
ಸಿಂಗಾಪುರ: ಅಮೆರಿಕ ವಿಧಿಸಿರುವ ಸುಂಕಗಳು ಭಾರತದ ಮೇಲೆ ಪರಿಣಾಮ ಬೀರಿದ್ದು, ಜನರು ಈಗಾಗಲೇ ಉದ್ಯೋಗ ಕಳೆದುಕೊಳ್ಳುತ್ತಿದ್ದಾರೆ ಎಂದು ಹಿರಿಯ ಕಾಂಗ್ರೆಸ್ ನಾಯಕ ಶಶಿ ತರೂರ್ ಶುಕ್ರವಾರ ಹೇಳಿದ್ದಾರೆ. ಇದಕ್ಕಿದ್ದಂತೆ ಮನಸ್ಸು ಬದಲಾಯಿಸುವ ಟ್ರಂಪ್, ರಾಜತಾಂತ್ರಿಕ ನಡವಳಿಕೆಯ ಸಾಂಪ್ರದಾಯಿಕ ಮಾನದಂಡಗಳನ್ನು ಗೌರವಿಸುತ್ತಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.
ರಷ್ಯಾದಿಂದ ತೈಲ ಖರೀದಿಗಾಗಿ ಶೇ. 25 ರಷ್ಟು ಹೆಚ್ಚುವರಿ ಸುಂಕ ಸೇರಿದಂತೆ ಒಟ್ಟಾರೇ ಶೇ. 50 ರಷ್ಟು ಸುಂಕವನ್ನು ಅಮೆರಿಕ ವಿಧಿಸಿದೆ. ಸುಂಕದ ಪರಿಣಾಮವನ್ನು ತಗ್ಗಿಸಲು ಭಾರತವು ರಫ್ತು ಮಾರುಕಟ್ಟೆಗಳನ್ನು ವೈವಿಧ್ಯಗೊಳಿಸಬೇಕಾಗಿದೆ ಎಂದು ಹೇಳಿದ ತರೂರ್, ಸೂರತ್‌ನಲ್ಲಿ ಚಿನ್ನಾಭರಣ, ಸಮುದ್ರ ಆಹಾರ ಮತ್ತು ಉತ್ಪಾದನಾ ವಲಯಗಳಲ್ಲಿ 1.35 ಲಕ್ಷ ಜನರು ಉದ್ಯೋಗ ಕಳೆದುಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.
ರಿಯಲ್ ಎಸ್ಟೇಟ್ ವಲಯದ ಭಾರತದ ಅತ್ಯುನ್ನತ ಉದ್ಯಮ ಸಂಸ್ಥೆಯಾದ ಕ್ರೆಡಾಯ್ ಆಯೋಜಿಸಿದ್ದ ಸಮ್ಮೇಳನದಲ್ಲಿ ಭಾರತ-ಅಮೆರಿಕ ಸಂಬಂಧ ಮತ್ತು ಸುಂಕಗಳ ಹೇರಿಕೆಗೆ ಸಂಬಂಧಿಸಿದ ಪ್ರಶ್ನೆಗೆ ಉತ್ತರಿಸಿದ ತರೂರ್, ಟ್ರಂಪ್ ಇದ್ದಕ್ಕಿದ್ದಂತೆ ಮನಸ್ಸನ್ನು ಬದಲಾಯಿಸುವ ವ್ಯಕ್ತಿಯಾಗಿದ್ದಾರೆ. ಅಮೆರಿಕದ ವ್ಯವಸ್ಥೆಯು ಅಧ್ಯಕ್ಷರಿಗೆ ಅದ್ಭುತವಾದ ಅವಕಾಶ ನೀಡಿದೆ. ಅವರಿಗಿಂತ ಮುನ್ನ ಅಮೆರಿಕದಲ್ಲಿ ಆಳ್ವಿಕೆ ನಡೆಸಿದ 44 ಅಥವಾ 45 ಅಧ್ಯಕ್ಷರು ಶ್ವೇತಭವನದಿಂದ ಎಂದಿಗೂ ಈ ರೀತಿ ವರ್ತಿಸಿರಲಿಲ್ಲ ಎಂದು ಟೀಕಾ ಪ್ರಹಾರ ನಡೆಸಿದರು.
