
ವಾಷಿಂಗ್ಟನ್: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಪ್ತ, ಯುಎಸ್ ವಾಣಿಜ್ಯ ಕಾರ್ಯದರ್ಶಿ ಹೊವಾರ್ಡ್ ಲುಟ್ನಿಕ್ ಮತ್ತೊಮ್ಮೆ ಭಾರತದ ವಿರುದ್ಧ ತಮ್ಮ ಆಕ್ರೋಶ ಹೊರಹಾಕಿದ್ದಾರೆ. ಭಾರತ ಮತ್ತು ಬ್ರೆಜಿಲ್ ದೇಶಗಳನ್ನು ಸರಿಪಡಿಸಬೇಕಾಗಿದೆ ಎಂದು ಹೇಳಿದ್ದಾರೆ. ಲುಟ್ನಿಕ್ ಅವರ ಈ ಹೇಳಿಕೆಯು ಅವರ ಇತ್ತೀಚಿನ ಭಾರತ ವಿರೋಧಿ ಹೇಳಿಕೆಗಳ ಸರಣಿಯನ್ನು ಮುಂದುವರೆಸಿದೆ. ಕಳೆದ ಕೆಲವು ವಾರಗಳಲ್ಲಿ ರಷ್ಯಾದ ತೈಲ ಖರೀದಿ ಮತ್ತು ವ್ಯಾಪಾರದ ವಿಷಯದ ಕುರಿತು ಲುಟ್ನಿಕ್ ನಿರಂತರವಾಗಿ ಭಾರತದ ವಿರುದ್ಧ ಕಠಿಣ ಭಾಷೆಯನ್ನು ಬಳಸಿದ್ದಾರೆ.
ಸಂದರ್ಶನವೊಂದರಲ್ಲಿ ಹೊವಾರ್ಡ್ ಲುಟ್ನಿಕ್ ಅವರನ್ನು ಭಾರತ, ಸ್ವಿಟ್ಜರ್ಲೆಂಡ್ ಮತ್ತು ಬ್ರೆಜಿಲ್‌ನೊಂದಿಗೆ ಯುಎಸ್ ನಡೆಯುತ್ತಿರುವ ವ್ಯಾಪಾರ ಮಾತುಕತೆಗಳ ಬಗ್ಗೆ ಪ್ರಶ್ನಿಸಲಾಯಿತು. ಇದಕ್ಕೆ ಖಾರವಾಗಿ ಪ್ರತಿಕ್ರಿಯಿಸಿದ ಲುಟ್ನಿಕ್, ನಾವು ಸರಿಪಡಿಸಬೇಕಾದ ಕೆಲವು ದೇಶಗಳಿವೆ. ಭಾರತ ಮತ್ತು ಬ್ರೆಜಿಲ್ ಸರಿಪಡಿಸಬೇಕಾದ ಅಂತಹ ದೇಶಗಳು. ಈ ದೇಶಗಳು ಯುಎಸ್ ಜೊತೆ ಎಚ್ಚರಿಕೆಯಿಂದ ಪ್ರತಿಕ್ರಿಯಿಸಬೇಕಾಗುತ್ತದೆ. ಅವರು ತಮ್ಮ ಮಾರುಕಟ್ಟೆಗಳನ್ನು ನಮಗೆ ತೆರೆಯಬೇಕು ಮತ್ತು ಯುಎಸ್‌ಗೆ ಹಾನಿ ಮಾಡುವ ಕ್ರಮಗಳನ್ನು ತೆಗೆದುಕೊಳ್ಳುವುದನ್ನು ನಿಲ್ಲಿಸಬೇಕಾಗುತ್ತದೆ ಎಂದು ಹೇಳಿದರು.
