
ನೇಪಾಳದಲ್ಲಿ ಮಧ್ಯಂತರ ಸರ್ಕಾರದ ಹಂಗಾಮಿ ಮುಖ್ಯಸ್ಥೆಯಾಗಿ ಮಾಜಿ ಮುಖ್ಯ ನ್ಯಾಯಮೂರ್ತಿ ಸುಶೀಲಾ ಕರ್ಕಿ ಅವರು ನೇಮಕಗೊಳ್ಳುವ ಸಾಧ್ಯತೆಯಿದೆ.
ನೇಪಾಳ ಅಧ್ಯಕ್ಷ ರಾಮಚಂದ್ರ ಪೌಡೆಲ್, ಹಿರಿಯ ರಾಜಕೀಯ ನಾಯಕರು, ಸೇನಾ ಮುಖ್ಯಸ್ಥರು ಮತ್ತು ಇತ್ತೀಚಿನ ಸಾಮೂಹಿಕ ಪ್ರತಿಭಟನೆಗಳ ಮುಂಚೂಣಿಯಲ್ಲಿರುವ ಯುವ ನೇತೃತ್ವದ ಜನರಲ್ ಝಡ್ ಚಳವಳಿಯ ಪ್ರತಿನಿಧಿಗಳ ನಡುವೆ ತೀವ್ರ ಮಾತುಕತೆಗಳ ಮಧ್ಯೆ ಈ ಪ್ರಸ್ತಾಪ ಬಂದಿದೆ.
ನೇಪಾಳದ ನ್ಯಾಯಾಂಗದಲ್ಲಿ ಗೌರವಾನ್ವಿತ ಹುದ್ದೆ ಹೊಂದಿದ್ದ ಮತ್ತು ಭ್ರಷ್ಟಾಚಾರ ವಿರೋಧಿ ಹೋರಾಟಗಾರ್ತಿ ಕರ್ಕಿ ಅವರನ್ನು ಮಧ್ಯಂತರ ಸರ್ಕಾರದ ಮುಖ್ಯಸ್ಥರನ್ನಾಗಿ ಮಾಡಲು ಗುಂಪು ಬಲವಾಗಿ ಶಿಫಾರಸು ಮಾಡಿದೆ. ಅವರು ನೇಮಕಗೊಂಡರೆ, ಸುಶೀಲಾ ಕರ್ಕಿ ನೇಪಾಳದ ಮೊದಲ ಮಹಿಳಾ ಪ್ರಧಾನಿಯಾಗುತ್ತಾರೆ.
ಹಂಗಾಮಿ ಸರ್ಕಾರವು ದೇಶವನ್ನು ಹೊಸ ಚುನಾವಣೆಯತ್ತ ಕೊಂಡೊಯ್ಯುವ ನಿರೀಕ್ಷೆಯಿದೆ. ಪೊಲೀಸರೊಂದಿಗಿನ ಹಿಂಸಾತ್ಮಕ ಘರ್ಷಣೆಯ ಸಮಯದಲ್ಲಿ ಪ್ರತಿಭಟನಾಕಾರರ ಸಾವಿಗೆ ಹೊಣೆಗಾರಿಕೆಯನ್ನು ಒತ್ತಾಯಿಸಿ ಪ್ರತಿಭಟನಾಕಾರರು ಪ್ರಧಾನಿ ಕೆ ಪಿ ಶರ್ಮಾ ಓಲಿ ಅವರ ಕಚೇರಿಗೆ ನುಗ್ಗಿದ ತೀವ್ರ ಪ್ರತಿಭಟನೆ, ಹಿಂಸಾಚಾರ ನಡೆದ ಹಿನ್ನೆಲೆಯಲ್ಲಿ ಅವರು ರಾಜೀನಾಮೆ ನೀಡಿದ್ದರು.
