
ವಾಷಿಂಗ್ಟನ್ ಡಿಸಿ: ಉಕ್ರೇನ್ ಮೇಲೆ ರಷ್ಯಾ ನಡೆಸಿದ ಅತಿದೊಡ್ಡ ವೈಮಾನಿಕ ದಾಳಿಯ ನಂತರ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತೀವ್ರ ಹತಾಶೆ, ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಷ್ಯಾದ ಆರ್ಥಿಕತೆ ಕುಸಿತಕ್ಕೆ ನಿರ್ಬಂಧದಂತಹ ಕಠಿಣ ನಿಲುವು ತೆಗೆದುಕೊಂಡಿದ್ದರೂ ಅದನ್ನು ಲೆಕ್ಕಿಸದೇ ದಾಳಿ ಮಾಡಿರುವುದಕ್ಕೆ ಅಮೆರಿಕ ಅಧ್ಯಕ್ಷರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ಅಲ್ ಜಜೀರಾ ವರದಿ ಮಾಡಿದೆ.
ಉಕ್ರೇನ್ ಮೇಲೆ ರಷ್ಯಾ ತನ್ನ ಅತಿದೊಡ್ಡ ಕ್ಷಿಪಣಿ ಮತ್ತು ಡ್ರೋನ್ ದಾಳಿ ಆರಂಭಿಸಿದ ನಂತರ ಮಾತನಾಡಿದ ಟ್ರಂಪ್, ಇಡೀ ಪರಿಸ್ಥಿತಿಯ" ಬಗ್ಗೆ ಸಂತೋಷವಾಗಿಲ್ಲ ಎಂದು ಹೇಳಿದ್ದಾರೆ.
ಇದೊಂದು ಭಯಾನಕ ಮಾನವೀಯತೆ ಇಲ್ಲದ ಕ್ರಮವಾಗಿದೆ. ಅಲ್ಲಿ ಏನು ನಡೆಯುತ್ತಿದೆ ಎಂಬುದರ ಬಗ್ಗೆ ನಾನು ಚಕಿತಗೊಂಡಿಲ್ಲ. ಇದು ಇತ್ಯರ್ಥವಾಗಲಿದೆ ಎಂದು ನಾನು ಭಾವಿಸುತ್ತೇನೆ ಎಂದು ಮೇರಿಲ್ಯಾಂಡ್‌ನ ಜಂಟಿ ಬೇಸ್ ಆಂಡ್ರ್ಯೂಸ್‌ನಲ್ಲಿ ಟ್ರಂಪ್ ಸುದ್ದಿಗಾರರಿಗೆ ತಿಳಿಸಿದ್ದಾಗಿ ಅಲ್ ಜಜೀರಾ ವರದಿ ಮಾಡಿದೆ.
ಮಾಸ್ಕೋ ವಿರುದ್ಧ ನಿರ್ಬಂಧ ಹೆಚ್ಚಿಸಲು ಸಿದ್ಧರಿರುವುದಾಗಿ ಹೇಳಿಕೆ ಬೆನ್ನಲ್ಲೇ ಟ್ರಂಪ್ ಈ ರೀತಿಯ ಹೇಳಿಕೆ ನೀಡಿದ್ದಾರೆ. ಹೌದು ರಷ್ಯಾ ವಿರುದ್ಧದ ಎರಡನೇ ಹಂತದ ನಿರ್ಬಂಧ ವಿಧಿಸಲು ಸಿದ್ದರಿದ್ದೀರಾ ಎಂದು ಶ್ವೇತಭವನದಲ್ಲಿ ಭಾನುವಾರ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಟ್ರಂಪ್, ಹೌದು, ಸಿದ್ದನಿದ್ದೇನೆ ಎಂದು ಹೇಳಿದ್ದರು .ಉಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಸೋಮವಾರ ರಷ್ಯಾದ ವಿರುದ್ಧ ನಿರ್ಬಂಧದ ಅಮೆರಿಕದ ಕ್ರಮವನ್ನು ಸ್ವಾಗತಿಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಝೆಲೆನ್ಸ್ಕಿ, ವೈಮಾನಿಕ ದಾಳಿಗೆ ನಮ್ಮ ಪಾಲುದಾರ ರಾಷ್ಟ್ರದಿಂದ ಬಲವಾದ ಪ್ರತಿಕ್ರಿಯೆ ಬಂದಿರುವುದು ಪ್ರಮುಖವಾಗಿದೆ.ರಷ್ಯಾ ಇನ್ನೂ ಹೆಚ್ಚಿನ ಲಜ್ಜೆಗೆಟ್ಟ ದಾಳಿಗಳೊಂದಿಗೆ ಉಕ್ರೇನ್‌ಗೆ ನೋವನ್ನುಂಟುಮಾಡಲು ಪ್ರಯತ್ನಿಸುತ್ತಿದೆ. ಇದನ್ನು ಸ್ವೀಕರಿಸುತ್ತಾರೆಯೇ ಅಥವಾ ಸಹಿಸಿಕೊಳ್ಳುತ್ತಾರೆಯೇ ಎಂದು ಪುಟಿನ್ ಜಗತ್ತನ್ನು ಪರೀಕ್ಷಿಸುತ್ತಿದ್ದಾರೆ ಎಂಬುದಕ್ಕೆ ಇದು ಸ್ಪಷ್ಟ ಸಂಕೇತವಾಗಿದೆ. ಹೀಗಾಗಿ ಅಮೆರಿಕ ನಾಯಕರು ಕಠಿಣ ಸುಂಕ ಮತ್ತಿತರ ಕ್ರಮಗಳ ಮೂಲಕ ರಷ್ಯಾ ವಿರುದ್ಧ ಬಲವಾದ ನಿರ್ಬಂಧ ಹೇರಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ರಷ್ಯಾ ತನ್ನ ದಾಳಿಯಲ್ಲಿ 800 ಕ್ಕೂ ಹೆಚ್ಚು ಡ್ರೋನ್‌ಗಳ ಮೂಲಕ ಮೊದಲ ಬಾರಿಗೆ ಕೈವ್ ಸರ್ಕಾರಿ ಕಟ್ಟಡವನ್ನು ಹೊಡೆದಿದೆ ಎಂದು ಸಿಎನ್‌ಎನ್ ವರದಿ ಮಾಡಿದೆ. ವಸತಿ ಕಟ್ಟಡಗಳ ಮೇಲೆ ಡ್ರೋನ್ ದಾಳಿಯಲ್ಲಿ ಶಿಶು ಸೇರಿದಂತೆ ಕನಿಷ್ಠ ಇಬ್ಬರು ಸಾವನ್ನಪ್ಪಿದ್ದಾರೆ.
Advertisement