ಕಳೆದ ತಿಂಗಳು, ಟ್ರಂಪ್ ಆಡಳಿತವು ಭಾರತೀಯ ಸರಕುಗಳ ಮೇಲೆ ಶೇಕಡಾ 50 ರಷ್ಟು ಸುಂಕವನ್ನು ವಿಧಿಸಿತು. ಇದು ಭಾರತ ಮತ್ತು ಯುಎಸ್ ನಡುವಿನ ಸಂಬಂಧವನ್ನು ಹದಗೆಡಿಸಿದೆ. ಭಾರತವು ಅಮೆರಿಕದ ಗ್ರಾಹಕರಿಗೆ ಮಾರಾಟ ಮಾಡಲು ಬಯಸಿದರೆ, ಅದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗೆ ಸಮನ್ವಯ ಸಾಧಿಸಬೇಕು ಎಂಬುದನ್ನು ಅರ್ಥಮಾಡಿಕೊಳ್ಳಬೇಕು ಎಂದು ಲುಟ್ನಿಕ್ ಹೇಳಿದರು.
ಅನೇಕ ದೇಶಗಳ ಜೊತೆಗಿನ ವ್ಯಾಪಾರ ಮಾತುಕತೆಗಳು ಮುಗಿದಿದ್ದು ನಮಗೆ ಮುಕ್ತ ಅವಕಾಶ ಸಿಕ್ಕಿದೆ. ಆದರೆ ಇನ್ನು ಕೆಲವು ದೇಶಗಳು ಉಳಿದಿವೆ. ಆದರೆ ಇವು ಭಾರತ ಮತ್ತು ಬ್ರೆಜಿಲ್‌ನಂತಹ ಕಡಿಮೆ ಮಹತ್ವದ್ದಾಗಿವೆ. ಇವುಗಳು ಕಾಲಾನಂತರದಲ್ಲಿ ಪರಿಹರಿಸಲ್ಪಡುತ್ತವೆ ಎಂದು ನಾವು ಭಾವಿಸುತ್ತೇವೆ ಎಂದು ಲುಟ್ನಿಕ್ ಹೇಳಿದರು. ವಿಳಂಬಕ್ಕೆ ದೆಹಲಿಯನ್ನು ದೂಷಿಸಿದ ಲುಟ್ನಿಕ್, ಭಾರತದೊಂದಿಗಿನ ವ್ಯಾಪಾರ ಮಾತುಕತೆಗಳ ಸ್ಥಿತಿಯನ್ನು ಬಹಿರಂಗಪಡಿಸಲಿಲ್ಲ.
ಯುಎಸ್ ವಾಣಿಜ್ಯ ಕಾರ್ಯದರ್ಶಿ ಹೊವಾರ್ಡ್ ಲುಟ್ನಿಕ್ ಇತ್ತೀಚಿನ ದಿನಗಳಲ್ಲಿ ನಿರಂತರವಾಗಿ ಹುಚ್ಚನಂತೆ ವರ್ತಿಸುತ್ತಿದ್ದಾರೆ. ರಷ್ಯಾದಿಂದ ತೈಲ ಖರೀದಿಸಿದ್ದಕ್ಕಾಗಿ ಲುಟ್ನಿಕ್ ಭಾರತವನ್ನು ವಿಶೇಷವಾಗಿ ಟೀಕಿಸಿದ್ದಾರೆ. ಇತ್ತೀಚೆಗೆ, ಭಾರತ ಮತ್ತು ಯುಎಸ್ ನಡುವೆ ವ್ಯಾಪಾರ ಒಪ್ಪಂದವನ್ನು ತಲುಪಬಹುದು ಮತ್ತು ಭಾರತ ಇದಕ್ಕಾಗಿ ಅಮೆರಿಕಕ್ಕೆ ಕ್ಷಮೆಯಾಚಿಸಬಹುದು ಎಂದು ಲುಟ್ನಿಕ್ ಹೇಳಿದರು. ಲುಟ್ನಿಕ್ ಇತ್ತೀಚೆಗೆ H1B ವೀಸಾ ವಿಷಯದಲ್ಲಿ ಟ್ರಂಪ್ ಅವರನ್ನು ಬೆಂಬಲಿಸಿದರು ಮತ್ತು ಭಾರತವನ್ನು ಟೀಕಿಸಿದರು.
Advertisement