
ನ್ಯೂಯಾರ್ಕ್/ವಾಷಿಂಗ್ಟನ್: ಉಕ್ರೇನ್‌ನಲ್ಲಿ ರಷ್ಯಾ ನಡೆಸುತ್ತಿರುವ ಯುದ್ಧಕ್ಕೆ ಸಂಬಂಧಿಸಿದಂತೆ ಸದ್ಯದ ರಾಷ್ಟ್ರೀಯ ತುರ್ತು ಪರಿಸ್ಥಿತಿ ಎದುರಿಸಲು ಮತ್ತು ದೇಶದಲ್ಲಿ ಶಾಂತಿ ಸ್ಥಾಪಿಸಲು ರಷ್ಯಾದಿಂದ ತೈಲವನ್ನು ಖರೀದಿಸುತ್ತಿರುವ ಭಾರತದ ವಿರುದ್ಧ ಸುಂಕಾಸ್ತ್ರ ವಿಧಿಸಲಾಗಿದೆ.
ಶಾಂತಿ ನೆಲೆಸುವಲ್ಲಿ ಇದು ನಿರ್ಣಾಯಕ ಅಂಶವಾಗಿದೆ ಎಂದು ಟ್ರಂಪ್ ಆಡಳಿತ US ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ. ರಷ್ಯಾದಿಂದ ತೈಲ ಖರೀದಿ ಹಿನ್ನೆಲೆಯಲ್ಲಿ ಭಾರತದ ಮೇಲೆ ಹೇರಲಾಗಿರುವ ಒಟ್ಟಾರೇ ಶೇ. 50ರಷ್ಟು ಹೆಚ್ಚುವರಿ ಸುಂಕ ಆಗಸ್ಟ್ 27 ರಿಂದ ಜಾರಿಗೆ ಬಂದಿದೆ.
ಉಕ್ರೇನ್‌ನಲ್ಲಿ ರಷ್ಯಾದ ಯುದ್ಧಕ್ಕೆ ಸಂಬಂಧಿಸಿದಂತೆ ಸದ್ಯ ಇರುವ ರಾಷ್ಟ್ರೀಯ ತುರ್ತು ಪರಿಸ್ಥಿತಿಯನ್ನು ಎದುರಿಸಲು ಮತ್ತು ರಷ್ಯಾದ ತೈಲ ಖರೀದಿ ವಿರೋಧಿಸಿ ಭಾರತದ ವಿರುದ್ಧ IEEPA (ಅಂತರರಾಷ್ಟ್ರೀಯ ತುರ್ತು ಆರ್ಥಿಕ ಅಧಿಕಾರ ಕಾಯ್ದೆ) ಅಡಿಯಲ್ಲಿ ಸುಂಕಗಳನ್ನು ಅಧ್ಯಕ್ಷರು ಇತ್ತೀಚೆಗೆ ಅಧಿಕೃತಗೊಳಿಸಿದ್ದಾರೆ ಎಂದು ಟ್ರಂಪ್ ಆಡಳಿತ ಸುಪ್ರೀಂ ಕೋರ್ಟ್‌ಗೆ ಬುಧವಾರ ಸಲ್ಲಿಸಿದ 251 ಪುಟಗಳ ಮೇಲ್ಮನವಿಯಲ್ಲಿ ತಿಳಿಸಿದೆ.
ಹೆಚ್ಚುವರಿ ಸುಂಕಗಳು ಶಾಂತಿ ಮತ್ತು ಅಭೂತಪೂರ್ವ ಆರ್ಥಿಕ ಪ್ರಗತಿಯನ್ನು ಪ್ರೋತ್ಸಾಹಿಸುತ್ತವೆ ಎಂದು ಅಧ್ಯಕ್ಷರು ಮತ್ತು ಅವರ ಕ್ಯಾಬಿನೆಟ್ ಅಧಿಕಾರಿಗಳು ನಿರ್ಧರಿಸಿದ್ದಾರೆ. ಸುಂಕ ಹಾಕದಿದ್ದಲ್ಲಿ ಪರಿಣಾಮಕಾರಿ ರಕ್ಷಣೆಯಿಲ್ಲದೆ ನಮ್ಮ ರಾಷ್ಟ್ರದ ವ್ಯಾಪಾರಕ್ಕೆ ಹಾನಿಯಾಗುತ್ತದೆ. ಆರ್ಥಿಕ ದುರಂತದ ಅಂಚಿಗೆ ಅಮೆರಿಕವನ್ನು ತಳ್ಳುತ್ತದೆ ಎಂದು ಮೇಲ್ಮನವಿಯಲ್ಲಿ ಹೇಳಲಾಗಿದೆ.
