
ವಾಷಿಂಗ್ಟನ್: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಮಾಸ್ ಬಂಡುಕೋರರಿಗೆ ಕೊನೆಯ ಎಚ್ಚರಿಕೆ ನೀಡಿದ್ದಾರೆ. ಗಾಜಾದಲ್ಲಿ ಒತ್ತೆಯಾಳು ಬಿಡುಗಡೆ ಮಾಡುವ ಒಪ್ಪಂದವನ್ನು ಪ್ಯಾಲೇಸ್ಟಿನಿಯನ್ ಬಂಡುಕೋರರ ಗುಂಪು ಒಪ್ಪಿಕೊಳ್ಳಬೇಕು ಎಂದು ಹೇಳಿದ್ದಾರೆ.
ಇಸ್ರೇಲಿಗರು ನನ್ನ ಷರತ್ತುಗಳನ್ನು ಒಪ್ಪಿಕೊಂಡಿದ್ದಾರೆ. ಹಮಾಸ್ ಕೂಡ ಒಪ್ಪಿಕೊಳ್ಳುವ ಸಮಯ ಬಂದಿದೆ. ಒಪ್ಪಿಕೊಳ್ಳದಿದ್ದರೆ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಹಮಾಸ್ ಗೆ ಎಚ್ಚರಿಕೆ ನೀಡಿದ್ದೇನೆ. ಇದು ನನ್ನ ಕೊನೆಯ ಎಚ್ಚರಿಕೆ ಎಂದು ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಟ್ರಂಪ್ ಬರೆದುಕೊಂಡಿದ್ದಾರೆ.
ಈ ಹಿಂದೆ ಮಾರ್ಚ್ ನಲ್ಲಿ ಶ್ವೇತಭವನದಲ್ಲಿ 8 ಮಂದಿ ಬಿಡುಗಡೆಯಾದ ಒತ್ತೆಯಾಳುಗಳ ಭೇಟಿ ನಂತರ ಟ್ರಂಪ್ ಇದೇ ರೀತಿಯ ಎಚ್ಚರಿಕೆ ನೀಡಿದ್ದರು. ಉಳಿದಿರುವ ಎಲ್ಲಾ ಒತ್ತೆಯಾಳುಗಳನ್ನು ತಕ್ಷಣವೇ ಬಿಡುಗಡೆ ಮಾಡಬೇಕು ಮತ್ತು ಮೃತಪಟ್ಟ ಒತ್ತೆಯಾಳುಗಳ ಶವಗಳನ್ನು ವರ್ಗಾಯಿಸಬೇಕು. ಇಲ್ಲದಿದ್ದರೆ, ನಿಮ್ಮ ಕಥೆ ಮುಗಿಯುತ್ತದೆ ಎಂದು ಹೇಳಿದ್ದರು.
ಅಕ್ಟೋಬರ್ 7, 2023 ರಂದು ಇಸ್ರೇಲ್ ಮೇಲೆ ಹಮಾಸ್ ದಾಳಿಯ ಸಮಯದಲ್ಲಿ 251 ಒತ್ತೆಯಾಳುಗಳನ್ನು ಉಗ್ರಗಾಮಿಗಳು ತಮ್ಮ ವಶಕ್ಕೆ ಪಡೆದಿದ್ದರು. ಅವರಲ್ಲಿ 25 ಮಂದಿ ಮೃತಪಟ್ಟಿದ್ದಾರೆ ಎಂದು ಇಸ್ರೇಲಿ ಸೇನೆ ಹೇಳಿದೆ. ಅವರ ಮೃತದೇಹಗಳನ್ನು ಪಡೆಯಲು ಇಸ್ರೇಲ್ ಪ್ರಯತ್ನಿಸುತ್ತಿದೆ.
ಗಾಜಾದಲ್ಲಿ ಇನ್ನೂ ಕೆಲವು ಒತ್ತೆಯಾಳುಗಳು ಸಾವನ್ನಪ್ಪಬಹುದು ಎಂಬ ಸೂಚನೆಗಳ ನಡುವೆ ಹಮಾಸ್ ಜೊತೆಗೆ ಆಳವಾದ ಮಾತುಕತೆ ನಡೆಸಿರುವುದಾಗಿ ಡೊನಾಲ್ಡ್ ಟ್ರಂಪ್ ಕಳೆದ ಶುಕ್ರವಾರ ಹೇಳಿದ್ದರು. ಹಮಾಸ್ ತಮ್ಮ ಬಂಧನದಲ್ಲಿ ಇಟ್ಟುಕೊಂಡಿರುವ ಒತ್ತೆಯಾಳುಗಳನ್ನು ಬಿಡುಗಡೆ ಮಾಡದಿದ್ದರೆ ಪರಿಣಾಮ ಅತ್ಯಂತ ಭೀಕರಕರವಾಗಿರುತ್ತದೆ ಎಂದು ಟ್ರಂಪ್ ಹೇಳಿದ್ದರು.
Advertisement