19 ಮಂದಿ ಸಾವು
ಕಳೆದ ಸೋಮವಾರ ಮತ್ತು ಮಂಗಳವಾರದ ಪ್ರತಿಭಟನೆಗಳಲ್ಲಿ ಸಾವಿನ ಸಂಖ್ಯೆ 19 ಕ್ಕೆ ಏರಿದೆ ಎಂದು ಆರೋಗ್ಯ ಸಚಿವಾಲಯ ದೃಢಪಡಿಸಿದೆ. ಭ್ರಷ್ಟಾಚಾರ ಆರೋಪಗಳು ಮತ್ತು ವಿವಾದಾತ್ಮಕ ಸಾಮಾಜಿಕ ಮಾಧ್ಯಮ ನಿಷೇಧದ ಹಿನ್ನೆಲೆಯಲ್ಲಿ ಪ್ರತಿಭಟನೆಗಳು ಭುಗಿಲೆದ್ದವು,
ಓಲಿ ಅವರ ರಾಜೀನಾಮೆಯನ್ನು ಸ್ವೀಕರಿಸಿದ ಅಧ್ಯಕ್ಷ ಪೌಡೆಲ್, ಹೊಸ ಮಂತ್ರಿ ಮಂಡಳಿ ರಚನೆಯಾಗುವವರೆಗೆ ತಮ್ಮ ಸಚಿವ ಸಂಪುಟವನ್ನು ತಾತ್ಕಾಲಿಕವಾಗಿ ಮುಂದುವರೆಸಿದ್ದಾರೆ. ಎರಡು ಸಾಂವಿಧಾನಿಕ ಮಾರ್ಗಗಳನ್ನು ಪರಿಗಣಿಸಲಾಗಿತ್ತು.
ಸಂಸತ್ತನ್ನು ವಿಸರ್ಜಿಸುವುದು ಅಥವಾ ಅದನ್ನು ಉಸ್ತುವಾರಿ ವ್ಯವಸ್ಥೆಯಡಿಯಲ್ಲಿ ಉಳಿಸಿಕೊಳ್ಳುವುದು. ಜನರಲ್ ಝಡ್ ಗುಂಪು ಸೇರಿದಂತೆ ಪಾಲುದಾರರು ಪ್ರಸ್ತುತ ಸಾಂವಿಧಾನಿಕ ಚೌಕಟ್ಟಿನೊಳಗೆ ಪರಿಹಾರವನ್ನು ಅನುಸರಿಸಲು ಒಪ್ಪಿಕೊಂಡಿದ್ದಾರೆ.
ದೇಶದಲ್ಲಿ ಹಿಂಸಾಚಾರ ಉದ್ವಿಗ್ನತೆಯನ್ನು ಕಡಿಮೆ ಮಾಡಲು, ಅಧಿಕಾರಿಗಳು ಇಂದು ಬೆಳಿಗ್ಗೆ 7 ರಿಂದ 11 ರವರೆಗೆ ರಾಷ್ಟ್ರವ್ಯಾಪಿ ಕರ್ಫ್ಯೂ ನ್ನು ಸಡಿಲಿಸಿದ್ದಾರೆ. ಆದಾಗ್ಯೂ, ನಿರ್ಬಂಧಿತ ಆದೇಶಗಳು ಬೆಳಗ್ಗೆ 11 ರಿಂದ ಸಂಜೆ 5 ರವರೆಗೆ ಜಾರಿಯಲ್ಲಿರುತ್ತವೆ, ನಂತರ ಸಂಜೆ 7 ರಿಂದ ನಾಳೆ ಬೆಳಗ್ಗೆ 6 ರವರೆಗೆ ಕರ್ಫ್ಯೂ ಪುನರಾರಂಭಗೊಳ್ಳುವ ಮೊದಲು ಒಂದು ಸಣ್ಣ ಅವಧಿ ಇರುತ್ತದೆ.
ಸಾಂವಿಧಾನಿಕ ತಜ್ಞರು ಮತ್ತು ಪಕ್ಷದ ನಾಯಕರೊಂದಿಗೆ ಅಧ್ಯಕ್ಷರು ಸಮಾಲೋಚನೆ ನಡೆಸಿದ ನಂತರ ಇಂದು ಸುಶೀಲಾ ಕರ್ತಿ ಅವರ ನೇಮಕಾತಿಯ ಕುರಿತು ಅಧಿಕೃತ ಘೋಷಣೆಯಾಗುವ ನಿರೀಕ್ಷೆಯಿದೆ.
Advertisement