
ವಾಷಿಂಗ್ಟನ್: ತಮ್ಮ ಬಲಪಂಥೀಯ ಮಿತ್ರ ಚಾರ್ಲಿ ಕಿರ್ಕ್ ಅವರ ಹತ್ಯೆಯ ನಂತರ "ಆಮೂಲಾಗ್ರ ಎಡಪಂಥೀಯ" ವಾದಿಗಳ ವಿರುದ್ಧ ವಾಗ್ದಾಳಿ ನಡೆಸಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಯುನೈಟೆಡ್ ಸ್ಟೇಟ್ಸ್‌ನಲ್ಲಿ ರಾಜಕೀಯ ಹಿಂಸಾಚಾರ ಇನ್ನಷ್ಟು ಹದಗೆಡುವ ಭೀತಿಯನ್ನು ಹುಟ್ಟುಹಾಕಿರುವ ಹತ್ಯೆಯ ನಂತರ ಕಠಿಣ ಕ್ರಮ ಕೈಗೊಳ್ಳುವುದಾಗಿ ಪ್ರತಿಜ್ಞೆ ಮಾಡಿದ್ದಾರೆ.
ಕೇವಲ 31 ವರ್ಷ ವಯಸ್ಸಿನಲ್ಲಿ ಸಂಪ್ರದಾಯವಾದಿ ರಾಜಕೀಯದಲ್ಲಿ ಪ್ರಬಲ ಧ್ವನಿಯಾಗಿದ್ದ ಕಿರ್ಕ್ ಅವರ ಬಗ್ಗೆ ವಾಷಿಂಗ್ಟನ್ ನ ಶ್ವೇತಭವನದ ಓವಲ್ ಕಚೇರಿಯಲ್ಲಿ ತಮ್ಮ ಮೇಜಿನ ಹಿಂದೆ ಕುಳಿತು ದುಃಖಿತ ಟ್ರಂಪ್ ಅಶುಭ ಸಂದೇಶವನ್ನು ನೀಡುವುದಕ್ಕೆ ಕೆಲವೇ ಗಂಟೆಗಳ ಮೊದಲು ದುಷ್ಕರ್ಮಿಗಳ ಗುಂಡಿಗೆ ಬಲಿಯಾಗಿದ್ದರು.
"ಇದು ಅಮೆರಿಕಕ್ಕೆ ಕರಾಳ ಕ್ಷಣ" ಎಂದು ಅವರು ತಮ್ಮ ಟ್ರೂತ್ ಸೋಶಿಯಲ್ ವೆಬ್‌ಸೈಟ್‌ಗೆ ಪೋಸ್ಟ್ ಮಾಡಿದ ವೀಡಿಯೊದಲ್ಲಿ ಕಿರ್ಕ್ ನ್ನು "ಸತ್ಯಕ್ಕಾಗಿ ಹುತಾತ್ಮ" ಎಂದು ಬಣ್ಣಿಸಿದ್ದಾರೆ. ಹಲವು ವರ್ಷಗಳಿಂದ ಆಮೂಲಾಗ್ರ ಎಡಪಂಥೀಯರು ಚಾರ್ಲಿಯಂತಹ ಅದ್ಭುತ ಅಮೆರಿಕನ್ನರನ್ನು ನಾಜಿಗಳು ಮತ್ತು ವಿಶ್ವದ ಕೆಟ್ಟ ಸಾಮೂಹಿಕ ಕೊಲೆಗಾರರು ಮತ್ತು ಅಪರಾಧಿಗಳಿಗೆ ಹೋಲಿಸಿದ್ದಾರೆ.
ಈ ರೀತಿಯ ಮಾತುಗಳು ಇಂದು ನಮ್ಮ ದೇಶದಲ್ಲಿ ನಾವು ನೋಡುತ್ತಿರುವ ಭಯೋತ್ಪಾದನೆಗೆ ನೇರವಾಗಿ ಕಾರಣವಾಗಿದೆ. ಈ ದೌರ್ಜನ್ಯಕ್ಕೆ ಕಾರಣರಾದಪ್ರತಿಯೊಬ್ಬರನ್ನು ಮತ್ತು ಅದಕ್ಕೆ ಹಣಕಾಸು ಒದಗಿಸುವ ಮತ್ತು ಬೆಂಬಲಿಸುವ ಸಂಸ್ಥೆಗಳು ಸೇರಿದಂತೆ ಇತರ ರಾಜಕೀಯ ಹಿಂಸಾಚಾರಕ್ಕೆ ನಮ್ಮ ಸರ್ಕಾರ ಕಠಿಣ ಕ್ರಮ ಕೈಗೊಳ್ಳುತ್ತದೆ ಎಂದರು.
ಉತಾಹ್ ವ್ಯಾಲಿ ವಿಶ್ವವಿದ್ಯಾಲಯದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ನಿನ್ನೆ ಚಾರ್ಲಿ ಕಿರ್ಕ್ ಮಾತನಾಡುತ್ತಿದ್ದಾಗ ಅವರ ಮೇಲೆ ಇದ್ದಕ್ಕಿದ್ದಂತೆ ಗುಂಡು ಹಾರಿಸಲಾಯಿತು. ಒಂದೇ ಗುಂಡು ಹಾರಿಸಿದ ಶಬ್ದ ಕೇಳಿಬಂದಾಗ ಅವರು ದೊಡ್ಡ ಜನಸಮೂಹವನ್ನು ಉದ್ದೇಶಿಸಿ ಮಾತನಾಡುತ್ತಿರುವುದನ್ನು ದೃಶ್ಯದಿಂದ ವೀಡಿಯೊ ತೋರಿಸಿದೆ.
ಕ್ಯಾಮೆರಾ ವೇಗವಾಗಿ ಚಲಿಸುವ ಮೊದಲು ಚಾರ್ಲಿ ಕಿರ್ಕ್ ಕುರ್ಚಿಯಲ್ಲಿ ಕುಸಿದು ಬಿದ್ದಂತೆ ಕಂಡುಬಂದು ಪ್ರೇಕ್ಷಕರಲ್ಲಿ ಭೀತಿಯುಂಟಾಯಿತು. ಅವರನ್ನು ಕೊಂದ ಗುಂಡು ಕ್ಯಾಂಪಸ್‌ನ ಮೇಲ್ಛಾವಣಿಯಿಂದ ಬಂದಿದೆ ಎಂದು ತನಿಖಾಧಿಕಾರಿಗಳು ಹೇಳುತ್ತಾರೆ. ಕಪ್ಪು ಬಟ್ಟೆ ಧರಿಸಿದ ವ್ಯಕ್ತಿ ಗುಂಡು ಹಾರಿಸಿದ್ದಾರೆ, ಇದು ಗುರಿಯಾಗಿಸಿಕೊಂಡು ಮಾಡಿದ ಹತ್ಯೆಯಂತೆ ಕಾಣುತ್ತದೆ.
Advertisement