"ನಿಮ್ಮೊಂದಿಗೆ ಒಪ್ಪಂದ ಯಾವಾಗ ಬೇಕಾದರೂ ಬದಲಿಸಬಹುದು": ಟ್ರಂಪ್ ಬೆದರಿಕೆಗೆ ಯುಕೆ ತಿರುಗೇಟು

ಬ್ರಿಟನ್‌ನೊಂದಿಗೆ ಇರುವ ‘ವಿಶೇಷ ಸಂಬಂಧ’ ಹದಗೆಟ್ಟಿರುವುದು ‘ದುಃಖಕರ’ ಎಂದು ಹೇಳಿ, ತಾನು ಒಪ್ಪಿಕೊಂಡಿರುವ ‘ಉತ್ತಮ’ ವಾಣಿಜ್ಯ ಒಪ್ಪಂದವನ್ನು ‘ಯಾವಾಗ ಬೇಕಾದರೂ ಬದಲಾಯಿಸಬಹುದು’ ಎಂದು ಎಚ್ಚರಿಕೆ ನೀಡಿದರು.
UK Prime minister- Donald Trump
ಯುಕೆ ಪ್ರಧಾನಿ- ಟ್ರಂಪ್online desk
Updated on

ಬ್ರಿಟನ್: ಇರಾನ್ ಮೇಲೆ ಅಮೆರಿಕ ನಡೆಸಿದ ದಾಳಿಗಳಿಗೆ ಯುನೈಟೆಡ್ ಕಿಂಗ್‌ಡಮ್ ಸೇರ್ಪಡೆಯಾಗದಿರುವ ನಿರ್ಧಾರವನ್ನು ಟೀಕಿಸಿದ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಇತ್ತೀಚಿನ ಹೇಳಿಕೆಗಳಿಗೆ ಬ್ರಿಟನ್ ಪ್ರಧಾನಮಂತ್ರಿ ಕಿಯರ್ ಸ್ಟಾರ್ಮರ್, ತಿರುಗೇಟು ನೀಡಿದ್ದಾರೆ.

ಕಳೆದ ವರ್ಷ ಒಪ್ಪಂದಗೊಂಡಿದ್ದ ವಾಣಿಜ್ಯ ಒಪ್ಪಂದವನ್ನು ಮರುಪರಿಶೀಲಿಸುವುದಾಗಿ ಟ್ರಂಪ್ ಈ ಬಾರಿ ಬೆದರಿಕೆ ಹಾಕಿದ್ದಾರೆ. ಮಂಗಳವಾರ ಸ್ಕೈ ನ್ಯೂಸ್‌ಗೆ ದೂರವಾಣಿ ಸಂದರ್ಶನ ನೀಡಿದ ಟ್ರಂಪ್, ಬ್ರಿಟನ್‌ನೊಂದಿಗೆ ಇರುವ ‘ವಿಶೇಷ ಸಂಬಂಧ’ ಹದಗೆಟ್ಟಿರುವುದು ‘ದುಃಖಕರ’ ಎಂದು ಹೇಳಿ, ತಾನು ಒಪ್ಪಿಕೊಂಡಿರುವ ‘ಉತ್ತಮ’ ವಾಣಿಜ್ಯ ಒಪ್ಪಂದವನ್ನು ‘ಯಾವಾಗ ಬೇಕಾದರೂ ಬದಲಾಯಿಸಬಹುದು’ ಎಂದು ಎಚ್ಚರಿಕೆ ನೀಡಿದ್ದರು.

ಟ್ರಂಪ್ ಅವರ ಈ ಹೊಸ ಬೆದರಿಕೆ ವಿಷಯವನ್ನು ಸಂಸತ್ತಿನ ಹೌಸ್ ಆಫ್ ಕಾಮನ್ಸ್‌ನಲ್ಲಿ ಪ್ರಸ್ತಾಪಿಸಲಾಯಿತು. ಲಿಬರಲ್ ಡೆಮಾಕ್ರಾಟ್ ಪಕ್ಷದ ನಾಯಕ ಎಡ್ ಡೇವಿ, ಇಂತಹ ದಾಳಿಗಳ ನಡುವೆ ರಾಜ ಚಾರ್ಲ್ಸ್ ಮೂರನೆಯವರ ಅಮೆರಿಕಾ ರಾಜ್ಯ ಭೇಟಿಯನ್ನು ಮುಂದುವರಿಸುವುದು ಎಷ್ಟು ಸರಿ ಎಂಬ ಪ್ರಶ್ನೆಯನ್ನು ಎತ್ತಿದರು. “ಇರಾನ್ ಯುದ್ಧದ ಬಗ್ಗೆ ನನ್ನ ನಿಲುವು ಆರಂಭದಿಂದಲೇ ಸ್ಪಷ್ಟವಾಗಿದೆ. ನಾವು ಈ ಯುದ್ಧಕ್ಕೆ ಎಳೆಯಲ್ಪಡುವುದನ್ನು ಒಪ್ಪುವುದಿಲ್ಲ. ಇದು ನಮ್ಮ ಯುದ್ಧವಲ್ಲ,” ಎಂದು ಸ್ಟಾರ್ಮರ್ ಸಂಸತ್ತಿನಲ್ಲಿ ಹೇಳಿದರು.

