
ವಾಷಿಂಗ್ಟನ್: ಹಮಾಸ್ ಗಾಜಾ ಕದನ ವಿರಾಮ ಒಪ್ಪಂದಕ್ಕೆ ಪ್ರತಿಕ್ರಿಯಿಸಲು ಟ್ರಂಪ್ ಮೂರ್ನಾಲ್ಕು ದಿನಗಳ ಗಡುವು ನೀಡಿದ್ದಾರೆ. ಅಷ್ಟರೊಳಗೆ ಬಂಡುಕೋರರು ಒತ್ತೆಯಾಳುಗಳನ್ನು ಬಿಡುಗಡೆ ಮಾಡಬೇಕು, ಸಂಪೂರ್ಣವಾಗಿ ನಿಶ್ಯಸ್ತ್ರಗೊಳಿಸಬೇಕು ಮತ್ತು ಭವಿಷ್ಯದ ಸರ್ಕಾರದಲ್ಲಿ ಯಾವುದೇ ಪಾತ್ರದಿಂದ ಹೊರಗಿರಬೇಕು ಎಂದು ಟ್ರಂಪ್ ಪ್ರಸ್ತಾಪಿಸಿದ್ದಾರೆ.
ಗಡುವಿನ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಟ್ರಂಪ್, ಮೂರ್ನಾಲ್ಕು ದಿನಗಳ ಸಮಾಯವಕಾಶವಿದೆ. ಹಮಾಸ್ ಪ್ರತಿಕ್ರಿಯೆಗಾಗಿ ಕಾಯುತ್ತಿದ್ದೇವೆ. ಕದನ ವಿರಾಮ ಒಪ್ಪಂದಕ್ಕೆ ಹಮಾಸ್ ಸಹಿ ಹಾಕಲಿದೆಯೇ ಅಥವಾ ಇಲ್ಲವೇ ಎಂಬುದನ್ನು ನೋಡುತ್ತಿದ್ದೇವೆ. ಒಂದು ವೇಳೆ ಸಹಿ ಹಾಕದಿದ್ದಲ್ಲಿ ಇದು ಅತ್ಯಂತ ದು:ಖಕರವಾಗಿ ಅಂತ್ಯವಾಗಲಿದೆ ಎಂದರು.
ಹಮಾಸ್ ಉಗ್ರಗಾಮಿ ಸಂಘಟನೆಯ ನಿಶ್ಯಸ್ತ್ರೀಕರಣಕ್ಕೆ ಕರೆ ನೀಡುವ ಗಾಜಾ ಶಾಂತಿ ಒಪ್ಪಂದವನ್ನು ಒಪ್ಪಿಕೊಳ್ಳದಿದ್ದರೆ ತೀವ್ರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಟ್ರಂಪ್ ಎಚ್ಚರಿಕೆ ನೀಡಿದ್ದಾರೆ.
"ನಮಗೆ ಒಂದು ಸಹಿಯ ಅಗತ್ಯವಿದೆ. ಅವರು ಸಹಿ ಮಾಡದಿದ್ದರೆ ನರಕಕ್ಕೆ ದಾರಿ ತೋರಿಸ್ತಿವಿ. ತಮ್ಮ ಒಳ್ಳೆಯದಕ್ಕಾಗಿ ಅವರು ಸಹಿ ಮಾಡುತ್ತಾರೆ ಎಂಬ ವಿಶ್ವಾಸವಿದೆ ಎಂದು ಟ್ರಂಪ್ ವರ್ಜೀನಿಯಾದ ಕ್ವಾಂಟಿಕೋದಲ್ಲಿ ಯುಎಸ್ ಜನರಲ್ ಗಳು ಹಾಗೂ ಅಡ್ಮಿರಲ್‌ಗಳಿಗೆ ಹೇಳಿದರು.
ಹಮಾಸ್ ತನ್ನ ದೇಶ ಹಾಗೂ ವಿದೇಶದಲ್ಲಿರುವ ರಾಜಕೀಯ ಮತ್ತು ಮಿಲಿಟರಿ ನಾಯಕರೊಂದಿಗೆ ಸಮಾಲೋಚನೆ ಆರಂಭಿಸಿದೆ ಎಂದು ಪ್ಯಾಲೇಸ್ಟಿನಿಯನ್ ಮೂಲವೊಂದು AFP ಗೆ ತಿಳಿಸಿದೆ. ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತಾನ್ಯಾಹು ಅವರನ್ನು ಟ್ರಂಪ್ ಭೇಟಿಯಾಗಿ ಗಾಜಾದಲ್ಲಿ ಶಾಂತಿ ಯೋಜನೆ ಪ್ರಸ್ತಾಪಿಸಿದ ನಂತರ ಈ ಬೆಳವಣಿಗೆಯಾಗಿದೆ.
ಗಾಜಾದಲ್ಲಿ ಯುದ್ಧ ಕೊನೆಗೊಳಿಸಲು ಟ್ರಂಪ್ ಯೋಜನೆ ಬೆಂಬಲಿಸುವುದಾಗಿ ನೆತನ್ಯಾಹು ಹೇಳಿದ್ದಾರೆ. ಒಂದು ವೇಳೆ ಹಮಾಸ್ ನಿರಾಕರಿಸಿದರೆ ಅದಕ್ಕೆ ಪ್ರತ್ಯುತ್ತರವಾಗಿ ತಕ್ಕ ಉತ್ತರ ನೀಡಲಾಗುವುದು, ಹಮಾಸ್ ನಿರ್ಮೂಲನೆ ಕೆಲಸವನ್ನು ಪೂರ್ಣಗೊಳಿಸುವುದಾಗಿ ಅವರು ಎಚ್ಚರಿಕೆ ನೀಡಿದ್ದಾರೆ.
Advertisement