ಟ್ರಂಪ್ ಅವರನ್ನು ಅಸಾಮಾನ್ಯ ಅಧ್ಯಕ್ಷ (unusual president) ಎಂದು ಕರೆದ ಶಶಿ ತರೂರ್, ಯುಎಸ್ ಅಧ್ಯಕ್ಷರು ರಾಜತಾಂತ್ರಿಕ ನಡವಳಿಕೆಯ ಸಾಂಪ್ರದಾಯಿಕ ಮಾನದಂಡಗಳನ್ನು ಖಂಡಿತವಾಗಿಯೂ ಗೌರವಿಸುವುದಿಲ್ಲ. ಯಾವುದೇ ವಿಶ್ವ ನಾಯಕನು ತಾನು ನೋಬಲ್ ಶಾಂತಿ ಪ್ರಶಸ್ತಿಗೆ ಅರ್ಹನೆಂದು ಬಹಿರಂಗವಾಗಿ ಹೇಳುವುದನ್ನು ನೀವು ಎಂದಾದರೂ ಕೇಳಿದ್ದೀರಾ. ಈ ಹಿಂದೆ ಎಂದೂ ಈ ರೀತಿ ಯಾರು ಹೇಳಿರಲಿಲ್ಲ. ಜಗತ್ತಿನ ಎಲ್ಲ ದೇಶಗಳು ಬಂದು ನನ್ನ ಕತ್ತೆಗೆ ಮುತ್ತಿಡಲು ಬಯಸುತ್ತವೆ ಎಂದು ಯಾವುದೇ ವಿಶ್ವ ನಾಯಕರು ಹೇಳುವುದನ್ನು ನೀವು ಕೇಳಿದ್ದೀರಾ? ಎಂದು ಪ್ರಶ್ನಿಸಿದರು.
ಭಾರತ ಮತ್ತು ರಷ್ಯಾಗಳು ಸತ್ತ ಆರ್ಥಿಕತೆ ಹೊಂದಿವೆ ಎಂದು ಮೂಲಭೂತವಾಗಿ ಹೇಳುವ ಯಾವುದೇ ವಿಶ್ವ ನಾಯಕನನ್ನು ನೀವು ಕೇಳಿದ್ದೀರಾ? ಅವರು ಈ ಕುರಿತ ಚರ್ಚೆ ಬಯಸಿದ್ದರೆ ನಾನು ಹೆದರುವುದಿಲ್ಲ. ಈ ರೀತಿಯ ಭಾಷೆಯನ್ನು ಯಾವುದೇ ಸರ್ಕಾರದ ಮುಖ್ಯಸ್ಥರಿಂದ ಕೇಳಿರಲಿಲ್ಲ. ಹೀಗಾಗಿ ಟ್ರಂಪ್ ಅವರ ನಡವಳಿಕೆಯಿಂದ ನಮ್ಮ ಕಾರ್ಯಕ್ಷಮತೆಯನ್ನು ನಿರ್ಣಯಿಸಬೇಡಿ ಎಂದು ತರೂರ್ ಕೇಳಿಕೊಂಡರು.
ಸುಂಕಗಳು ಭಾರತದ ಮೇಲೆ ಬಹಳ ಋಣಾತ್ಮಕ ಪರಿಣಾಮ ಬೀರಿವೆ ಎಂಬುದು ಸತ್ಯ ಎಂದು ಹೇಳಿದರು. "ಈಗಾಗಲೇ ಜನರು ಉದ್ಯೋಗ ಕಳೆದುಕೊಳ್ಳುತ್ತಿದ್ದಾರೆ. ಸೂರತ್‌ನಲ್ಲಿ ಚಿನ್ನಾಭರಣ ಮತ್ತಿತರ ವ್ಯವಹಾರಗಳಲ್ಲಿ ಕೆಲಸ ಮಾಡುತ್ತಿದ್ದ 1.35 ಲಕ್ಷ ಜನರನ್ನು ವಜಾಗೊಳಿಸಲಾಗಿದೆ. ಸಮುದ್ರ ಆಹಾರ ಮತ್ತು ಉತ್ಪಾದನಾ ವಲಯದಲ್ಲಿ ಸಂಭಾವ್ಯ ಉದ್ಯೋಗ ನಷ್ಟವಿದೆ. ಸುಂಕವು ಭಾರತೀಯ ಆರ್ಥಿಕತೆಗೆ ಹಾನಿಯನ್ನುಂಟುಮಾಡುತ್ತಿದೆ ಎಂದು ಅವರು ಹೇಳಿದರು.
Advertisement