
ಕಠ್ಮಂಡು: ಜೆನ್ -ಝಿ ಪ್ರತಿಭಟನೆಯಿಂದ ನೇಪಾಳದಲ್ಲಿ ಕೆ.ಪಿ.ಓಲಿ ನೇತೃತ್ವದ ಸರ್ಕಾರ ಪತನವಾಗಿದ್ದು, ಸುಪ್ರೀಂಕೋರ್ಟ್ನ ನಿವೃತ್ತ ನ್ಯಾಯಮೂರ್ತಿ ಸುಶೀಲಾ ಕರ್ಕಿ ಅವರು ಹಂಗಾಮಿ ಪ್ರಧಾನಿಯಾಗಿ ಶುಕ್ರವಾರ ಪ್ರಮಾಣವಚನ ಸ್ವೀಕರಿಸಿದ್ದಾರೆ. ಇದರ ಬೆನ್ನಲ್ಲೇ ಶನಿವಾರ ನೇಪಾಳ ಸಂಸತ್ತಿಗೆ ಚುನಾವಣೆ ಘೋಷಣೆಯಾಗಿದೆ
ಮುಂದಿನ ವರ್ಷ ಮಾರ್ಚ್ 5 ರಂದು ಸಾರ್ವತ್ರಿಕ ಚುನಾವಣೆ ನಡೆಯಲಿದೆ ಎಂದು ನೇಪಾಳ ಅಧ್ಯಕ್ಷ ರಾಮಚಂದ್ರ ಪೌಡೆಲ್ ಅವರ ಕಚೇರಿ ಘೋಷಿಸಿದೆ.
ಹೊಸದಾಗಿ ನೇಮಕಗೊಂಡ ಪ್ರಧಾನಿಯ ಶಿಫಾರಸಿನ ಮೇರೆಗೆ ಪ್ರತಿನಿಧಿಗಳ ಸಭೆಯನ್ನು ಶುಕ್ರವಾರ ವಿಸರ್ಜಿಸಿದ್ದು, 2026ರ ಮಾರ್ಚ್ 5 ರಂದು ಮುಂದಿನ ಸಂಸತ್ ಚುನಾವಣೆ ನಡೆಯಲಿದೆ ಎಂದು ಅಧ್ಯಕ್ಷ ಪೌಡೆಲ್ ಹೇಳಿದ್ದಾರೆ.
ಸಾಮಾಜಿಕ ಮಾಧ್ಯಮ ನಿಷೇಧ ಮತ್ತು ಭ್ರಷ್ಟಾಚಾರದ ಆರೋಪದ ವಿರುದ್ಧ ವ್ಯಾಪಕ ಪ್ರತಿಭಟನೆಗಳ ನಂತರ ಈ ವಾರ ಓಲಿ ಅವರು ಪ್ರಧಾನಿ ಸ್ಥಾನಕ್ಕೆ ಹಠಾತ್ ರಾಜೀನಾಮೆ ನೀಡಿದ್ದರು. ನಂತರ ರಾಜಕೀಯ ಅನಿಶ್ಚಿತತೆಯ ದಿನಗಳನ್ನು ಕೊನೆಗೊಳಿಸಲು ಮಾಜಿ ಮುಖ್ಯ ನ್ಯಾಯಮೂರ್ತಿ ಕರ್ಕಿ(73) ಅವರು ದೇಶದ ಮೊದಲ ಮಹಿಳಾ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದರು.
ಪ್ರಧಾನಿ ಪ್ರಮಾಣವಚನ ಸಮಾರಂಭದ ಎರಡು ದಿನಗಳ ನಂತರ ಕರ್ಕಿ ಅವರು ಭಾನುವಾರ ಸಣ್ಣ ಸಚಿವ ಸಂಪುಟವನ್ನು ರಚಿಸಲಿದ್ದಾರೆ.
ಕರ್ಕಿ ಅವರು ಗೃಹ, ವಿದೇಶಾಂಗ ವ್ಯವಹಾರ ಮತ್ತು ರಕ್ಷಣಾ ಸೇರಿದಂತೆ ಸುಮಾರು ಎರಡು ಡಜನ್ ಸಚಿವರನ್ನು ತಮ್ಮ ಸಂಪುಟಕ್ಕೆ ಸೇರಿಸಿಕೊಳ್ಳಲಿದ್ದಾರೆ.
ಪ್ರಧಾನಿಯವರು ಭಾನುವಾರ ಅಧಿಕಾರ ವಹಿಸಿಕೊಳ್ಳುವಾಗ ಅಲ್ಪ ಸಂಖ್ಯೆಯ ಸಚಿವರನ್ನು ಸೇರಿಸಿಕೊಂಡು ಸಚಿವ ಸಂಪುಟ ರಚಿಸಲಿದ್ದಾರೆ ಎಂದು ಅಧ್ಯಕ್ಷರ ಕಚೇರಿಯ ಮೂಲಗಳು ತಿಳಿಸಿವೆ.
Advertisement