

ಇಸ್ಲಾಮಾಬಾದ್: ಟರ್ಕಿ ರಾಜಧಾನಿ ಇಸ್ತಾಂಬುಲ್‌ನಲ್ಲಿ ನಡೆಯುತ್ತಿರುವ ಶಾಂತಿ ಮಾತುಕತೆಗಳು ವಿಫಲವಾದರೆ ಅಪ್ಘಾನಿಸ್ತಾನದೊಂದಿಗೆ ಓಪನ್ ವಾರ್ ಮಾಡಲು ಸಿದ್ಧರಾಗಿದ್ದೇವೆ" ಎಂದು ಪಾಕಿಸ್ತಾನದ ರಕ್ಷಣಾ ಸಚಿವ ಖವಾಜಾ ಆಸಿಫ್ ಎಚ್ಚರಿಕೆ ನೀಡಿದ್ದಾರೆ.
ವಾರಗಟ್ಟಲೇ ನಡೆದ ಮಾರಣಾಂತಿಕ ಘರ್ಷಣೆ ಮತ್ತು ಕದನ ವಿರಾಮ ಉಲ್ಲಂಘನೆ ನಂತರ ಅಫ್ಘಾನ್-ಪಾಕ್ ಗಡಿಯಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆ ಮತ್ತು ವಿವಾದ ಪರಿಹರಿಸಲು ಸಭೆ ನಡೆಯುತ್ತಿರುವಂತೆಯೇ ಪಾಕಿಸ್ತಾನಯಿಂದ ಈ ರೀತಿಯ ಹೇಳಿಕೆ ಹೊರಬಿದ್ದಿದೆ.
ವರದಿಗಾರರೊಂದಿಗೆ ಮಾತನಾಡಿದ ಖವಾಜಾ ಆಸಿಫ್, ಇತ್ತೀಚಿನ ದಿನಗಳಲ್ಲಿ ಯಾವುದೇ ಘಟನೆ ಅಥವಾ ಘರ್ಷಣೆ ಸಂಭವಿಸದಿದ್ದರೂ, ದೋಹಾ ಒಪ್ಪಂದವು ಸ್ವಲ್ಪಮಟ್ಟಿಗೆ ಪರಿಣಾಮಕಾರಿಯಾಗಿದೆ ಎಂದು ಸೂಚಿಸುತ್ತದೆ ಎಂದು ಖವಾಜಾ ಹೇಳಿದ್ದಾರೆ. ಆದರೆ, ಪಾಕಿಸ್ತಾನದ ರಕ್ಷಣಾ ಸಚಿವರ ಈ ಹೇಳಿಕೆಗಳಿಗೆ ಅಫ್ಘಾನಿಸ್ತಾನ ಸರ್ಕಾರದ ಅಧಿಕಾರಿಗಳು ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎಂದು ಟೋಲೋ ನ್ಯೂಸ್ ಹೇಳಿದೆ.
ಎರಡನೇ ಸುತ್ತಿನ ಚರ್ಚೆಗಾಗಿ ಎರಡೂ ದೇಶಗಳ ನಿಯೋಗಗಳು ಟರ್ಕಿಯಲ್ಲಿವೆ. ದೋಹಾ ಒಪ್ಪಂದವನ್ನು ಅನುಷ್ಠಾನಗೊಳಿಸುವುದು, ಗಡಿಯಾಚೆಗಿನ ದಾಳಿಗಳನ್ನು ನಿಲ್ಲಿಸುವುದು ಮತ್ತು ವಿಶ್ವಾಸವನ್ನು ಪುನರ್ ವೃದ್ದಿಸುವ ಬಗ್ಗೆ ಮಾತುಕತೆಗಳು ನಡೆಯುತ್ತಿವೆ. ಮಾತುಕತೆಯು ನಾಲ್ಕು ಪ್ರಮುಖ ಅಂಶಗಳನ್ನು ಒಳಗೊಂಡಿದೆ. ಭವಿಷ್ಯದ ಹಿಂಸಾಚಾರವನ್ನು ತಡೆಗಟ್ಟಲು ಜಂಟಿ ಮೇಲ್ವಿಚಾರಣಾ ವ್ಯವಸ್ಥೆ ರಚಿಸುವುದು, ಪರಸ್ಪರರ ಸಾರ್ವಭೌಮತ್ವವನ್ನು ಖಾತ್ರಿಪಡಿಸುವುದು, ಕಳೆದ ಎರಡು ದಶಕಗಳಿಂದ ಪಾಕಿಸ್ತಾನದ ಭದ್ರತಾ ಸಮಸ್ಯೆಗಳ ಮೂಲಗಳನ್ನು ಪರಿಹರಿಸುವುದು ಮತ್ತು ವ್ಯಾಪಾರ ನಿರ್ಬಂಧಗಳನ್ನು ತೆಗೆದುಹಾಕುವುದಾಗಿದೆ.