“ನನ್ನ ಮೇಲೆ ದಾರಿ ಬದಲಿಸುವಂತೆ ಅಪಾರ ಒತ್ತಡ ಹೇರಲಾಗಿದೆ. ಆದರೆ ನಾನು ನನ್ನ ನಿರ್ಧಾರವನ್ನು ಬದಲಿಸಲ್ಲ. ನಾನು ಹಿಂಜರಿಯಲ್ಲ. ಈ ಯುದ್ಧದಲ್ಲಿ ಸೇರುವುದು ನಮ್ಮ ರಾಷ್ಟ್ರೀಯ ಹಿತಾಸಕ್ತಿಗೆ ಅನುಕೂಲಕರವಲ್ಲ, ಹಾಗಾಗಿ ನಾವು ಅದರಲ್ಲಿ ಭಾಗವಹಿಸುವುದಿಲ್ಲ,” ಎಂದು ಅವರು ಹೇಳಿದರು.

ಯುದ್ಧವು ಏಪ್ರಿಲ್ 27ರಿಂದ ಆರಂಭವಾಗುವ ಬ್ರಿಟಿಷ್ ರಾಜಮನೆತನದ ಅಮೆರಿಕಾ ನಾಲ್ಕು ದಿನಗಳ ಭೇಟಿಗೆ ಯಾವುದೇ ಪರಿಣಾಮ ಬೀರುವುದಿಲ್ಲವೆಂದು ಅವರು ಮತ್ತಷ್ಟು ಸ್ಪಷ್ಟಪಡಿಸಿದರು. “ಈ ಭೇಟಿಯ ಉದ್ದೇಶ ಅಮೆರಿಕದ ಸ್ವಾತಂತ್ರ್ಯ ಮತ್ತು ನಮ್ಮ ಪರಸ್ಪರ ಸಂಬಂಧಗಳ 250ನೇ ವಾರ್ಷಿಕೋತ್ಸವವನ್ನು ಆಚರಿಸುವುದಾಗಿದೆ. ರಾಜಮನೆತನ ನಮ್ಮ ಎರಡು ದೇಶಗಳ ನಡುವಿನ ದೀರ್ಘಕಾಲದ ಬಾಂಧವ್ಯ ಮತ್ತು ಶಾಶ್ವತ ಸಂಬಂಧಗಳ ಮಹತ್ವದ ಸಂಕೇತವಾಗಿದೆ; ಈ ಬಾಂಧವ್ಯ ಯಾವಾಗಲಾದರೂ ಯಾವುದೇ ಹುದ್ದೆಯನ್ನು ಅಲಂಕರಿಸುವ ವ್ಯಕ್ತಿಗಿಂತಲೂ ಬಹಳ ದೊಡ್ಡದು,” ಎಂದು ಸ್ಟಾರ್ಮರ್ ಹೇಳಿದರು.

ಬಕ್ಕಿಂಗ್‌ಹ್ಯಾಮ್ ಅರಮನೆ, ರಾಜ ಚಾರ್ಲ್ಸ್ ಮತ್ತು ರಾಣಿ ಕ್ಯಾಮಿಲ್ಲಾ ಅವರ ಅಮೆರಿಕಾ ಪ್ರವಾಸದ ವಿವರಗಳನ್ನು ಪ್ರಕಟಿಸಿದ ನಂತರ ಈ ಮಾಹಿತಿ ಹೊರಬಿದ್ದಿದೆ. ಈ ಭೇಟಿಯು ವಾಷಿಂಗ್ಟನ್ ಡಿಸಿ, ನ್ಯೂಯಾರ್ಕ್ ಮತ್ತು ವರ್ಜೀನಿಯಾ ಪ್ರದೇಶಗಳನ್ನು ಒಳಗೊಂಡಂತೆ ಸ್ವಾತಂತ್ರ್ಯ ಘೋಷಣಾಪತ್ರಕ್ಕೆ ಸಹಿ ಹಾಕಿ 250 ವರ್ಷಗಳು ಪೂರ್ಣಗೊಳ್ಳುತ್ತಿರುವುದನ್ನು ಸ್ಮರಿಸುವ ಉದ್ದೇಶ ಹೊಂದಿದೆ.

