
ಇಸ್ಲಾಮಾಬಾದ್: ಪಾಕಿಸ್ತಾನ ಸೇನಾ ಮುಖ್ಯಸ್ಥ ಫೀಲ್ಡ್ ಮಾರ್ಷಲ್ ಸೈಯದ್ ಅಸಿಮ್ ಮುನೀರ್ ಶನಿವಾರ ಅಫ್ಘಾನಿಸ್ತಾನಕ್ಕೆ ವಾರ್ನಿಂಗ್ ನೀಡಿದ್ದಾರೆ. ಶಾಂತಿಯೋ? ಪ್ರಕ್ಷುಬ್ಧತೆಯೋ? ನೀವೇ ಆಯ್ಕೆ ಮಾಡಿಕೊಳ್ಳಿ ಎಂದು ಎಚ್ಚರಿಕೆ ನೀಡಿದ್ದಾರೆ.
ಪಾಕಿಸ್ತಾನದೊಳಗೆ ದಾಳಿ ನಡೆಸಲು ಅಫ್ಘಾನ್ ನೆಲವನ್ನು ಬಳಸುವ ಭಯೋತ್ಪಾದಕರ ವಿರುದ್ಧ ದೃಢ ಮತ್ತು ತಕ್ಷಣದ ಕ್ರಮವನ್ನು ತೆಗೆದುಕೊಳ್ಳುವಂತೆ ಕಾಬೂಲ್ ಕೇಳಿದ ಬೆನ್ನಲ್ಲೇ ಮುನೀರ್ ಈ ಹೇಳಿಕೆ ನೀಡಿದ್ದಾರೆ.
ಇಸ್ಲಾಮಾಬಾದ್ ಮತ್ತು ಕಾಬೂಲ್ ತಮ್ಮ ಎರಡು ದಿನಗಳ ಕದನ ವಿರಾಮವನ್ನು ವಿಸ್ತರಿಸಿದ ಬೆನ್ನಲ್ಲೇ ಪಾಕಿಸ್ತಾನ ಶುಕ್ರವಾರ ತಡರಾತ್ರಿ ಅಫ್ಘಾನಿಸ್ತಾನದಲ್ಲಿನ ಭಯೋತ್ಪಾದಕರ ಅಡಗುತಾಣಗಳನ್ನು ಗುರಿಯಾಗಿಟ್ಟುಕೊಂಡು ಹೊಸದಾಗಿ ವೈಮಾನಿಕ ದಾಳಿ ನಡೆಸುತ್ತಿರುವಂತೆಯೇ ಮುನೀರ್ ನೀಡಿರುವ ಹೇಳಿಕೆ ಉಭಯ ದೇಶಗಳ ನಡುವಿನ ಹಗೆತನಕ್ಕೆ ತಾತ್ಕಾಲಿಕ ವಿರಾಮ ನೀಡಿದೆ.
ಖೈಬರ್ ಪಖ್ತುಂಖ್ವಾ ಪ್ರಾಂತ್ಯದ ಅಬೋಟಾಬಾದ್‌ನಲ್ಲಿರುವ ಪಾಕಿಸ್ತಾನ್ ಮಿಲಿಟರಿ ಅಕಾಡೆಮಿಯ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಮುನೀರ್, ಶಾಂತಿ ಅಥವಾ ಪ್ರಕ್ಷುಬ್ಧತೆ ಇವೆರಡರಲ್ಲಿ ಒಂದನ್ನು ಅಪ್ಘಾನಿಸ್ತಾನ ಆಯ್ಕೆ ಮಾಡಿಕೊಳ್ಳುವಂತೆ ಹೇಳಿದರು.
ಪಾಕಿಸ್ತಾನದಲ್ಲಿ ಉಗ್ರರ ಚಟುವಟಿಕೆಗಳಿಗಾಗಿ ಅಪ್ಘಾನಿಸ್ತಾನದ ನೆಲವನ್ನು ಬಳಸುವ ಉಗ್ರರ ವಿರುದ್ಧ ತಾಲಿಬಾನ್ ಆಡಳಿತ ಕಠಿಣ ಕ್ರಮ ಕೈಗೊಳ್ಳಬೇಕು. ಅಫ್ಘಾನ್ ಮಣ್ಣನ್ನು ಬಳಸುವ ಎಲ್ಲಾ ವಿರೋಧಿಗಳಿಗೆ ಎದಿರೇಟು ನೀಡಲಾಗುವುದು ಎಂದು ಎಚ್ಚರಿಕೆ ನೀಡಿದರು.
Advertisement