ ಸಮಿತಿ ಅವರನ್ನು ನೊಬೆಲ್ ಶಾಂತಿ ಪ್ರಶಸ್ತಿ ವಿಜೇತೆ ಎಂದು ಘೋಷಿಸಿತು.

ಮರಿಯಾ ಕೊರಿನಾಗೆ ನೊಬೆಲ್ ಶಾಂತಿ ಪ್ರಶಸ್ತಿ ಲಭಿಸಿದ್ದಕ್ಕಾಗಿ ಅಮೆರಿಕದ ಶ್ವೇತಭವನ ಸಹ ಅಸಮಾಧಾನ ವ್ಯಕ್ತಪಡಿಸಿದ್ದು, 'ಶಾಂತಿಗಿಂತ ರಾಜಕೀಯವೇ ಹೆಚ್ಚಾಯಿತು' ಎಂದು ಹೇಳಿದೆ.

ಈ ಬೆಳವಣಿಗೆಗಳ ನಂತರ ಮಚಾಡೊ ತಮ್ಮ ನೊಬೆಲ್ ಪ್ರಶಸ್ತಿಯನ್ನು ಟ್ರಂಪ್‌ಗೆ ಅರ್ಪಿಸಿದರು, ಈ ಬೆನ್ನಲ್ಲೇ ಅಮೆರಿಕ ಅಧ್ಯಕ್ಷರು ಮರಿಯಾ ನೊಬೆಲ್ ಶಾಂತಿ ಪುರಸ್ಕಾರಕ್ಕೆ ಭಾಜನರಾಗಿದ್ದಕ್ಕಾಗಿ ಸಂತೋಷಪಡುವುದಾಗಿ ಹೇಳಿದ್ದರು.

ಮಚಾಡೊಗೆ ನೊಬೆಲ್ ಏಕೆ ಸಿಕ್ಕಿತು

ಸರ್ವಾಧಿಕಾರದ ನಡುವೆ ವೆನೆಜುವೆಲಾದಲ್ಲಿ ಪ್ರಜಾಪ್ರಭುತ್ವವನ್ನು ಜೀವಂತವಿರಿಸುವ ಕೆಲಸ ಮಾಡಿರುವ "ಶಾಂತಿಯ ಚಾಂಪಿಯನ್" ಎಂದು ನೊಬೆಲ್ ಪ್ರಶಸ್ತಿ ಸಮಿತಿ ಮಚಾದೊ ಅವರನ್ನು ಶ್ಲಾಘಿಸಿದೆ. ಸಮಿತಿಯ ಅಧ್ಯಕ್ಷರಾದ ಜೋರ್ಗೆನ್ ವ್ಯಾಟ್ನೆ ಫ್ರೈಡ್ನೆಸ್, ಮಚ್ಹಾಡೊ ಅವರನ್ನು ಒಂದು ಕಾಲದಲ್ಲಿ ವಿಭಜನೆಯಾಗಿದ್ದ ವೆನೆಜುವೆಲಾದಲ್ಲಿ "ರಾಜಕೀಯ ವಿರೋಧದ ನಡುವೆಯೂ ಪ್ರಮುಖ ಒಗ್ಗೂಡಿಸುವ ವ್ಯಕ್ತಿ" ಎಂದು ಬಣ್ಣಿಸಿದ್ದಾರೆ.

ಶಾಂತಿ ಪ್ರಶಸ್ತಿ ವಿಜೇತೆ ಪ್ರಜಾಪ್ರಭುತ್ವದ ಸಾಧನಗಳು ಶಾಂತಿಯ ಸಾಧನಗಳಾಗಿವೆ ಎಂದು ತೋರಿಸಿದ್ದಾರೆ ಎಂದು ಸಮಿತಿ ಮಚಾದೊ ಅವರನ್ನು ಶ್ಲಾಘಿಸುತ್ತಾ, ನಾಗರಿಕರ ಮೂಲಭೂತ ಹಕ್ಕುಗಳನ್ನು ರಕ್ಷಿಸುವ ಮತ್ತು ಅವರ ಧ್ವನಿಯನ್ನು ಕೇಳುವ ವಿಭಿನ್ನ ಭವಿಷ್ಯದ ಭರವಸೆಯನ್ನು ಸಾಕಾರಗೊಳಿಸಿದ್ದಕ್ಕಾಗಿ ಮೆಚ್ಚುಗೆ ವ್ಯಕ್ತಪಡಿಸಿದೆ.

"ಕಳೆದ ವರ್ಷದಲ್ಲಿ, ಮಚಾದೊ ತಲೆಮರೆಸಿಕೊಳ್ಳುವಂತೆ ಒತ್ತಾಯಿಸಲಾಗಿತ್ತು. ಅವರ ಜೀವಕ್ಕೆ ಗಂಭೀರ ಬೆದರಿಕೆಗಳ ಹೊರತಾಗಿಯೂ, ಅವರು ದೇಶದಲ್ಲಿಯೇ ಉಳಿದಿದ್ದಾರೆ. ಆಕೆಯ ಈ ಆಯ್ಕೆ ಲಕ್ಷಾಂತರ ಜನರಿಗೆ ಸ್ಫೂರ್ತಿ ನೀಡಿದೆ.

