
ಮಾಸ್ಕೋ: ರಷ್ಯಾ-ಉಕ್ರೇನ್ ನಡುವಿನ ಯುದ್ಧ ಸದ್ಯಕ್ಕೆ ನಿಲ್ಲುವ ಯಾವುದೇ ಲಕ್ಷಣ ಗೋಚರಿಸುತ್ತಿಲ್ಲ. ಅಮೆರಿಕ ಉಕ್ರೇನ್‌ಗೆ 'ಟೊಮಾಹಾಕ್ ಕ್ಷಿಪಣಿ' (Tomahawk Missiles) ನೀಡುವ ಸಾಧ್ಯತೆಯಿದೆ. ಈ ಬಗ್ಗೆ ರಷ್ಯಾ ತೀವ್ರ ಕಳವಳ ವ್ಯಕ್ತಪಡಿಸಿದೆ. ಎಲ್ಲಾ ಕಡೆಯಿಂದ ಪರಿಸ್ಥಿತಿ ಬಿಗಡಾಯಿಸಿರುವಂತೆಯೇ ಯುದ್ಧ ನಾಟಕೀಯ ಕ್ಷಣ ತಲುಪುತ್ತಿದೆ ಎಂದು ಎಚ್ಚರಿಸಿದೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಟೊಮಾಹಾಕ್ ಕ್ಷಿಪಣಿ ಪೂರೈಕೆಗೆ ಒಪ್ಪಿಗೆ ನೀಡುವ ಮುನ್ನ ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧವನ್ನು ಮುಂದುವರೆಸಲು ಇಷ್ಟವಿಲ್ಲದ ಕಾರಣ ಉಕ್ರೇನ್ ಏನು ಮಾಡಲು ಯೋಚಿಸಿದೆ ಅಂತಾ ತಿಳಿಯಲು ಬಯಸಿರುವುದಾಗಿ ಹೇಳಿದ್ದರು. ಆದಾಗ್ಯೂ, ಅವರು ಈ ವಿಷಯದ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ.
ಟೊಮಾಹಾಕ್ ಕ್ಷಿಪಣಿಯು ಅಮೆರಿಕ ನೌಕಾಪಡೆ ಬಳಸುವ ದೀರ್ಘ-ಶ್ರೇಣಿಯ, ಸಬ್‌ಸಾನಿಕ್ ಕ್ರೂಸ್ ಕ್ಷಿಪಣಿಯಾಗಿದ್ದು, ಇದನ್ನು ಹಡಗುಗಳು ಮತ್ತು ಜಲಾಂತರ್ಗಾಮಿ ನೌಕೆಗಳಿಂದ ಉಡಾವಣೆ ಮಾಡಲಾಗುತ್ತದೆ. ಇದು ಕಡಿಮೆ ಎತ್ತರದಲ್ಲಿ ಹಾರುವ ಮತ್ತು ಸಂಕೀರ್ಣ ಭೂಪ್ರದೇಶವನ್ನು ತಪ್ಪಿಸುವ ಸಾಮರ್ಥ್ಯ ಹೊಂದಿದೆ. 2,500 ಕಿಮೀ (1,550 ಮೈಲುಗಳು)ದೂರ ಕ್ರಮಿಸಬಲ್ಲಾ ಸಾಮರ್ಥ್ಯ ಹೊಂದಿವೆ.
ಅಂದರೆ ಮಾಸ್ಕೋ ಸೇರಿದಂತೆ ರಷ್ಯಾದೊಳಗೆ ತೀವ್ರವಾದ ದಾಳಿ ನಡೆಸಲು ಇವುಗಳನ್ನು ಬಳಸಿಕೊಳ್ಳಲು ಉಕ್ರೇನ್ ಮುಂದಾಗಿದೆ.ಟೊಮಾಹಾಕ್ಸ್‌ನ ಕ್ಷಿಪಣಿಗಳು ಪರಮಾಣು ಸಿಡಿತಲೆಗಳನ್ನು ಸಾಗಿಸಬಲ್ಲವು ಎಂದು ಯುಎಸ್ ಕಾಂಗ್ರೆಷನಲ್ ರಿಸರ್ಚ್ ಸರ್ವಿಸ್ ಹೇಳಿದೆ.
ಎಲ್ಲಾ ಕಡೆಯಿಂದ ಉದ್ವಿಗ್ನತೆ ಹೆಚ್ಚುತ್ತಿದೆ: ಟೊಮಾಹಾಕ್ಸ್‌ನ ವಿಷಯವು ತೀವ್ರ ಕಳವಳಕಾರಿಯಾಗಿದೆ. ಎಲ್ಲಾ ಕಡೆಯಿಂದ ಉದ್ವಿಗ್ನತೆ ಹೆಚ್ಚುತ್ತಿದೆ ಎಂಬ ಅಂಶಕ್ಕೆ ಸಂಬಂಧಿಸಿದಂತೆ ಇದು ನಿಜವಾಗಿಯೂ ಬಹಳ ನಾಟಕೀಯ ಕ್ಷಣವಾಗಿದೆ ಎಂದು ಕ್ರೆಮ್ಲಿನ್ ವಕ್ತಾರ ಡಿಮಿಟ್ರಿ ಪೆಸ್ಕೋವ್ ರಷ್ಯಾದ ಟಿವಿ ವರದಿಗಾರ ಪಾವೆಲ್ ಜರುಬಿನ್‌ಗೆ ಭಾನುವಾರ ಹೇಳಿದ್ದಾರೆ.
ರಷ್ಯಾ ಕೂಡಾ ಸಜ್ಜು: ರಷ್ಯಾದ ಮೇಲೆ ಟೊಮಾಹಾಕ್ಸ್ ಕ್ಷಿಪಣಿ ಉಡಾಯಿಸಿದರೆ ರಷ್ಯಾ ಕೂಡಾ ಅವುಗಳಿಗೆ ಸಮಾನವಾಗಿ ಪರಮಾಣು ಸಿಡಿತಲೆಗಳನ್ನು ಹೊತ್ತೊಯ್ಯಬಲ್ಲ ಕ್ಷಿಪಣಿ ದಾಳಿಯನ್ನು ಪರಿಗಣಿಸಬೇಕಾಗುತ್ತದೆ ಎಂದು ಅವರು ಎಚ್ಚರಿಕೆ ನೀಡಿದರು.
ಅಮೆರಿಕ ಮಿಲಿಟರಿ ನೆರವಿಲ್ಲದೆ ಟೊಮಾಹಾಕ್ಸ್ ಬಳಕೆ ಅಸಾಧ್ಯ: ಯುಎಸ್ ಮಿಲಿಟರಿ ಸಿಬ್ಬಂದಿಯ ನೇರ ಭಾಗವಹಿಸುವಿಕೆ ಇಲ್ಲದೆ ಉಕ್ರೇನ್ ಟೊಮಾಹಾಕ್ಸ್ ನ್ನು ಬಳಸುವುದು ಅಸಾಧ್ಯವೆಂದು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಈ ತಿಂಗಳ ಆರಂಭದಲ್ಲಿ ಹೇಳಿದ್ದರು. ಆದ್ದರಿಂದ ಉಕ್ರೇನ್‌ಗೆ ಅಂತಹ ಕ್ಷಿಪಣಿಗಳ ಪೂರೈಕೆಯು ಯುದ್ಧ ಮತ್ತೊಂದು ರೂಪ ಪಡೆಯುವ ಸಾಧ್ಯತೆಯಿದೆ.
Advertisement