ಅಫ್ಘಾನ್ ನಿರಾಶ್ರಿತರನ್ನು ಬಲವಂತದ ಗಡೀಪಾರು ಮಾಡುವುದನ್ನು ನಿಲ್ಲಿಸುವುದು ಮತ್ತು ನಿರಾಶ್ರಿತರ ಸಮಸ್ಯೆಯನ್ನು ರಾಜಕೀಯದಿಂದ ದೂರವಿಡುವ ಬಗ್ಗೆಯೂ ಚರ್ಚೆ ನಡೆಯುತ್ತಿದೆ. ಈ ಹಿಂದೆ ದೋಹಾ ಮಾತುಕತೆಗಾಗಿ ಪಾಕಿಸ್ತಾನದ ನೇತೃತ್ವ ವಹಿಸಿದ್ದ ಆಸಿಫ್, ಇತ್ತೀಚೆಗೆ ಗಡಿಯಲ್ಲಿ ಪರಿಸ್ಥಿತಿ ಶಾಂತವಾಗಿತ್ತು ಆದರೆ ರಾಜತಾಂತ್ರಿಕತೆ ವಿಫಲವಾದರೆ ಅದು ಶೀಘ್ರವಾಗಿ ಬದಲಾಗಬಹುದು ಎಂದು ಎಚ್ಚರಿಸಿದ್ದಾರೆ.
ಅಕ್ಟೋಬರ್ 18 ಮತ್ತು ಅಕ್ಟೋಬರ್ 19 ರಂದು ದೋಹಾದಲ್ಲಿ ಕತಾರ್ ಮತ್ತು ಟರ್ಕಿಯ ಮಧ್ಯಸ್ಥಿಕೆಯಲ್ಲಿ ಮೊದಲ ಸುತ್ತಿನ ಮಾತುಕತೆ ನಡೆದಿತ್ತು. ಆಗ ತೀವ್ರವಾದ ಗಡಿ ಘರ್ಷಣೆಗಳ ನಂತರ ಉಭಯ ರಾಷ್ಟ್ರಗಳು 'ತಕ್ಷಣದ ಕದನ ವಿರಾಮ'ಕ್ಕೆ ಒಪ್ಪಿಕೊಂಡಿದ್ದವು. ಈಗ ಮತ್ತೊಂದು ಸುತ್ತಿನ ಮಾತುಕತೆಗಳು ನಡೆಯುತ್ತಿದ್ದು, ಶಾಂತಿ ಮಾತುಕತೆಗಳು ವಿಫಲವಾದರೆ ಅಪ್ಘಾನಿಸ್ತಾನದೊಂದಿಗೆ ಓಪನ್ ವಾರ್ ಮಾಡಲು ಸಿದ್ಧರಾಗಿದ್ದೇವೆ ಎಂದು ಪಾಕಿಸ್ತಾನ ನೇರವಾಗಿ ಎಚ್ಚರಿಕೆ ನೀಡಿದೆ.
Advertisement