
ಕಂದಹಾರ್: ಭಾರತದ ನೆರೆಹೊರೆಯ ರಾಷ್ಟ್ರಗಳಾದ ಪಾಕಿಸ್ತಾನ ಹಾಗೂ ಅಪ್ಘಾನಿಸ್ತಾನ ನಡುವಣ ಯುದ್ಧ ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿದೆ. ಕಂದಹಾರ್ ಪ್ರಾಂತ್ಯದ ಸ್ಪಿನ್ ಬೋಲ್ಡಾಕ್ ಜಿಲ್ಲೆಯಲ್ಲಿ ಪಾಕಿಸ್ತಾನಿ ಪಡೆಗಳು ನಡೆಸಿದ ದಾಳಿಯಲ್ಲಿ 12 ನಾಗರಿಕರು ಸಾವನ್ನಪ್ಪಿದ್ದಾರೆ ಮತ್ತು 100 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಅಫ್ಘಾನ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಈ ಘಟನೆಯು ಗಡಿಯಾಚೆಗಿನ ಯುದ್ಧವನ್ನು ಪ್ರಚೋದಿಸಿದ್ದು, ಅಫ್ಘಾನ್ ಪಡೆಗಳು ಪ್ರತೀಕಾರದ ದಾಳಿಗಳನ್ನು ಆರಂಭಿಸಿದ್ದು, ಅನೇಕ ಪಾಕಿಸ್ತಾನಿ ಮಿಲಿಟರಿ ಕಟ್ಟಡಗಳನ್ನು ವಶಕ್ಕೆ ಪಡೆದಿರುವುದಾಗಿ ಹೇಳಿಕೊಂಡಿದೆ.
ನಾಗರಿಕ ಪ್ರದೇಶಗಳನ್ನು ಗುರಿಯಾಗಿಸಿಕೊಂಡು ಪಾಕ್ ಪಡೆಗಳು ಲಘು ಮತ್ತು ಭಾರೀ ಶಸ್ತ್ರಾಸ್ತ್ರಗಳನ್ನು ಬಳಸಿ ಗುಂಡಿನ ದಾಳಿ ನಡೆಸುತ್ತಿವೆ ಎಂದು ಅಫ್ಘಾನಿಸ್ತಾನದ ವಿದೇಶಾಂಗ ಸಚಿವಾಲಯದ ಅಧಿಕೃತ ವಕ್ತಾರ ಜಬಿಹುಲ್ಲಾ ಮುಜಾಹಿದ್ ಆರೋಪಿಸಿದ್ದಾರೆ.
ದುರದೃಷ್ಟವಶಾತ್ ಇಂದು ಬೆಳಿಗ್ಗೆ, ಕಂದಹಾರ್‌ನ ಸ್ಪಿನ್ ಬೋಲ್ಡಾಕ್ ಜಿಲ್ಲೆಯಲ್ಲಿ ಅಫ್ಘಾನಿಸ್ತಾನದ ಮೇಲೆ ಪಾಕಿಸ್ತಾನಿ ಪಡೆಗಳು ಮತ್ತೊಮ್ಮೆ ಲಘು ಮತ್ತು ಭಾರೀ ಶಸ್ತ್ರಾಸ್ತ್ರಗಳೊಂದಿಗೆ ದಾಳಿ ನಡೆಸಿವೆ. ಇದರ ಪರಿಣಾಮವಾಗಿ 12 ಕ್ಕೂ ಹೆಚ್ಚು ನಾಗರಿಕರು ಸಾವನ್ನಪ್ಪಿದ್ದು, 100 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಮುಜಾಹಿದ್ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಪ್ರತೀಕಾರದ ಕಾರ್ಯಾಚರಣೆಯಲ್ಲಿ ಅನೇಕ ಪಾಕಿಸ್ತಾನಿ ಸೈನಿಕರು ಹತ್ಯೆಯಾಗಿದ್ದು, ಅವರ ಪೋಸ್ಟ್‌ಗಳು ಮತ್ತು ಕೇಂದ್ರಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಅಫ್ಘಾನ್ ತಾಲಿಬಾನ್ ಮತ್ತು ಫಿತ್ನಾ ಅಲ್-ಖವಾರಿಜ್ ಕುರ್ರಾಮ್‌ನಲ್ಲಿ ಅಪ್ರಚೋದಿತ ಗುಂಡಿನ ದಾಳಿ ನಡೆಸಿವೆ. ಪಾಕಿಸ್ತಾನಿ ಸೇನೆ ದಿಟ್ಟ ಉತ್ತರ ನೀಡಿರುವುದಾಗಿ PTV ನ್ಯೂಸ್ ವರದಿ ಮಾಡಿದೆ. ಶಂಸದರ್ ಪೋಸ್ಟ್‌ನಲ್ಲಿ ನಾಲ್ಕನೇ ಟ್ಯಾಂಕರ್ ನ್ನು ನಾಶಪಡಿಸಲಾಗಿದೆ. ಪಾಕಿಸ್ತಾನ ಸೇನೆಯ ಈ ಮಹತ್ವದ ಕಾರ್ಯಾಚರಣೆಯಲ್ಲಿ ಫಿತ್ನಾ ಅಲ್-ಖವಾರಿಜ್‌ನ ಪ್ರಮುಖ ಕಮಾಂಡರ್‌ನ ಹತ್ಯೆಯಾಗಿರುವುದಾಗಿ ವರದಿಯಾಗಿದೆ.
Advertisement