"ಈ ಭೇಟಿ ನಮ್ಮ ಎರಡು ರಾಷ್ಟ್ರಗಳ ಹಂಚಿಕೊಂಡ ಇತಿಹಾಸವನ್ನು ಗುರುತಿಸಲು, ಆ ನಂತರದಿಂದ ಬೆಳೆದು ಬಂದಿರುವ ಆರ್ಥಿಕ, ಭದ್ರತಾ ಮತ್ತು ಸಾಂಸ್ಕೃತಿಕ ಸಂಬಂಧಗಳ ವ್ಯಾಪ್ತಿಯನ್ನು ಒತ್ತಿಹೇಳಲು, ಹಾಗೆಯೇ ಸಮುದಾಯಗಳನ್ನು ಒಂದಾಗಿಸುವ ಆಳವಾದ ಜನರ ನಡುವಿನ ಸಂಪರ್ಕಗಳನ್ನು ಪ್ರಸ್ತುತಪಡಿಸಲು ಒಂದು ಅವಕಾಶವಾಗಲಿದೆ," ಎಂದು ಅರಮನೆ ಪ್ರಕಟಿಸಿದೆ.

ವಾಷಿಂಗ್ಟನ್ ಡಿಸಿಯಲ್ಲಿ, ರಾಜಮನೆತನದ ದಂಪತಿಗೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಫಸ್ಟ್ ಲೇಡಿ ಮೆಲಾನಿಯಾ ಟ್ರಂಪ್ ಖಾಸಗಿ ಚಹಾ ಕೂಟದ ಮೂಲಕ ಅನೌಪಚಾರಿಕ ಸ್ವಾಗತ ನೀಡಲಿದ್ದು, ನಂತರ ಗಾರ್ಡನ್ ಪಾರ್ಟಿ ನಡೆಯಲಿದೆ. "ರಾಜ ಮತ್ತು ರಾಣಿಗೆ ಅಮೆರಿಕಾದ ಅಧಿಕೃತ ಸ್ವಾಗತ ಕಾರ್ಯಕ್ರಮದ ಭಾಗವಾಗಿ ವೈಟ್ ಹೌಸ್‌ನಲ್ಲಿ ಸಾಂಪ್ರದಾಯಿಕ ಸೈನಿಕ ಗೌರವ ಸಮಾರಂಭದೊಂದಿಗೆ ಅಧಿಕೃತ ಸ್ವಾಗತ ನೀಡಲಾಗುತ್ತದೆ. ರಾಜರು ಅಧ್ಯಕ್ಷರೊಂದಿಗೆ ದ್ವಿಪಕ್ಷೀಯ ಮಾತುಕತೆಯಲ್ಲಿ ಭಾಗವಹಿಸಲಿದ್ದು, ರಾಣಿ ಮತ್ತು ಫಸ್ಟ್ ಲೇಡಿ ಪ್ರತ್ಯೇಕವಾಗಿ ಭೇಟಿಯಾಗಲಿದ್ದಾರೆ," ಎಂದು ಬಕ್ಕಿಂಗ್‌ಹ್ಯಾಮ್ ಅರಮನೆ ತಿಳಿಸಿದೆ. ರಾಜ ಚಾರ್ಲ್ಸ್ ಅಮೆರಿಕಾ ಕಾಂಗ್ರೆಸ್‌ ಸಂಯುಕ್ತ ಅಧಿವೇಶನವನ್ನುದ್ದೇಶಿಸಿ ಭಾಷಣ ಮಾಡುವ ನಿರೀಕ್ಷೆಯಿದ್ದು, 1991ರಲ್ಲಿ ತನ್ನ ತಾಯಿ ರಾಣಿ ಎಲಿಜಬೆತ್ II ರಾಜ್ಯ ಭೇಟಿಯ ಸಂದರ್ಭದಲ್ಲಿ ನೀಡಿದ ಭಾಷಣದ ನಂತರ, ಅಮೆರಿಕಾ ಕಾಂಗ್ರೆಸ್‌ ಸಂಯುಕ್ತ ಸಭೆಯನ್ನುದ್ದೇಶಿಸಿ ಮಾತನಾಡುವ ಬ್ರಿಟಿಷ್ ರಾಜಮನೆತನದ ಸದಸ್ಯರಲ್ಲಿ ಅವರು ಎರಡನೇ ವ್ಯಕ್ತಿಯಾಗಲಿದ್ದಾರೆ.

