
ರಾವಲ್ಪಿಂಡಿ: 'ಆಪರೇಷನ್ ಸಿಂಧೂರ' ಕಾರ್ಯಾಚರಣೆ ವೇಳೆಯಲ್ಲಿ ಭಾರತ ಧ್ವಂಸಗೊಳಿಸಿದ್ದ ಪಾಕಿಸ್ತಾನದ ನೂರ್ ಖಾನ್ ವಾಯುನೆಲೆ ಪುನರ್ ನಿರ್ಮಾಣ ಕಾರ್ಯ ಆರಂಭವಾಗಿದೆ.
ಈ ವಾಯುನೆಲೆಯ ಸ್ಯಾಟಲೈಟ್ ಆಧಾರಿತ ಫೋಟೋಗಳನ್ನು ಅಮೆರಿಕ ಮೂಲದ ಮ್ಯಾಕ್ಸರ್ ಟೆಕ್ನಾಲಜಿಸ್ ಬುಧವಾರ ಸೆರೆ ಹಿಡಿದಿದ್ದು, ಹೊಸದಾದ ಗೋಡೆಗಳು ಮತ್ತಿತರ ನೆಲ ಅಂತಸ್ತಿನ ಕೆಲಸಗಳನ್ನು ತೋರಿಸಿದೆ. ವಾಯುನೆಲೆಯ ಕಾರ್ಯಾಚರಣೆ ಸಾಮರ್ಥ್ಯವನ್ನು ಮರುಸ್ಥಾಪಿಸುವ ಪಾಕಿಸ್ತಾನ ಪ್ರಯತ್ನವನ್ನು ಪ್ರಮುಖವಾಗಿ ತೋರಿಸಲಾಗಿದೆ.
ಈ ವಾಯುನೆಲೆ ಪಾಕಿಸ್ತಾನದ ಪ್ರಧಾನಿ, ಅಧ್ಯಕ್ಷರು, ಸೇನಾ ಮುಖ್ಯಸ್ಥರು ಮತ್ತು ಕ್ಯಾಬಿನೆಟ್ ಮಂತ್ರಿಗಳು ಸೇರಿದಂತೆ ದೇಶದ ಉನ್ನತ ನಾಯಕರಿಗೆ ಸಾರಿಗೆ ಸೇವೆ ಒದಗಿಸುತ್ತದೆ. ಈ ವಾರದ ಆರಂಭದಲ್ಲಿ ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಮತ್ತು ಫೀಲ್ಡ್ ಮಾರ್ಷಲ್ ಅಸಿಮ್ ಮುನೀರ್ ಅವರನ್ನು ಹೊತ್ತ ಎರಡು ವಿವಿಐಪಿ ಜೆಟ್‌ಗಳು ಇದೇ ವಾಯುನೆಲೆಯಿಂದ ಹೊರಟ್ಟಿದ್ದವು.
ಮೇ 2025 ರಲ್ಲಿ ನಡೆದ ಆಪರೇಷನ್ ಸಿಂಧೂರ್ ಕಾರ್ಯಾಚರಣೆ ವೇಳೆ ಭಾರತಿಂದ ಹೆಚ್ಚು ಹಾನಿಗೊಳಗಾದ ಸ್ಥಳದಲ್ಲಿ ಮರು ನಿರ್ಮಾಣ ಕಾರ್ಯ ನಡೆಯುತ್ತಿರುವುದು ಸ್ಯಾಟಲೈಟ್ ಫೋಟೋಗಳಲ್ಲಿ ಕಂಡುಬಂದಿದೆ.
ಭಾರತ ವೈಮಾನಿಕ ದಾಳಿಗೂ ಮುನ್ನಾದ ಸ್ಯಾಟಲೈಟ್ ಚಿತ್ರಗಳಲ್ಲಿ ವಿಶೇಷ ಮಿಲಿಟರಿ ಟ್ರಕ್ ಗಳು ದಾಳಿಯಾದ ಸ್ಥಳಗಳಲ್ಲಿ ಇರುವುದು ಕಂಡುಬರುತ್ತದೆ. ಇದು ಭಾರತದ ಕಾರ್ಯಾಚರಣೆ ವೇಳೆ ಧ್ವಂಸಗೊಂಡಿತ್ತು. ಅಲ್ಲದೇ ವಾಯುನೆಲೆ ಕಟ್ಟಡ ಬಳಿಯೂ ಹಾನಿಯಾಗಿತ್ತು. ಇದೀಗ ಹೊಸದಾಗಿ ಗೋಡೆಗಳನ್ನು ಕಟ್ಟುತ್ತಿರುವುದನ್ನು ಸ್ಯಾಟಲೈಟ್ ಚಿತ್ರಗಳು ತೋರಿಸುತ್ತವೆ.
ವಾಯುನೆಲೆಯ ಕಾರ್ಯಾಚರಣೆಯ ಸಾಮರ್ಥ್ಯವನ್ನು ಹೆಚ್ಚಿಸುವ ಪಾಕಿಸ್ತಾನದ ಉದ್ದೇಶ ಗೊತ್ತಾಗುತ್ತಿದೆ ಎಂದು ಇಂಟೆಲ್ ಲ್ಯಾಬ್‌ನ ಜಿಯೋ-ಇಂಟೆಲಿಜೆನ್ಸ್ ಸಂಶೋಧಕರ ಹೇಳಿಕೆ ಉಲ್ಲೇಖಿಸಿ ಇಂಡಿಯಾ ಟುಡೇ ವರದಿ ಮಾಡಿದೆ.
ಪುನರ್ ನಿರ್ಮಾಣ ಮಾಡಲಾಗುತ್ತಿರುವ ಸ್ಥಳದಲ್ಲಿ VVIP jet ಮತ್ತು ಸೇನಾ ಸಾರಿಗೆ ವಿಮಾನವೊಂದು ಪಾರ್ಕಿಂಗ್ ಮಾಡಿರುವುದು ಹೊಸ ಫೋಟೋದಲ್ಲಿ ಕಂಡುಬಂದಿದೆ ಎಂದು ವರದಿಯಲ್ಲಿ ಹೇಳಲಾಗಿದೆ.
Advertisement