
ಕಾಬೂಲ್: ಸೋಮವಾರ ಬೆಳಗಿನ ಜಾವ ಪೂರ್ವ ಅಫ್ಘಾನಿಸ್ತಾನದಲ್ಲಿ ಸಂಭವಿಸಿದ ಪ್ರಬಲ ಭೂಕಂಪದಲ್ಲಿ ಕನಿಷ್ 610 ಜನರು ಸಾವನ್ನಪ್ಪಿದ್ದಾರೆ. ಹಾಗೂ 1300 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ದೃಢಪಡಿಸಿದ್ದಾರೆ.
ರಿಕ್ಟರ್ ಮಾಪಕದಲ್ಲಿ 6.0 ರಷ್ಟು ತೀವ್ರತೆಯ ಕಂಪನವು ಬೆಳಗಿನ ಜಾವ 12:27 ಕ್ಕೆ ದಾಖಲಾಗಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ ತಿಳಿಸಿದೆ. ಭೂಕಂಪದಿಂದಾಗಿ ಮನೆಯ ಛಾವಣಿ ಕುಸಿದು ಜನ ಸಾವನ್ನಪ್ಪಿದ್ದಾರೆ ಎಂದು ಪ್ರಾಂತೀಯ ಅಧಿಕಾರಿಗಳು ತಿಳಿಸಿದ್ದಾರೆ. ಪ್ರಾಥಮಿಕ ಅಂದಾಜಿನ ಪ್ರಕಾರ ಹಲವಾರು ಮಕ್ಕಳು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
ಪೂರ್ವ ಅಫ್ಘಾನಿಸ್ತಾನದಾದ್ಯಂತ ಕೆಲವು ಸೆಕೆಂಡುಗಳ ಕಾಲ ಕಟ್ಟಡಗಳು ಕಂಪಿಸಿದವು, ಪಾಕಿಸ್ತಾನದ ರಾಜಧಾನಿ ಇಸ್ಲಾಮಾಬಾದ್‌ನಲ್ಲಿ ಸುಮಾರು 370 ಕಿ.ಮೀ ದೂರದಲ್ಲಿ ಕಂಪನದ ಅನುಭವವಾಯಿತು ಎಂದು ತಿಳಿಸಿದ್ದಾರೆ.
ಯುರೇಷಿಯನ್ ಮತ್ತು ಭಾರತೀಯ ಟೆಕ್ಟೋನಿಕ್ ಪ್ಲೇಟ್‌ಗಳ ಜಂಕ್ಷನ್ ಬಳಿ, ವಿಶೇಷವಾಗಿ ಹಿಂದೂ ಕುಶ್ ಪ್ರದೇಶದಲ್ಲಿ ಅಫ್ಘಾನಿಸ್ತಾನ ಇರುವುದರಿಂದ ಈ ಪ್ರದೇಶಗಳಲ್ಲಿ ಹೆಚ್ಚು ಭೂಕಂಪ ಸಂಭವಿಸುತ್ತದೆ. ನಂಗರ್‌ಹಾರ್ ಪ್ರಾಂತ್ಯದಲ್ಲಿ ಶುಕ್ರವಾರ ರಾತ್ರಿಯಿಂದ ಶನಿವಾರದವರೆಗೆ ಭಾರೀ ಪ್ರವಾಹ ಉಂಟಾಗಿ ಐದು ಜನರು ಸಾವನ್ನಪ್ಪಿ, ಬೆಳೆಗಳು ಮತ್ತು ಆಸ್ತಿಪಾಸ್ತಿಗಳು ನಾಶವಾದ ಕೆಲವೇ ದಿನಗಳ ನಂತರ ಈ ಭೂಕಂಪ ಸಂಭವಿಸಿದೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ.
ದೆಹಲಿ-ಎನ್ಸಿಆರ್ ಸೇರಿದಂತೆ ಪಾಕಿಸ್ತಾನ ಮತ್ತು ಉತ್ತರ ಭಾರತದಾದ್ಯಂತ ಭೂಕಂಪನದ ಅನುಭವವಾಗಿದೆ. ಕಟ್ಟಡಗಳು ನಡುಗಿದ್ದು, ಜನರು ಹೊರಗೆ ಓಡಿ ಬಂದಿದ್ದಾರೆ. ಭಾರತದಲ್ಲಿ ಯಾವುದೇ ಹಾನಿ ಸಂಭವಿಸಿಲ್ಲ. ಭೂಕಂಪದ ನಂತರದ ಚಿತ್ರಗಳು ಸಹ ಹೊರಬಂದಿವೆ, ಅದರಲ್ಲಿ ಭೂಕಂಪದಿಂದಾಗಿ ಅಫ್ಘಾನಿಸ್ತಾನದಲ್ಲಿ ಹೆಚ್ಚಿನ ಸಂಖ್ಯೆಯ ಮನೆಗಳು ನಾಶವಾಗಿವೆ ಎಂಬುದು ಸ್ಪಷ್ಟವಾಗಿ ಗೋಚರಿಸುತ್ತದೆ.
Advertisement