UK Prime minister- Donald Trump
'ನಿಮ್ ಕಿತ್ತೋದ ನೌಕೆಗಳು ಇದ್ಯಲ್ಲಾ ಯುದ್ಧಕ್ಕೆ ಕಳಿಸ್ತೀರಾ?' ಅಂತ ಕೇಳಿದ್ದೆ; ಮ್ಯಾಕ್ರಾನ್ ಗೆ ಹೆಂಡ್ತಿ ಕಾಟ: ಬ್ರಿಟನ್, ಫ್ರಾನ್ಸ್ ಬಗ್ಗೆ ಟ್ರಂಪ್ ವ್ಯಂಗ್ಯ

ವಾಷಿಂಗ್ಟನ್ ಪ್ರವಾಸದ ಭಾಗವನ್ನು ವೈಟ್ ಹೌಸ್‌ನಲ್ಲಿ ನಡೆಯುವ ಸರ್ಕಾರಿ ಭೋಜನ ಕೂಟದೊಂದಿಗೆ ಮುಕ್ತಾಯಗೊಳಿಸಲಾಗುತ್ತದೆ. ನಂತರ, ನ್ಯೂಯಾರ್ಕ್‌ನಲ್ಲಿ ಸೆಪ್ಟೆಂಬರ್ 11 ದಾಳಿಗಳ ಸ್ಮಾರಕದಲ್ಲಿ ಶ್ರದ್ಧಾಂಜಲಿ ಸಲ್ಲಿಸುವುದರ ಜೊತೆಗೆ, ರಾಜವಂಶದವರು ಒಂದು ತಳಮಟ್ಟದ ಸಮುದಾಯ ಸಂಘಟನೆಯನ್ನು ಭೇಟಿ ಮಾಡುವ ಕಾರ್ಯಕ್ರಮವಿದೆ.

ವರ್ಜೀನಿಯಾದಲ್ಲಿ, ರಾಜ ಮತ್ತು ರಾಣಿ ಆ ಪ್ರದೇಶದ ಮೂಲ ನಿವಾಸಿ ಸಮುದಾಯಗಳಲ್ಲಿ ಒಂದರ ಸದಸ್ಯರನ್ನು, ಹಾಗು ಅಮೆರಿಕದ ನೈಸರ್ಗಿಕ ಪರಿಸರ ಸಂರಕ್ಷಣೆಗಾಗಿ ಕಾರ್ಯನಿರ್ವಹಿಸುತ್ತಿರುವ ಸಂರಕ್ಷಣಾ ಹೋರಾಟಗಾರರನ್ನು ಭೇಟಿಯಾಗಲಿದ್ದಾರೆ. ಅಮೆರಿಕದ ರಾಜ್ಯ ಭೇಟಿಯ ಅಂತ್ಯದಲ್ಲಿ, ಚಾರ್ಲ್ಸ್ ಮೇ 1 ಮತ್ತು 2ರಂದು ಬೆರ್ಮುಡಾಗೆ ತೆರಳಿ, ಬ್ರಿಟಿಷ್ ಓವರ್‌ಸೀಸ್ ಟೆರಿಟರಿಯೊಂದಕ್ಕೆ ಸ್ವಾಮಿಯಾಗಿ ಮಾಡುವ ತನ್ನ ಮೊದಲ ಭೇಟಿಯಲ್ಲಿ, ದ್ವೀಪ ಮತ್ತು ಬ್ರಿಟನ್ ನಡುವಿನ ‘ಸಂಸ್ಕೃತಿ, ಆರ್ಥಿಕ ಬೆಳವಣಿಗೆ ಮತ್ತು ಯುವಕರ ಅವಕಾಶ’ಗಳ ಸಂಬಂಧವನ್ನು ಆಚರಿಸಲಿದ್ದಾರೆ. “ರಾಜರು ಬೆರ್ಮುಡಾದಲ್ಲಿ ಹೊಸ ದೂರದರ್ಶಕ ಕೇಂದ್ರವನ್ನು ಸ್ಥಾಪಿಸುವ ಯೋಜನೆಗಳ ಬಗ್ಗೆ ತಿಳಿದುಕೊಳ್ಳಲು ಯುಕೆ ಸ್ಪೇಸ್ ಏಜೆನ್ಸಿಯ ಪ್ರತಿನಿಧಿಗಳನ್ನು ಕೂಡ ಭೇಟಿಯಾಗಲಿದ್ದಾರೆ. ಇದು ಬಾಹ್ಯಾಕಾಶ ಕಸದ ಹಾದಿ ಪತ್ತೆಹಚ್ಚುವ ಜಾಗತಿಕ ಪ್ರಯತ್ನಗಳ ಭಾಗವಾಗಿದ್ದು, ಅಂತರರಾಷ್ಟ್ರೀಯ ಬಾಹ್ಯಾಕಾಶ ಸ್ಥಿರತೆಯನ್ನು ಬೆಂಬಲಿಸುವ ಉದ್ದೇಶ ಹೊಂದಿದೆ,” ಎಂದು ಅರಮನೆ ಹೆಚ್ಚುವರಿಯಾಗಿ ತಿಳಿಸಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com