
ಮಾಸ್ಕೋ: ರಷ್ಯಾ-ಉಕ್ರೇನ್ ಯುದ್ಧದ ನಡುವೆ ಮಾಸ್ಕೋದಲ್ಲಿ ಮಾತುಕತೆಗಾಗಿ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರಿಗೆ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಆಹ್ವಾನ ನೀಡಿದ್ದಾರೆ. ಆದರೆ ಇದನ್ನು ತಿರಸ್ಕರಿಸಿರುವ ಝೆಲೆನ್ಸ್ಕಿ ಉಕ್ರೇನ್ ಮೇಲೆ ಪ್ರತಿದಿನ ಕ್ಷಿಪಣಿ ದಾಳಿಯನ್ನು ಮುಂದುವರೆಸಿರುವ ದೇಶದ ರಾಜಧಾನಿಗೆ ಭೇಟಿ ನೀಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಶುಕ್ರವಾರ ಎಬಿಸಿ ನ್ಯೂಸ್‌ನ ಜಾಗತಿಕ ವ್ಯವಹಾರಗಳ ವರದಿಗಾರ ಮಾರ್ಥಾ ರಾಡಾಟ್ಜ್ ಅವರೊಂದಿಗಿನ ಸಂದರ್ಶನ ವೇಳೆ ಮಾತನಾಡಿದ ಝೆಲೆನ್ಸ್ಕಿ, ಪ್ರಾಮಾಣಿಕವಾಗಿ ಚರ್ಚೆ ನಡೆಸಲು ಬಯಸಿದ್ದರೆ ರಷ್ಯಾ ಅಧ್ಯಕ್ಷರು ಉಕ್ರೇನ್ ರಾಜಧಾನಿ ಕೈವ್‌ಗೆ ಬರಬೇಕೆಂದು ಸೂಚಿಸಿದರು.
ಪುಟಿನ್ ಕೈವ್ ಗೆ ಬರಬಹುದು. ಯಾವುದೇ ವ್ಯಕ್ತಿ ಯುದ್ಧದ ಸಮಯದಲ್ಲಿ ಭೇಟಿಯಾಗಲು ಬಯಸದಿದ್ದರೆ, ಆತ ನನಗೆ ಅಥವಾ ಇನ್ನೊಬ್ಬರಿಗೆ ಸ್ವೀಕಾರಾರ್ಹವಾದದ್ದನ್ನು ಪ್ರಸ್ತಾಪಿಸಬಹುದು. ಇದು ಅರ್ಥವಾಗುವಂತಹದ್ದಾಗಿದೆ. ನನ್ನ ದೇಶವು ಪ್ರತಿದಿನ ಕ್ಷಿಪಣಿ ದಾಳಿಯಿಂದ ನಲುಗುತ್ತಿರುವಾಗ ಮಾಸ್ಕೋಗೆ ಹೋಗಲು ಸಾಧ್ಯವಿಲ್ಲ. ನಾನು ಈ ಭಯೋತ್ಪಾದಕನ ರಾಜಧಾನಿಗೆ ಹೋಗಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಕದನ ವಿರಾಮ ಒಪ್ಪಂದ ವಿಳಂಬಗೊಳಿಸಲು ಮಾತುಕತೆ ಆಹ್ವಾನವನ್ನು ಪುಟಿನ್ ರಾಜಕೀಯ ತಂತ್ರವಾಗಿ ಬಳಸುತ್ತಿದ್ದು, ಅಮೆರಿಕ ಜೊತೆಗೆ ಆಟವಾಡುತ್ತಿದ್ದಾರೆ. ಇದನ್ನು ಅವರು ಅರ್ಥಮಾಡಿಕೊಂಡಿದ್ದಾರೆ. ಕದನ ವಿರಾಮ ಒಪ್ಪಂದ ಮಾತುಕತೆ ಮುಂದೂಡಲು ಈ ರೀತಿಯ ನಾಟಕವಾಡುತ್ತಿದ್ದಾರೆ. ಅಮೆರಿಕದೊಂದಿಗೆ ಅವರು ಆಟವಾಡುತ್ತಿದ್ದಾರೆ ಎಂದರು.
ಝೆಲೆನ್ಸ್ಕಿ ಭೇಟಿಯಾಗಲು ರಷ್ಯಾ ಅಧ್ಯಕ್ಷರು ಮುಕ್ತ ಆಹ್ವಾನ ನೀಡಿದ ಬೆನ್ನಲ್ಲೇ ಉಕ್ರೇನ್ ಅಧ್ಯಕ್ಷರು ಈ ರೀತಿಯ ತೀಕ್ಷ್ಣ ಹೇಳಿಕೆ ನೀಡಿದ್ದಾರೆ.
ಮಾಸ್ಕೋದಲ್ಲಿ ಅಂತಹ ಸಭೆ ನಡೆದರೆ ಅದು ಫಲಪ್ರದವಾಗಬಹುದು ಎಂದು ಪುಟಿನ್ ಹೇಳಿದ್ದರು. ಚೀನಾಕ್ಕೆ ನಾಲ್ಕು ದಿನಗಳ ಭೇಟಿ ನೀಡಿದ್ದ ವೇಳೆಯಲ್ಲಿ ಸುದ್ದಿಗೋಷ್ಠಿ ವೇಳೆ ಮಾತನಾಡಿದ್ದ ಪುಟಿನ್, ಇಂತಹ ಸಭೆ ಬಗ್ಗೆ ತಳ್ಳಿ ಹಾಕಿಲ್ಲ. ಒಂದು ವೇಳೆ ಅರ್ಥಪೂರ್ಣವಾಗಿ ಸಭೆ ನಡೆದಲ್ಲಿ ಸಕಾರಾತ್ಮಕ ಫಲಿತಾಂಶ ಸಾಧ್ಯವಿದೆ. ಪುಟಿನ್ ಅವರಿಗೂ ಇದನ್ನೇ ಹೇಳಿದ್ದೇನೆ. ಈ ಎಲ್ಲಾ ವಿದ್ಯಮಾನಗಳ ನಂತರ ಝೆಲೆನ್ಸ್ಕಿ ಸಿದ್ಧವಾಗಿದ್ದರೆ ಮಾಸ್ಕೋಗೆ ಬರಬಹುದು ಎಂದು ಹೇಳಿದ್ದರು.
Advertisement