ಸರ್ವಾಧಿಕಾರಿಗಳು ಅಧಿಕಾರವನ್ನು ವಶಪಡಿಸಿಕೊಂಡಾಗ, ಎದ್ದು ನಿಲ್ಲುವ ಮತ್ತು ವಿರೋಧಿಸುವ ಸ್ವಾತಂತ್ರ್ಯದ ಧೈರ್ಯಶಾಲಿ ರಕ್ಷಕರನ್ನು ಗುರುತಿಸುವುದು ಬಹಳ ಮುಖ್ಯ" ಎಂದು ಫ್ರೈಡ್ನೆಸ್ ತಮ್ಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮಚಾದೊ ವಿರುದ್ಧ ಟೀಕೆ ಏಕೆ?

ಗಾಜಾದಲ್ಲಿ "ನರಮೇಧ"ವನ್ನು ಬೆಂಬಲಿಸಿದ್ದಕ್ಕಾಗಿ ಮಚಾದೊ ಅವರನ್ನು ಗುರಿಯಾಗಿಸಲಾಗುತ್ತಿದೆ. ಟೀಕೆ ಮಾಡುತ್ತಿರುವವರು ಇಸ್ರೇಲ್ ಮತ್ತು ಬೆಂಜಮಿನ್ ನೆತನ್ಯಾಹು ಅವರ ಲಿಕುಡ್ ಪಕ್ಷಕ್ಕೆ ಮಚಾದೊ ಅವರು ಬೆಂಬಲ ವ್ಯಕ್ತಪಡಿಸಿದ್ದ ಹಳೆಯ ಪೋಸ್ಟ್‌ಗಳನ್ನು ಹಂಚಿಕೊಳ್ಳುತ್ತಿದ್ದಾರೆ.

ಅಕ್ಟೋಬರ್ 7, 2023 ರಂದು ನಡೆದ ಹಮಾಸ್ ದಾಳಿಯ ನಂತರ ಅವರು ಇಸ್ರೇಲ್‌ನೊಂದಿಗೆ ಒಗ್ಗಟ್ಟನ್ನು ಪ್ರದರ್ಶಿಸಿದ್ದರೂ, ಪ್ಯಾಲೆಸ್ಟೀನಿಯನ್ನರ ಹತ್ಯೆಗೆ ಅವರು ಎಂದಿಗೂ ವಿವೇಚನೆಯಿಂದ ಬೆಂಬಲ ವ್ಯಕ್ತಪಡಿಸಲಿಲ್ಲ.

Maria Corina Machado
'ನನ್ನ ಪ್ರಶಸ್ತಿ ಟ್ರಂಪ್‌ಗೆ ಸಮರ್ಪಿತ...' Nobel ಶಾಂತಿ ಪ್ರಶಸ್ತಿ ಗೆದ್ದ ಬೆನ್ನಲ್ಲೇ ಮಾರಿಯಾ ಹೇಳಿಕೆ!

ಆದರೆ ಆ ನಂತರದ ವರ್ಷಗಳಲ್ಲಿ ಅವರ ಪೋಸ್ಟ್‌ಗಳು ಮಚಾದೊ ನೆತನ್ಯಾಹು ಅವರ ಮಿತ್ರ ಎಂಬುದನ್ನು ದೃಢಪಡಿಸುತ್ತವೆ. "ವೆನೆಜುವೆಲಾದ ಹೋರಾಟವು ಇಸ್ರೇಲ್‌ನ ಹೋರಾಟ" ಎಂದು ಹೇಳಿದ್ದರು. ಎರಡು ವರ್ಷಗಳ ನಂತರ, ಅವರು ಇಸ್ರೇಲ್ ನ್ನು "ಸ್ವಾತಂತ್ರ್ಯದ ನಿಜವಾದ ಮಿತ್ರ" ಎಂದು ಕರೆದಿದ್ದರು. ಅವರು ಅಧಿಕಾರಕ್ಕೆ ಬಂದರೆ ವೆನೆಜುವೆಲಾದ ರಾಯಭಾರ ಕಚೇರಿಯನ್ನು ಟೆಲ್ ಅವಿವ್‌ನಿಂದ ಜೆರುಸಲೆಮ್‌ಗೆ ಸ್ಥಳಾಂತರಿಸುವುದಾಗಿ ಮಚಾದೊ ಭರವಸೆ ನೀಡಿದ್ದರು.