IEEPA ಸುಂಕಗಳ ಕಾರಣದಿಂದಾಗಿ, ಆರು ಪ್ರಮುಖ ವ್ಯಾಪಾರ ಪಾಲುದಾರ ಮತ್ತು ಯುರೋಪಿಯನ್ ಒಕ್ಕೂಟದ 27 ರಾಷ್ಟ್ರಗಳು ಈಗಾಗಲೇ ಅಮೆರಿಕದೊಂದಿಗೆ ಚೌಕಟ್ಟಿನ ಒಪ್ಪಂದಗಳನ್ನು ಮಾಡಿಕೊಂಡಿವೆ. ಅಮೆರಿಕ ಹೆಚ್ಚು ಮಾಡಿದ ಸುಂಕದ ವ್ಯವಸ್ಥೆಗಳನ್ನು ಸ್ವೀಕರಿಸಿವೆ ಮತ್ತು US ಆರ್ಥಿಕತೆಯಲ್ಲಿ ಸುಮಾರು 2 ಟ್ರಿಲಿಯನ್ ಡಾಲರ್ ನಷ್ಟು ಖರೀದಿ ಮತ್ತು ಹೂಡಿಕೆ ಮಾಡಲು ಒಪ್ಪಿವೆ ಎಂದು ಅದರಲ್ಲಿ ತಿಳಿಸಲಾಗಿದೆ.
ವಿಶ್ವದಾದ್ಯಂತದ ದೇಶಗಳ ಮೇಲೆ ಟ್ರಂಪ್ ವಿಧಿಸಿರುವ ವ್ಯಾಪಕವಾದ ಸುಂಕಗಳು ಕಾನೂನುಬಾಹಿರ ಎಂದು ಕಳೆದ ವಾರ ವಾಷಿಂಗ್ಟನ್ ನಲ್ಲಿರುವ ಅಮೆರಿಕದ ನ್ಯಾಯಾಲಯವೊಂದನ್ನು ಹೇಳಿತ್ತು. ಆದರೆ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಅರ್ಜಿ ಸಲ್ಲಿಸಲು ಅಕ್ಟೋಬರ್ 14 ರವರೆಗೆ ಟ್ರಂಪ್ ಆಡಳಿತಕ್ಕೆ ಅವಕಾಶ ನೀಡಿತ್ತು. ಬುಧವಾರ ಈ ಕೆಲಸವನ್ನು ಟ್ರಂಪ್ ಮಾಡಿದ್ದು, ಸುಪ್ರೀಂಕೋರ್ಟ್ ಗೆ ಮೇಲ್ಮನವಿ ಅರ್ಜಿ ಸಲ್ಲಿಸಿದೆ.
ಬೆಸೆಂಟ್ ಮತ್ತು ವ್ಯಾಪಾರ ಸಲಹೆಗಾರ ಪೀಟರ್ ನವರೊ ಸೇರಿದಂತೆ ಟ್ರಂಪ್ ಆಡಳಿತದ ಹಲವಾರು ಉನ್ನತ ಅಧಿಕಾರಿಗಳು, ರಷ್ಯಾದ ತೈಲ ಖರೀದಿ ಮೂಲಕ ಭಾರತ ಉಕ್ರೇನ್‌ನಲ್ಲಿ ರಷ್ಯಾದ ಯುದ್ಧದ ಪ್ರಯತ್ನಕ್ಕೆ ಹಣಕಾಸು ಒದಗಿಸುತ್ತಿವೆ ಎಂದು ಹೇಳಿದ್ದಾರೆ.
Advertisement