
ಮಾಸ್ಕೋ: ಕಳೆದ ವಾರ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗೆ ದೂರವಾಣಿ ಕರೆ ಮಾಡಿದ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್, ಯುದ್ಧವನ್ನು ಕೊನೆಗೊಳಿಸುವ ಬಗ್ಗೆ ಮಾತನಾಡಿದ್ದಾರೆ.
ಆದರೆ ಇದಕ್ಕಾಗಿ ಪುತಿನ್ ಷರತ್ತೊಂದನ್ನು ವಿಧಿಸಿದ್ದಾರೆ. ಈಗ ಜಾಗತಿಕ ಮಟ್ಟದಲ್ಲಿ ಆ ಷರತ್ತಿನ ಬಗ್ಗೆ ಚರ್ಚೆ ನಡೆಯುತ್ತಿದೆ. ಕಾರ್ಯತಂತ್ರ ವ್ಯೂಹದ ದೃಷ್ಟಿಯಿಂದಾಗಿ ಪ್ರಾಮುಖ್ಯತೆ ಪಡೆದಿರುವ ಉಕ್ರೇನ್‌ನ ಪೂರ್ವ ಭಾಗದಲ್ಲಿರುವ ಪ್ರದೇಶವಾದ ಡೊನೆಟ್ಸ್ಕ್‌ನ (Donetsk) ಸಂಪೂರ್ಣ ನಿಯಂತ್ರಣವನ್ನು ಯುಕ್ರೇನ್ ರಷ್ಯಾಗೆ ಒಪ್ಪಿಸಬೇಕೆಂಬುದು ವ್ಲಾದಿಮಿರ್ ಪುತಿನ್ ಒತ್ತಾಯಿಸಿದ್ದಾರೆ ಎಂದು ಟ್ರಂಪ್- ಪುತಿನ್ ನಡುವಿನ ಸಂಭಾಷಣೆಯ ಬಗ್ಗೆ ಮಾಹಿತಿ ಇರುವ ಇಬ್ಬರು ಹಿರಿಯ ಅಧಿಕಾರಿಗಳ ಹೇಳಿಕೆಗಳನ್ನು ಉಲ್ಲೇಖಿಸಿ ವಾಷಿಂಗ್ಟನ್ ಪೋಸ್ಟ್ ವರದಿ ಮಾಡಿದೆ.
ಪುಟಿನ್ 11 ವರ್ಷಗಳಿಂದ ಈ ಪ್ರದೇಶವನ್ನು ವಶಪಡಿಸಿಕೊಳ್ಳಲು ಪ್ರಯತ್ನಿಸಿ ವಿಫಲರಾಗಿದ್ದಾರೆ, ರಷ್ಯಾ ಸೇನೆಯನ್ನು ಉಕ್ರೇನಿಯನ್ ಪಡೆಗಳಿಂದ ಪದೇ ಪದೇ ಹಿಮ್ಮೆಟ್ಟಿಸಿದೆ. ಈ ಪ್ರದೇಶದಲ್ಲಿ ಆಳವಾಗಿ ಬೇರೂರಿರುವ ಉಕ್ರೇನಿಯನ್ ಪಡೆಗಳು ತಮ್ಮ ರಾಜಧಾನಿಯ ಕಡೆಗೆ ಪಶ್ಚಿಮಕ್ಕೆ ವೇಗವಾಗಿ ಮುಂದುವರಿಯುವ ರಷ್ಯಾದ ಮುನ್ನಡೆಯ ವಿರುದ್ಧ ಪ್ರಮುಖ ಭದ್ರಕೋಟೆ ಎಂದು ನಂಬುತ್ತಾರೆ.
ಒಪ್ಪಂದವನ್ನು ಸಾಧಿಸುವ ಬಗ್ಗೆ ಟ್ರಂಪ್ ಅವರ ಆಶಾವಾದದ ಹೊರತಾಗಿಯೂ, ಸಂಘರ್ಷವನ್ನು ಕೊನೆಗೊಳಿಸಲು ವಿಧಿಸಿದ್ದ ಬೇಡಿಕೆಗಳಿಂದ ಪುಟಿನ್ ಹಿಂದೆ ಸರಿಯುತ್ತಿಲ್ಲ. ಡೊನೆಟ್ಸ್ಕ್ ಮೇಲೆ ಪುಟಿನ್ ಕಣ್ಣಿಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರಷ್ಯಾ ಅಥವಾ ರಷ್ಯಾ ಬೆಂಬಲಿತ ಪ್ರತ್ಯೇಕತಾವಾದಿಗಳು 2014 ರಿಂದ ಈ ಪ್ರದೇಶದ ಕೆಲವು ಭಾಗಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಆದರೆ ಅವರು ಎಂದಿಗೂ ಬಲವಂತವಾಗಿ ಈ ಪ್ರದೇಶದ ಸಂಪೂರ್ಣ ಪ್ರದೇಶವನ್ನು ವಶಪಡಿಸಿಕೊಳ್ಳಲು ಸಾಧ್ಯವಾಗಿಲ್ಲ.
ಡೊನೆಟ್ಸ್ಕ್ ಅನ್ನು ಸಂಪೂರ್ಣವಾಗಿ ಸ್ವಾಧೀನಪಡಿಸಿಕೊಳ್ಳುವ ಪುಟಿನ್ ಅವರ ಬೇಡಿಕೆಯ ಬಗ್ಗೆ ಟ್ರಂಪ್ ಸಾರ್ವಜನಿಕವಾಗಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಉಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರೊಂದಿಗಿನ ವೆಸ್ಟ್ ವಿಂಗ್ ಸಭೆಯ ನಂತರ ಶುಕ್ರವಾರ ತಮ್ಮ ಸಾರ್ವಜನಿಕ ಹೇಳಿಕೆಯಲ್ಲಿ ಟ್ರಂಪ್ ರಷ್ಯಾದ ವಿನಂತಿಯನ್ನು ಅನುಮೋದಿಸಲಿಲ್ಲ. ವಾಷಿಂಗ್ಟನ್ ಪೋಸ್ಟ್ ಪ್ರಕಾರ, ಯುದ್ಧವನ್ನು ಹೇಗೆ ಕೊನೆಗೊಳಿಸುವುದು ಎಂಬುದರ ಕುರಿತು ಚರ್ಚೆಗಳನ್ನು ಮುಂದುವರಿಸಲು ಟ್ರಂಪ್ ಮುಂಬರುವ ವಾರಗಳಲ್ಲಿ ಹಂಗೇರಿಯಲ್ಲಿ ಪುಟಿನ್ ಅವರನ್ನು ಭೇಟಿ ಮಾಡಲು ಯೋಜಿಸಿದ್ದಾರೆ.
Advertisement