ನಾರ್ವೇಜಿಯನ್ ಶಾಸಕರಾದ ಬ್ಜೋರ್ನರ್ ಮಾಕ್ಸ್ನೆಸ್, ಮಚಾದೊ 2020 ರಲ್ಲಿ ಇಸ್ರೇಲ್‌ನ ಲಿಕುಡ್ ಪಕ್ಷದೊಂದಿಗೆ ಸಹಕಾರ ದಾಖಲೆಗೆ ಸಹಿ ಹಾಕಿದ್ದಾರೆ ಎಂದು ಗಮನಸೆಳೆದಿದ್ದಾರೆ. ಲಿಕುಡ್ ಪಕ್ಷ "ಗಾಜಾ ನರಮೇಧ"ಕ್ಕೆ ಕಾರಣವಾಗಿದೆ ಮತ್ತು ಆದ್ದರಿಂದ ಈ ಪ್ರಶಸ್ತಿಯು ನೊಬೆಲ್ ಅವರ ಉದ್ದೇಶಕ್ಕೆ ಹೊಂದಿಕೆಯಾಗುವುದಿಲ್ಲ ಎಂದು ಬ್ಜೋರ್ನರ್ ಮಾಕ್ಸ್ನೆಸ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಅಮೆರಿಕ ಮೂಲದ ಮುಸ್ಲಿಂ ನಾಗರಿಕ ಹಕ್ಕುಗಳ ಸಂಘಟನೆಯಾದ ಅಮೇರಿಕನ್-ಇಸ್ಲಾಮಿಕ್ ಸಂಬಂಧಗಳ ಮಂಡಳಿಯೂ ಮರಿಯಾ ಕೊರಿನಾ ಮಚಾದೊ ಅವರಿಗೆ ಅತ್ಯುನ್ನತ ಗೌರವವನ್ನು ನೀಡುವ ನಿರ್ಧಾರವನ್ನು ಟೀಕಿಸಿದೆ. ನೊಬೆಲ್ ಸಮಿತಿಯ ನಿರ್ಧಾರ ಆ ಪ್ರಶಸ್ತಿಯ ಖ್ಯಾತಿಯನ್ನು ಕುಗ್ಗಿಸುವುದರಿಂದ ಸಮಿತಿ ತನ್ನ ನಿರ್ಧಾರವನ್ನು ಮರುಪರಿಶೀಲಿಸಬೇಕು ಎಂದು ಸಂಸ್ಥೆ ದೀರ್ಘ ಆನ್‌ಲೈನ್ ಪೋಸ್ಟ್‌ನಲ್ಲಿ ತಿಳಿಸಿದೆ.

ವಿದೇಶಿ ಹಸ್ತಕ್ಷೇಪಕ್ಕೆ ಕರೆ

ವೆನೆಜುವೆಲಾದ ಅಧ್ಯಕ್ಷ ನಿಕೋಲಸ್ ಮಡುರೊ ಅವರ ಆಡಳಿತದ ವಿರುದ್ಧದ ಅಭಿಯಾನದಲ್ಲಿ ವಿದೇಶಿ ಹಸ್ತಕ್ಷೇಪಕ್ಕೆ ಕರೆ ನೀಡಿದ್ದಕ್ಕಾಗಿ ಮಚಾದೊ ಟೀಕೆ ಎದುರಿಸುತ್ತಿದ್ದಾರೆ. 2018 ರಲ್ಲಿ, ಅವರು ತಮ್ಮ ದೇಶದಲ್ಲಿ ಆಡಳಿತ ಬದಲಾವಣೆಗೆ ಇಸ್ರೇಲ್ ಮತ್ತು ಅರ್ಜೆಂಟೀನಾದಿಂದ ಬೆಂಬಲ ಕೋರಿ ಪತ್ರ ಬರೆದಿದ್ದರು.

"ಇಂದು, ನಾನು ಅರ್ಜೆಂಟೀನಾದ ಅಧ್ಯಕ್ಷ ಮತ್ತು ಇಸ್ರೇಲ್ ಪ್ರಧಾನಿ ಅವರಿಗೆ ಪತ್ರವನ್ನು ಕಳುಹಿಸುತ್ತಿದ್ದೇನೆ, ಅವರು ಮಾದಕವಸ್ತು ಕಳ್ಳಸಾಗಣೆ ಮತ್ತು ಭಯೋತ್ಪಾದನೆಗೆ ನಿಕಟ ಸಂಬಂಧ ಹೊಂದಿರುವ ಕ್ರಿಮಿನಲ್ ವೆನೆಜುವೆಲಾದ ಆಡಳಿತವನ್ನು ನಿರ್ಮೂಲನೆ ಮಾಡುವಲ್ಲಿ ಮುನ್ನಡೆಯಲು ತಮ್ಮ ಶಕ್ತಿ ಮತ್ತು ಪ್ರಭಾವವನ್ನು ಬಳಸುವಂತೆ ಈ ಪತ್ರದ ಮೂಲಕ ಕೇಳಿಕೊಳ್ಳುತ್ತಿದ್ದೇನೆ ಎಂದು ಮಚಾದೊ ಹೇಳಿದ್ದರು. ತಮ್ಮ ಪತ್ರದ ಪ್ರತಿಯನ್ನೂ ಸಹ ಅವರು ಆನ್‌ಲೈನ್‌ನಲ್ಲಿ ಹಂಚಿಕೊಂಡಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com